ಮಂಡ್ಯ: ಇಲ್ಲಿನ ಪಾಂಡವಪುರ ತಾಲೂಕಿನ ಕಟ್ಟೇರಿ ಗ್ರಾಮದಲ್ಲಿರುವ ರಾಣಿಚೆನ್ನಮ್ಮ ವಸತಿ ಶಾಲೆಯಲ್ಲಿ ಕಳೆದ ಡಿಸೆಂಬರ್ 15ರಂದು ಲೈಂಗಿಕ ಕಿರುಕುಳ (Sexual Harrassment) ನೀಡಲು ಬಂದಿದ್ದ ಶಿಕ್ಷಕನನ್ನು ವಿದ್ಯಾರ್ಥಿನಿಯರು ಅಟ್ಟಾಡಿಸಿ ಹೊಡೆದಿದ್ದ ಪ್ರಕರಣ ಸಂಬಂಧ ಈಗ ಆರೋಪಿ ಶಿಕ್ಷಕನನನು ಅಮಾನತು ಮಾಡಿ ಆದೇಶವನ್ನು ಹೊರಡಿಸಲಾಗಿದೆ. ಕಟ್ಟೇರಿ ಗ್ರಾಮದ ಪ್ರೌಢಶಾಲೆ ಹಾಗೂ ಹೆಣ್ಣು ಮಕ್ಕಳ ವಸತಿ ಶಾಲೆಯ ಉಸ್ತುವಾರಿ ಚಿನ್ಮಯಾನಂದ ಸದ್ಯ ಬಂಧನದಲ್ಲಿದ್ದು, ಆತನನ್ನು ಅಮಾನತು ಮಾಡಲಾಗಿದೆ.
ಮುಖ್ಯ ಶಿಕ್ಷಕ ಚಿನ್ಮಯಾನಂದ ಮೂರ್ತಿಯನ್ನು ಅಮಾನತು ಮಾಡಿ ಡಿಡಿಪಿಐ ಜವರೇಗೌಡ ಆದೇಶಿಸಿದ್ದಾರೆ. ಘಟನೆ ಬಳಿಕ ಶಿಕ್ಷಕನ ಅಮಾನತಿಗೆ ಒತ್ತಾಯಿಸಿ ಪೋಷಕರು ಶುಕ್ರವಾರ ಪ್ರತಿಭಟನೆ ನಡೆಸಿದರು. ಈಗಾಗಲೇ ಪೋಕ್ಸೊ ಕಾಯ್ದೆ ಅಡಿ ಶಿಕ್ಷಕನನ್ನು ಬಂಧಿಸಲಾಗಿದೆ.
ಏನಿದು ಪ್ರಕರಣ?
ಡಿ.೧೪ರ ಬುಧವಾರ ತಡರಾತ್ರಿ ವಸತಿ ಶಾಲೆಗೆ ಬಂದ ಶಿಕ್ಷಕ ಚಿನ್ಮಯಾನಂದ ಮೂರ್ತಿ, ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಜತೆಗೆ ಕೆಲ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದಾನೆ. ಶಿಕ್ಷಕನ ವರ್ತನೆಗೆ ರೊಚ್ಚಿಗೆದ್ದ ವಿದ್ಯಾರ್ಥಿನಿಯರು ತರಾಟೆಗೆ ತೆಗೆದುಕೊಂಡಿದ್ದು ಮಾತ್ರವಲ್ಲದೆ, ಕೈಗೆ ಸಿಕ್ಕ ದೊಣ್ಣೆ, ಪೊರಕೆಯಿಂದ ಧರ್ಮದೇಟು ಕೊಟ್ಟಿದ್ದಾರೆ. ವಿದ್ಯಾರ್ಥಿನಿಯರ ಏಟು ತಪ್ಪಿಸಿಕೊಳ್ಳಲು ಓಡಿ ಹೋಗಲು ಯತ್ನಿಸಿದ್ದಾಗ, ಹಾಸ್ಟೆಲ್ ಗೇಟ್ ಬಂದ್ ಮಾಡಿ ಮತ್ತಷ್ಟು ಥಳಿಸಿದ್ದಾರೆ. ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ವೇಳೆ ವಿದ್ಯಾರ್ಥಿನಿಯರು ಚೀರಾಟ, ಕೂಗಾಟ ಕೇಳಿ ಗ್ರಾಮಸ್ಥರು ಸ್ಥಳಕ್ಕಾಗಮಿಸಿದ್ದರು. ಬಳಿಕ ಪೊಲೀಸರಿಗೆ ವಿಷಯ ಮುಟ್ಟಿಸಿ ಕಿರುಕುಳ ನೀಡಿದ ಶಿಕ್ಷಕನನ್ನು ಖಾಕಿಗೆ ಒಪ್ಪಿಸಿದ್ದರು.
ಇದನ್ನೂ ಓದಿ | Bus accident | ರಸ್ತೆ ಗುಂಡಿಗೆ ಬಿದ್ದು ಬಸ್‌ನ ಆಕ್ಸಿಲ್ ಕಟ್!: ಮಕ್ಕಳ ಪ್ರವಾಸದ ಬಸ್‌ನಿಂದ ಕಳಚಿಕೊಂಡ ಚಕ್ರಗಳು