Site icon Vistara News

Shakti Scheme: ಸಿಎಂ ಸಿದ್ದರಾಮಯ್ಯಗೆ ಫ್ರೀ ಟಿಕೆಟ್ ಹಾರ ಅರ್ಪಣೆ; ಕಾನೂನು‌ ವಿದ್ಯಾರ್ಥಿನಿಯಿಂದ ವಿಭಿನ್ನವಾಗಿ ಕೃತಜ್ಞತೆ

Shakti Scheme

ಬೆಂಗಳೂರು: ಶಕ್ತಿ ಯೋಜನೆಯಿಂದ (Shakti Scheme) ರಾಜ್ಯದ ಕೋಟ್ಯಂತರ ಮಹಿಳೆಯರು ಸಾರಿಗೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿದ್ದು, ಯೋಜನೆ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ನಡುವೆ ಶಕ್ತಿ ಯೋಜನೆಯ ಸೌಲಭ್ಯ ಪಡೆಯುತ್ತಿರುವ ವಿದ್ಯಾರ್ಥಿನಿಯೊಬ್ಬರು, ಉಚಿತ ಪ್ರಯಾಣದ ಟಿಕೆಟ್‌ಗಳಿಂದ ಮಾಡಿದ ಹಾರದಿಂದ ಸಿಎಂ ಸಿದ್ದರಾಮಯ್ಯ ಅವರನ್ನು ವಿಭಿನ್ನ ರೀತಿಯಲ್ಲಿ ಸನ್ಮಾನಿಸಿರುವುದು ಗಮನ ಸೆಳೆದಿದೆ.

ಅರಸೀಕೆರೆಯ ಮೊದಲ ವರ್ಷದ ಕಾನೂನು ವಿದ್ಯಾರ್ಥಿನಿ ಎಂ.ಬಿ. ಜಯಶ್ರೀ, ತಾವು ಉಚಿತವಾಗಿ ಪ್ರಯಾಣಿಸಿದ ಫ್ರೀ ಬಸ್ ಟಿಕೆಟ್‌ಗಳಿಂದ ಮಾಡಿದ್ದ ಹಾರವನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಹಾಕಿ ಗೌರವಿಸಿದ್ದಾರೆ. ಹಾಸನ ಕಾಂಗ್ರೆಸ್‌ ಅಭ್ಯರ್ಥಿ ಶ್ರೇಯಸ್‌ ಪಾಟೀಲ್ ಪರ ಅರಸೀಕೆರೆಯಲ್ಲಿ ಪ್ರಚಾರ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೆರಳಿದ್ದಾಗ ವಿದ್ಯಾರ್ಥಿನಿ ಎಂ.ಬಿ. ಜಯಶ್ರೀ ಫ್ರೀ ಟಿಕೆಟ್ ಹಾರವನ್ನು ಸಿಎಂ ಅವರಿಗೆ ಅರ್ಪಿಸಿದ್ದಾರೆ.

ಇದನ್ನೂ ಓದಿ | Drought Relief: ಬರ ಪರಿಹಾರ ನೀಡಲು ಕೇಂದ್ರ ಒಪ್ಪಿಗೆ; ನಮ್ಮ ಹೋರಾಟಕ್ಕೆ ಮೊದಲ ಹಂತದ ಜಯ ಎಂದ ಸಿಎಂ

ಮುಖ್ಯಮಂತ್ರಿಗಳಿಗೆ ಹಾರ ಅರ್ಪಿಸುತ್ತಾ ಜಯಶ್ರೀ ಅವರು, “ನೀವು ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಸರ್ಕಾರ ಕೊಟ್ಟ ಉಚಿತ ಪ್ರಯಾಣದ ಫಲವಾಗಿ ನಾನು ಕಾನೂನು ವಿದ್ಯಾಭ್ಯಾಸವನ್ನು ನಿರಾತಂಕವಾಗಿ ಮಾಡಲು ಸಾಧ್ಯವಾಗಿದೆ. ಹೀಗಾಗಿ ಎಲ್ಲಾ ಫ್ರೀ ಟಿಕೆಟ್ ಗಳನ್ನು ಜೋಡಿಸಿಟ್ಟುಕೊಂಡು ಹಾರ ಮಾಡಿದ್ದೆ. ನಿಮಗೆ ಅರ್ಪಿಸುವುದಕ್ಕೆ ತಿಂಗಳುಗಳಿಂದ ಅವಕಾಶಕ್ಕಾಗಿ ಕಾಯುತ್ತಿದ್ದೆ. ಇವತ್ತು ಅರಸೀಕೆರೆಗೆ ಬರ್ತಾ ಇದ್ದೀರಿ ಅಂತ ಗೊತ್ತಾಯ್ತು. ಒಂದೇ ಉಸಿರಲ್ಲಿ ಹಾರ ಹಿಡ್ಕೊಂಡು ಓಡಿ ಬಂದಿದ್ದೇನೆ” ಎನ್ನುತ್ತಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧನ್ಯವಾದ ಸಲ್ಲಿಸಿ ಆಶೀರ್ವಾದ ಪಡೆದಕೊಂಡರು.

ಸಿಎಂ ಸಿದ್ದರಾಮಯ್ಯ ಸಂತಸ

ವಿದ್ಯಾರ್ಥಿನಿ ಉಚಿತ ಟಿಕೆಟ್‌ಗಳ ಹಾರ ಹಾಕಿರುವುದಕ್ಕೆ ಸಿಎಂ ಸಿದ್ದರಾಮಯ್ಯ ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅವರು ಟ್ವೀಟ್‌ ಮಾಡಿದ್ದು, ಅರಸೀಕೆರೆಯ ವಿದ್ಯಾರ್ಥಿನಿ ಇಂದು ನನ್ನ ಕೊರಳಿಗೆ ಹಾಕಿದ ಉಚಿತ ಬಸ್ ಟಿಕೆಟ್ ಗಳ ಮಾಲೆ ಆಕೆ ವ್ಯಕ್ತಪಡಿಸಿದ ಕೃತಜ್ಞತೆಯ ಮಾಲೆಯೂ ಹೌದು, ನಮ್ಮ ಸರ್ಕಾರದ ಸಾಧನೆಯ ಮಾಲೆಯೂ ಹೌದು, ಬಹುಷ: ಇದು ಈ ಚುನಾವಣೆಯ ವಿಜಯಮಾಲೆಯೂ ಇರಬಹುದೇನೋ?
ಅರಸೀಕೆರೆಯಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ನನ್ನ ಕಡೆ ಏದುಸಿರುಬಿಡುತ್ತಾ ಓಡೋಡಿ ಬಂದ ಕಾನೂನು ವಿದ್ಯಾರ್ಥಿನಿ ಜಯಶ್ರೀ ತಾನು ಉಚಿತವಾಗಿ ಪ್ರಯಾಣಿಸಿದ್ದ ಬಸ್ ಟಿಕೆಟ್ ಗಳಲ್ಲಿಯೇ ಮಾಡಿಟ್ಟಿದ್ದ ಮಾಲೆಯನ್ನು ತಂದು ಹಾಕಿ ಕೃತಜ್ಞತೆ ಹೇಳಿದಳು.

‘’ನೀವು ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟಿದ್ದರಿಂದ ನಾನು ಕಾನೂನು ವ್ಯಾಸಂಗವನ್ನು ಸುಗಮವಾಗಿ ನಡೆಸುವಂತಾಗಿದೆ. ಎಂದಾದರೂ ನೀವು ಸಿಕ್ಕರೆ ಮಾಲೆ ಮಾಡಿ ಹಾಕಬೇಕೆಂದು ಉಚಿತ ಟಿಕೆಟ್ ಗಳನ್ನು ಸಂಗ್ರಹಿಸಿಟ್ಟಿದೆ. ನೀವು ಇಲ್ಲಿ ಬರುವುದು ಗೊತ್ತಾಗಿ ಅವುಗಳನ್ನು ಮಾಲೆ ಕಟ್ಟಿ ತಂದೆ’’ ಎಂದು ಹೇಳಿದ ಅವಳ ಮಾತುಗಳಲ್ಲಿ ಕೃತಜ್ಞತೆಯೂ ಇತ್ತು, ಸರ್ಕಾರದ ಬಗ್ಗೆ ಹೆಮ್ಮೆಯೂ ಇತ್ತು.

‘ಕಾನೂನು ವ್ಯಾಸಂಗ ಮುಗಿಸಿ ಒಳ್ಳೆಯ ವಕೀಲಳಾಗಿ ಸಮಾಜದ ಸೇವೆ ಮಾಡು, ಗ್ಯಾರಂಟಿ ಯೋಜನೆಗಳಿಂದ ಹೆಣ್ಣುಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂದು ಆರೋಪಮಾಡುವ ದಾರಿ ತಪ್ಪಿದ ಜನರಿಗೆ ಸರಿಯಾದ ದಾರಿ ತೋರಿಸುವವಳಾಗು’ ಎಂದು ಹಾರೈಸಿದೆ ಎಂದು ತಿಳಿಸಿದ್ದಾರೆ.

Exit mobile version