ಬೆಂಗಳೂರು: ರಾಜ್ಯದ ಎಲ್ಲ ಮಹಿಳೆಯರಿಗೂ ಕಾಂಗ್ರೆಸ್ ಗ್ಯಾರಂಟಿ (Congress Guarantee) ಯೋಜನೆಯಂತೆ ಉಚಿತ ಬಸ್ (Free Bus) ಪ್ರಯಾಣವುಳ್ಳ ಶಕ್ತಿ ಯೋಜನೆಗೆ ಇಂದು ಭಾನುವಾರ (ಜೂನ್ 11) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಚಾಲನೆ ನೀಡಲಿದ್ದಾರೆ. ಈ ಉಚಿತ ಪ್ರಯಾಣಕ್ಕೆ ಏಳು ಕಂಡೀಷನ್ ಅನ್ನು ಈಗಾಗಲೇ ಹಾಕಲಾಗಿದೆ. ಯಾವ ಬಸ್‌ಗಳಲ್ಲಿ ಮಾತ್ರ ಉಚಿತ ಪ್ರಯಾಣ, ಸ್ಮಾರ್ಟ್ ಕಾರ್ಡ್ ಪಡೆಯುವುದು ಎಲ್ಲಿ? ಅದಕ್ಕೆ ಏನೇನು ಬೇಕು? ಸ್ಮಾರ್ಟ್ ಕಾರ್ಡ್ ವಿತರಣೆ ಪ್ರಕ್ರಿಯೆ ಯಾವಾಗ? ಅಲ್ಲಿಯವರೆಗೆ ಏನು ಬೇಕು? ಎಂಬ ಬಗ್ಗೆ ಇಲ್ಲಿದೆ ವಿವರ.
ರಾಜ್ಯ ಸರ್ಕಾರದ 5 ಗ್ಯಾರಂಟಿಯಲ್ಲೊಂದಾದ “ಶಕ್ತಿ” ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ಸಿಗುತ್ತಿದ್ದು, ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮಧ್ಯಾಹ್ನ 12 ಗಂಟೆಗೆ ಟಿಕೆಟ್ ನೀಡುವ ಮೂಲಕ ಚಾಲನೆ ನೀಡಲಿದ್ದಾರೆ. ಇದಕ್ಕಾಗಿ ಈಗಾಗಲೇ 2 ವಿಶೇಷ ಬಸ್ ಅನ್ನು ಸಹ ವಿಧಾನಸೌಧದ ಮುಂಭಾಗಕ್ಕೆ ತರಿಸಿಕೊಳ್ಳಲಾಗಿದೆ. ಇದರಲ್ಲಿ ಸಿಎಂ ಸಿದ್ದರಾಮಯ್ಯ ಪ್ರಯಾಣ ಮಾಡಲಿದ್ದಾರೆ. ಮೊದಲು ವಿಧಾನಸೌಧದ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಳಿಕ ಬಸ್ಸಿನಲ್ಲಿ ಪ್ರಯಾಣ ಬೆಳೆಸಲಿದ್ದು, ವಿಧಾನಸೌಧದಿಂದ ಎಂಜಿ ರೋಡ್, ಕೆ.ಆರ್. ಸರ್ಕಲ್ ಕಡೆ ಹೋಗಿ ಪುನಃ ವಿಧಾನಸೌಧಕ್ಕೆ ವಾಪಸ್ ಬರಲಿದ್ದಾರೆ. ಹೀಗಾಗಿ ಅಧಿಕಾರಿಗಳು ಬಸ್‌ಗಳ ಟ್ರಯಲ್ ಚೆಕ್ ನಡೆಸಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸಹ ಜತೆಗಿರಲಿದ್ದಾರೆ.
ಇದನ್ನೂ ಓದಿ: Housing Scheme: ʼಆಶ್ರಯʼಕ್ಕಾಗಿ ಇದ್ದ ಮನೆ ಕೆಡವಿದ; ಗ್ರಾಪಂ ಕಳ್ಳಾಟಕ್ಕೆ ಬಡವ ಕಂಗಾಲು, ಈಗ ಬಯಲೇ ಆಲಯ!
ನಾಲ್ಕು ನಿಗಮಗಳಲ್ಲಿ ಏಕ ಕಾಲಕ್ಕೆ ಚಾಲನೆ
ಶಕ್ತಿ ಯೋಜನೆಗೆ ನಾಲ್ಕು ನಿಗಮಗಳಲ್ಲಿ ಏಕ ಕಾಲಕ್ಕೆ ಚಾಲನೆ ದೊರೆಯಲಿದೆ. ಸಿಎಂ ಸಿದ್ದರಾಮಯ್ಯ ಚಾಲನೆ ಕೊಡುವ ಸಮಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಆಯಾ ಜಿಲ್ಲೆಗಳಲ್ಲಿ ಗ್ರೀನ್ ಸಿಗ್ನಲ್ ಸಿಗಲಿದೆ.
ಸದ್ಯ ಪ್ರಯಾಣಕ್ಕೆ ಏನು ದಾಖಲೆ ಬೇಕು?
ಮಹಿಳೆಯರು ಈ ಉಚಿತ ಪ್ರಯಾಣಕ್ಕಾಗಿ ಆಧಾರ್ ಕಾರ್ಡ್, ವೋಟರ್ ಐಡಿ, ಚಾಲನಾ ಪರವಾನಗಿ, ವಾಸಸ್ಥಳ ನಮೂದಾಗಿರುವ ಗುರುತಿನ ಚೀಟಿ, ವಿಶೇಷಚೇತನ, ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ನೀಡಿರುವ ಗುರುತಿನ ಪತ್ರ ಇಲ್ಲವೇ ಇವುಗಳಲ್ಲಿ ಯಾವುದಾದರೂ ಒಂದು ಗುರುತಿನ ಪತ್ರವನ್ನು ಭೌತಿಕವಾಗಿ ಅಥವಾ ಡಿಜಿಲಾಕರ್‌ನಲ್ಲಿ ಇಟ್ಟುಕೊಂಡು ಹೋಗಬೇಕು. ನೀವು ತೋರಿಸುವ ಗುರುತಿನ ಚೀಟಿಗಳಲ್ಲಿ ನಿಮ್ಮ ಫೋಟೋ ಮತ್ತು ವಾಸಸ್ಥಳವು ಕಡ್ಡಾಯವಾಗಿ ನಮೂದಾಗಿರಬೇಕು. ಸ್ಮಾರ್ಟ್ ಕಾರ್ಡ್ ದೊರೆಯುವವರೆಗೆ ಮಾತ್ರ ಈ ನಿಯಮ ಜಾರಿಯಲ್ಲಿರಲಿದೆ.
ಸ್ಮಾರ್ಟ್ ಕಾರ್ಡ್ ಎಲ್ಲಿ ದೊರೆಯುತ್ತದೆ?
ಸ್ಮಾರ್ಟ್ ಕಾರ್ಡ್ ಸಲ್ಲಿಕೆಗೆ ಮೊದಲು ಅರ್ಜಿ ಸಲ್ಲಿಸಬೇಕು. ಆದರೆ, ಸರ್ಕಾರ ಇನ್ನೂ ಇದಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿಲ್ಲ. ಅರ್ಜಿ ನಮೂನೆ ಸಿದ್ಧವಾದ ಬಳಿಕ ಸಂಬಂಧಪಟ್ಟ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಲಿದೆ. ಇದು ಬಹುತೇಕ ಜುಲೈ ತಿಂಗಳಿನಲ್ಲಿ ಲಭ್ಯವಾಗಬಹುದು ಎಂದು ಮೂಲಗಳು ತಿಳಿಸಿವೆ. ಬಳಿಕ ಸಾರ್ವಜನಿಕರು ಸ್ಮಾರ್ಟ್ ಕಾರ್ಡ್‌ಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಇದಕ್ಕಾಗಿ ಸಮೀಪದ ಸೇವಾಸಿಂಧು ಪೋರ್ಟಲ್ ಮೂಲಕ ಅಗತ್ಯ ದಾಖಲೆ ಸಲ್ಲಿಸಿ ಅರ್ಜಿ ಸಲ್ಲಿಸಬಹುದು. ಆದರೆ, ಈ ಸ್ಮಾರ್ಟ್ ಕಾರ್ಡ್ ಉಚಿತವೋ ಅಥವಾ ಅದಕ್ಕೆ ಹಣ ಕಟ್ಟಬೇಕೋ ಎಂಬ ಬಗ್ಗೆ ಇನ್ನೂ ನಿಖರ ಮಾಹಿತಿ ಇಲ್ಲ.
ಯಾರಿಗೆಲ್ಲ ಉಚಿತ?
6 ರಿಂದ 12 ವರ್ಷದೊಳಗಿನ ಬಾಲಕಿಯರು, ಮಹಿಳೆಯರು, ಲೈಂಗಿಕ ಅಲ್ಪಸಂಖ್ಯಾತರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಆದರೆ, ಇವರು ಕರ್ನಾಟಕದ ಪ್ರಜೆಗಳಾಗಿರಬೇಕು. ಅಂಥವರಿಗೆ ಮಾತ್ರ ಉಚಿತ ಪ್ರಯಾಣದ ಸೌಲಭ್ಯ ಸಿಗುತ್ತದೆ. ಆದರೆ, ಅಂತಾರಾಜ್ಯಕ್ಕೆ ಇಲ್ಲಿ ಉಚಿತ ಪ್ರಯಾಣ ಇರುವುದಿಲ್ಲ. ರಾಜ್ಯದೊಳಗೆ ಯಾವುದೇ ದೂರದ ಮಿತಿಯನ್ನು ಹಾಕಲಾಗಿಲ್ಲ. ಹಾಗಾಗಿ ರಾಜ್ಯದ ಎಲ್ಲಿ ಬೇಕಾದರೂ ಸಂಚರಿಸಬಹುದು.
ದಾಖಲೆ ಏನಿರಬೇಕು ಎಂಬ ಬಗ್ಗೆ ವಿಡಿಯೊ ಇಲ್ಲಿದೆ
ಇದನ್ನೂ ಓದಿ: Viral News: ತೊಪ್ಪೆಯಾಗುವಂತೆ ಮಳೆ ಹೊಯ್ಯಲೆಂದು ಕಪ್ಪೆಗಳ ಕಟ್ಟಿಕೊಂಡು ಬಂದು ತಾಳಿ ಕಟ್ಟಿದ ಗ್ರಾಮಸ್ಥರು!
ಐಷಾರಾಮಿ ಬಸ್‌ಗಳಲ್ಲಿ ಇಲ್ಲ ಸೇವೆ
ನಾಲ್ಕೂ ಸಾರಿಗೆ ನಿಗಮಗಳ ಸಾಮಾನ್ಯ ಬಸ್‌ಗಳಲ್ಲಿ ಮಾತ್ರ ಈ ಉಚಿತ ಸೇವೆ ಲಭ್ಯವಿದೆ. ಐರಾವತ, ರಾಜಹಂಸ, ಎಸಿ ಸ್ಲೀಪರ್, ನಾನ್ ಎಸಿ ಸ್ಲೀಪರ್, ವಜ್ರ, ವಾಯುವಜ್ರ ಸೇರಿದಂತೆ ಇನ್ನಿತರ ಐಷಾರಾಮಿ ಬಸ್‌ಗಳನ್ನು ಹೊರತುಪಡಿಸಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ.