Site icon Vistara News

Opposition Meet: ಪಕ್ಷ ಒಡೆದ ಬಳಿಕ ಶರದ್‌ ಪವಾರ್‌ ನಿರಾಸಕ್ತಿ? ಪ್ರತಿಪಕ್ಷಗಳ ಹೈವೋಲ್ಟೇಜ್ ಸಭೆಯಿಂದ ದೂರ

Sharad Pawar And Mallikarjun Kharge

Sharad Pawar to not participate in the joint opposition meeting in Bengaluru

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಶತಾಯ ಗತಾಯ ಬಿಜೆಪಿಯನ್ನು ಸೋಲಿಸಲು ರಣತಂತ್ರ, ಲೋಕಸಭೆ ಚುನಾವಣೆಯಲ್ಲಿ ಸೀಟು ಹಂಚಿಕೆ, ಪ್ರತಿಪಕ್ಷಗಳ ಒಗ್ಗಟ್ಟು ಸೇರಿ ಹಲವು ಅಜೆಂಡಾ ಇಟ್ಟುಕೊಂಡು ಸೋಮವಾರ ಬೆಂಗಳೂರಿನಲ್ಲಿ ಆರಂಭವಾಗುವ ಎರಡು ದಿನಗಳ ಪ್ರತಿಪಕ್ಷಗಳ ಸಭೆಯಲ್ಲಿ (Opposition Meet) ಪಾಲ್ಗೊಳ್ಳದಿರಲು ಎನ್‌ಸಿಪಿ ಮುಖ್ಯಸ್ಥ ಅಜಿತ್‌ ಪವಾರ್‌ ನಿರಾಸಕ್ತಿ ತೋರಿದ್ದಾರೆ. ಅವರು ಸಭೆಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಎನ್‌ಸಿಪಿ ವಕ್ತಾರರೊಬ್ಬರು ಖಚಿತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಅವರು ಮಂಗಳವಾರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂಬ ಮಾತುಗಳು ಕೂಡ ಕೇಳಿಬಂದಿವೆ.

ಎನ್‌ಸಿಪಿ ಈಗ ಒಡೆದ ಮನೆಯಾಗಿದೆ. ಅಜಿತ್‌ ಪವಾರ್‌ ಅವರು ಹತ್ತಾರು ಶಾಸಕರನ್ನು ಕರೆದುಕೊಂಡು ಹೋಗಿ ಬಿಜೆಪಿ-ಶಿವಸೇನೆ ಮೈತ್ರಿ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದಾರೆ. ಇದರಿಂದಾಗಿ ಅಜಿತ್‌ ಪವಾರ್‌ ಅವರ ಜಂಗಾಬಲವೇ ಹುದುಗಿ ಹೋಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಪಕ್ಷದಲ್ಲೇ ಒಗ್ಗಟ್ಟಿಲ್ಲ, ಕೆಲವೇ ಕೆಲವು ಶಾಸಕರು ಈಗ ಎನ್‌ಸಿಪಿಯಲ್ಲಿ ಉಳಿದಿದ್ದಾರೆ. ಉಳಿದವರೆಲ್ಲರೂ ಅಧಿಕಾರದ ಆಸೆಗೆ ಮೈತ್ರಿ ಸರ್ಕಾರದ ಜತೆ ನಿಂತಿದ್ದಾರೆ. ಇದರಿಂದಾಗಿ ಪ್ರತಿಪಕ್ಷಗಳ ಸಭೆಯಲ್ಲಿ ಪಾಲ್ಗೊಳ್ಳಲು ಅಜಿತ್‌ ಪವಾರ್‌ ಅವರು ನಿರಾಸಕ್ತಿ ತೋರಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರಿನಲ್ಲಿ ಹೈ ವೋಲ್ಟೇಜ್‌ ಸಭೆ

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸೊಮವಾರದಿಂದ ಸಭೆ ಆರಂಭವಾಗಲಿದ್ದು, ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. 24 ಪಕ್ಷಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಇಷ್ಟೂ ಪಕ್ಷಗಳಲ್ಲಿ 150 ಸಂಸದರಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಸೀಟು ಹಂಚಿಕೆ ಮಾಡಿಕೊಂಡು, ಬಿಜೆಪಿಯನ್ನು ಕಟ್ಟಿಹಾಕುವುದು ರಣತಂತ್ರವಾಗಿದೆ. ಇನ್ನು ಪ್ರತಿಪಕ್ಷಗಳ ಸಭೆ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್‌ ಚುರುಕಾಗಿದ್ದು, ಸಭೆ ಬಳಿಕ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ನಾಯಕರಿಗಾಗಿ ವಿಶೇಷ ಔತಣ ಕೂಟ ಆಯೋಜಿಸಿದ್ದಾರೆ. ಮಮತಾ ಬ್ಯಾನರ್ಜಿ, ಉದ್ಧವ್‌ ಠಾಕ್ರೆ, ಅಖಿಲೇಶ್‌ ಯಾದವ್‌, ಅರವಿಂದ್‌ ಕೇಜ್ರಿವಾಲ್‌, ನಿತೀಶ್‌ ಕುಮಾರ್‌ ಸೇರಿ ಹಲವು ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಸೋಮವಾರ ಔಪಚಾರಿಕ ಸಭೆ ನಡೆಯಲಿದ್ದು, ಮಂಗಳವಾರದ ಸಭೆ ಪ್ರಮುಖವಾಗಿದೆ ಎಂದು ಮೂಲಗಳು ತಿಳಿಸಿವೆ.

ರಣತಂತ್ರ ರೂಪಿಸಿದ ಬಿಜೆಪಿ

ಪ್ರತಿಪಕ್ಷಗಳು ನಡೆಸುವ ದಿನದಂದೇ ಅಂದರೆ, ಜುಲೈ 18ರಂದು ಎನ್‌ಡಿಎ ಕೂಡ ಮೈತ್ರಿ ಪಕ್ಷಗಳ ಸಭೆ ನಡೆಸಲು ತೀರ್ಮಾನಿಸುವ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಈಗಾಗಲೇ ಸಭೆಯಲ್ಲಿ ಭಾಗವಹಿಸುವಂತೆ ಲೋಕ ಜನಶಕ್ತಿ ಪಕ್ಷದ (ರಾಮ್‌ವಿಲಾಸ್‌ ಪಾಸ್ವಾನ್) ನಾಯಕ ಚಿರಾಗ್‌ ಪಾಸ್ವಾನ್‌ ಅವರನ್ನು ಆಹ್ವಾನಿಸಿದೆ. ಇನ್ನು, ಉತ್ತರ ಪ್ರದೇಶದಲ್ಲಿ ಓಂ ಪ್ರಕಾಶ್ ರಾಜಭರ್ ಅವರ ಸುಹೇಲ್​ದೇವ್​ ಭಾರತೀಯ ಸಮಾಜ ಪಕ್ಷ (Suheldev Bharatiya Samaj Party-SBSP) ಮತ್ತೆ ಎನ್​ಡಿಎ ಒಕ್ಕೂಟವನ್ನು ಸೇರಿಕೊಂಡಿದೆ. ಸಭೆಗೂ ಮುನ್ನವೇ ಬಿಜೆಪಿಗೆ ಸಿಕ್ಕ ಮುನ್ನಡೆ ಇದಾಗಿದೆ. ಎನ್‌ಡಿಎ ಮೈತ್ರಿಕೂಟಕ್ಕೆ ಹೊಸ ಪಕ್ಷಗಳ ಸೇರ್ಪಡೆ, ಮೈತ್ರಿಕೂಟದಲ್ಲಿ ಒಗ್ಗಟ್ಟು, ಪ್ರತಿಪಕ್ಷಗಳಿಗೆ ತಿರುಗೇಟು ಸೇರಿ ಹಲವು ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಶಕ್ತಿ ಪ್ರದರ್ಶನ

ಎನ್‌ಡಿಎಗೆ 30 ಪಕ್ಷಗಳ ಬೆಂಬಲವಿದ್ದರೆ, ಪ್ರತಿಪಕ್ಷಗಳ ಒಕ್ಕೂಟದಲ್ಲಿ 24 ಪಕ್ಷಗಳಿವೆ. ಹಾಗಾಗಿ, ಸೋಮವಾರದಿಂದ ಆರಂಭವಾಗುವ ಪ್ರತಿಪಕ್ಷಗಳ ಸಭೆ ಹಾಗೂ ಮಂಗಳವಾರ ನಡೆಯುವ ಎನ್‌ಡಿಎ ಸಭೆಯು ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗಿವೆ. ಪ್ರತಿಪಕ್ಷಗಳ ಒಕ್ಕೂಟದಲ್ಲಿ ಕಾಂಗ್ರೆಸ್, ಟಿಎಂಸಿ, ಸಿಪಿಐ, ಸಿಪಿಐ(ಎಂ), ಎನ್‌ಸಿಪಿ(ಶರದ್ ಪವಾರ್ ಬಣ), ಸಂಯುಕ್ತ ಜನತಾ ದಳ, ಡಿಎಂಕೆ, ಆಪ್, ಜೆಎಂಎಂ, ಶಿವಸೇನಾ( ಉದ್ಧವ್ ಠಾಕ್ರೆ ಬಣ), ರಾಷ್ಟ್ರೀಯ ಜನತಾ ದಳ, ಸಮಾಜವಾದಿ ಪಾರ್ಟಿ, ನಾಷನಲ್ ಕಾನ್ಫರೆನ್ಸ್, ಪಿಡಿಪಿ, ಸಿಪಿಐ(ಎಂಎಲ್), ಆರ್‌ಎಲ್‌ಡಿ, ಐಯುಎಂಎಲ್, ಕೇರಳ ಕಾಂಗ್ರೆಸ್ (ಎಂ), ಎಂಡಿಎಂಕೆ, ವಿಸಿಕೆ, ಆರ್‌ಎಸ್‌ಪಿ, ಕೇರಳ ಕಾಂಗ್ರೆಸ್, ಕೆಎಂಡಿಕೆ, ಎಐಎಫ್‌ಬಿ ಇವೆ.

ಇದನ್ನೂ ಓದಿ: Opposition Meet: ಪ್ರತಿಪಕ್ಷಗಳ ಬೆಂಗಳೂರು ಸಭೆಗೆ ಕಿಮ್ಮತ್ತಿಲ್ಲ: ಮೋದಿಯನ್ನು ಸೋಲಿಸುವುದು ಅಸಾಧ್ಯ ಎಂದ ಬಿಜೆಪಿ

ಲೋಕಸಭೆ ಚುನಾವಣೆಯಲ್ಲಿ ಒಗ್ಗಟ್ಟು ಪ್ರದರ್ಶಿಸಿ, ಬಿಜೆಪಿಯನ್ನು ಸೋಲಿಸುವ ದಿಸೆಯಲ್ಲಿ ಜೂನ್‌ 23ರಂದು ಬಿಹಾರದ ಪಟನಾದಲ್ಲಿ ಮೊದಲ ಬಾರಿಗೆ ಪ್ರತಿಪಕ್ಷಗಳ ಸಭೆ ನಡೆದಿತ್ತು. ಬಿಹಾರ ಸಿಎಂ ನಿತೀಶ್‌ ಕುಮಾರ್‌ ನೇತೃತ್ವದಲ್ಲಿ ಸಭೆ ನಡೆದಿತ್ತು. ಇದರಲ್ಲಿ ಹಲವು ಪ್ರತಿಪಕ್ಷಗಳ ನಾಯಕರು ಪಾಲ್ಗೊಂಡು, ಒಗ್ಗಟ್ಟಿನ ಮಂತ್ರ ಜಪಿಸಿದ್ದರು. ಈಗ ಎರಡನೇ ಸಭೆ ನಡೆಯುತ್ತಿದ್ದು, ಇಲ್ಲೂ ಒಗ್ಗಟ್ಟು, ರಣತಂತ್ರ, ಇನ್ನಷ್ಟು ಹೊಸ ಪಕ್ಷಗಳನ್ನು ಸೆಳೆಯುವುದು ಸೇರಿ ಹಲವು ವಿಷಯಗಳ ಕುರಿತು ಚರ್ಚಿಸಲಾಗುತ್ತದೆ ಎಂದು ತಿಳಿದುಬಂದಿದೆ.

Exit mobile version