ಬೆಂಗಳೂರು: ಉಗ್ರ ಚಟುವಟಿಕೆ ಆರೋಪದಲ್ಲಿ ಬಂಧಿತರಾಗಿರುವ ಶಿವಮೊಗ್ಗದ ಸಿದ್ಧೇಶ್ವರ ನಗರದ ಸೈಯದ್ ಯಾಸಿನ್ ಮತ್ತು ಮಂಗಳೂರಿನ ಮಾಜ್ ಮುನೀರ್ ಅಹಮ್ಮದ್, ತೀರ್ಥಹಳ್ಳಿಯ ಸೊಪ್ಪು ಗುಡ್ಡೆಯ ಕಿಂಗ್‌ಪಿನ್ ಶಾರಿಕ್ ಸೂಚನೆ ಮೇರೆಗೆ ಉಗ್ರ ಚಟುವಟಿಕೆ(Shivamogga terror) ನಡೆಸುತಿದ್ದರು ಎಂದು ಪೊಲೀಸರ ವಿಚಾರಣೆ ವೇಳೆ ತಿಳಿದುಬಂದಿದೆ. ಅಲ್ಲದೆ, ಕಿಂಗ್‌ಪಿನ್ ಶಾರಿಕ್ ತಲೆಮರೆಸಿಕೊಂಡಿರುವ ಉಗ್ರ ಮತೀನ್ ಜತೆ ನಿಕಟ ಸಂಪರ್ಕ ಹೊಂದಿದ್ದ ಎನ್ನಲಾಗಿದೆ.
ನೇರವಾಗಿ ಉಗ್ರಸಂಘಟನೆ ಜತೆ ಸಂಪರ್ಕ ಹೊಂದಿರುವ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಮೂಲದ ಮತೀನ್ ಸುಳಿವು ನೀಡಿದವರಿಗೆ ಹತ್ತು ಲಕ್ಷ ರೂಪಾಯಿ ಬಹುಮಾನವನ್ನು ಈಗಾಗಲೇ ಎನ್‌ಐಎ ಘೋಷಿಸಿದೆ. ಆದರೆ ಮತೀನ್ ತಲೆಮರೆಸಿಕೊಂಡು ಎರಡು ವರ್ಷವೇ ಕಳೆದಿವೆ. ಇದೀಗ ಈತನ ಜತೆ ಶಾರಿಕ್ ನಿಕಟ ಸಂಪರ್ಕ ಹೊಂದಿದ್ದಾನೆ ಎನ್ನಲಾಗಿದ್ದು, ತಲೆಮರೆಸಿಕೊಂಡಿರುವ ಶಾರಿಕ್ ಹಾಗೂ ಮತೀನ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಬಂಧಿತ ಆರೋಪಿಗಳಾದ ಸೈಯದ್ ಯಾಸಿನ್ ಮತ್ತು ಮಾಜ್ ಮುನೀರ್ ಅಹಮ್ಮದ್ ಬಾಂಬ್ ಸ್ಫೋಟ ಸೇರಿ ಹಲವು ದುಷ್ಕೃತ್ಯಗಳಲ್ಲಿ ಭಾಗಿಯಾಗಿರುವ ಶಂಕೆ ಇದ್ದು, ಐಸಿಸ್ ಜತೆಗೂ ನಂಟು ಹೊಂದಿರುವ ಸಾಧ್ಯತೆ ಕಂಡುಬಂದಿದೆ.
ಇದನ್ನೂ ಓದಿ | Shivamogga terror | ಗುರುಪುರ ಹೊಳೆ ಬದಿಯಲ್ಲಿ ಬಾಂಬ್ ತಯಾರಿಸುತ್ತಿದ್ದರು, ಮಂಗಳೂರಲ್ಲೂ ಮಹಜರು