Site icon Vistara News

Shelter gumbaz | ಬಹಿರಂಗ ಹೇಳಿಕೆ ನೀಡದಂತೆ ಪ್ರತಾಪ್‌ಸಿಂಹ, ರಾಮದಾಸ್‌ಗೆ ನಳಿನ್‌ ಖಡಕ್‌ ವಾರ್ನಿಂಗ್‌

Pratap simha vs ramdas clash

ಬೆಂಗಳೂರು: ಮೈಸೂರಿನ ಬಸ್‌ ಶೆಲ್ಟರ್‌ ವಿವಾದಕ್ಕೆ ಸಂಬಂಧಿಸಿದಂತೆ ಪರಸ್ಪರ ಕಚ್ಚಾಟ ನಡೆಸುತ್ತಿರುವ ಮೈಸೂರು-ಕೊಡಗು ಸಂಸದ ಪ್ರತಾಪ್‌ ಸಿಂಹ ಮತ್ತು ಕೃಷ್ಣರಾಜ ಶಾಸಕ ಎಸ್‌.ಎ. ರಾಮದಾಸ್‌ ಅವರಿಬ್ಬರಿಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರು ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ʻʻನಿಮ್ಮಿಬ್ಬರ ವೈಯಕ್ತಿಕ ಜಗಳದಿಂದ ಪಕ್ಷದ ವರ್ಚಸ್ಸಿಗೆ ಹಾನಿಯಾಗುತ್ತಿದೆ. ಹಾಗಾಗಿ ಯಾವ ಕಾರಣಕ್ಕೂ ಇನ್ನು ಮುಂದೆ ಬಹಿರಂಗವಾಗಿ ಇದರ ಬಗ್ಗೆ ಜಗಳ ಆಡಬಾರದುʼʼ ಎಂದು ನಳಿನ್‌ ಕುಮಾರ್‌ ಕಟೀಲ್‌ ಎಚ್ಚರಿಸಿದ್ದಾರೆ.

ʻʻಸರ್ಕಾರ ನಿರ್ಧಾರ ಮಾಡುವವರೆಗೂ ಅನಗತ್ಯ ಗೊಂದಲ ಸೃಷ್ಟಿ ಮಾಡಬೇಡಿ. ಪಕ್ಷಕ್ಕೆ ಮುಜುಗರ ಆಗುವ ಹೇಳಿಕೆ ಕೊಡಬೇಡಿʼʼ ಎಂದು ಕಟೀಲ್‌ ತಾಕೀತು ಮಾಡಿದ್ದಾರೆ. ಉಭಯ ನಾಯಕರಿಗೂ ದೂರವಾಣಿ ಕರೆ ಮಾಡಿ ಅವರು ಮಾತನಾಡಿದರು.

ಬಸ್‌ ನಿಲ್ದಾಣ ಸಮಿತಿ ರಚನೆಗೆ ಸಿಎಂ ಸೂಚನೆ
ಈ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಜ್ಞರ ಸಮಿತಿ ರಚನೆಗೆ ಸೂಚನೆ ನೀಡುವ ಮೂಲಕ ವಿವಾದವನ್ನು ತಣ್ಣಗೆಗೊಳಿಸುವ ಪ್ರಯತ್ನ ನಡಸಿದರು. ತಜ್ಞರ ಸಮಿತಿಯ ವರದಿಯಂತೆ ಬಸ್‌ ನಿಲ್ದಾಣ ರಚಿಸಿ ಎಂದು ಹೇಳಿದ್ದಾರೆ. ಆದರೆ, ಶಾಸಕ ಮತ್ತು ಸಂಸದರ ಜಟಾಪಟಿ ಬಗ್ಗೆ ಅವರು ಏನನ್ನೂ ಹೇಳಲಿಲ್ಲ. ಭಿನ್ನಾಭಿಪ್ರಾಯಕ್ಕಿಂತ ಯಾವುದು ಸರಿ ಅನ್ನೋದು ಮುಖ್ಯ ಎಂದಷ್ಟೇ ಅವರು ಪ್ರತಿಕ್ರಿಯಿಸಿದ್ದಾರೆ.

ತಾರಕಕ್ಕೇರಿದ ಜಗಳ
ಕಳೆದ ಕೆಲವು ದಿನಗಳಿಂದ ಒಳಗಿಂದೊಳಗೆ ಕುದಿಯುತ್ತಿದ್ದ ಪ್ರತಾಪ್‌ ಮತ್ತು ರಾಮದಾಸ್‌ ನಡುವಿನ ಜಗಳ ಗುರುವಾರ ಒಮ್ಮಿಂದೊಮ್ಮೆಗೇ ಸ್ಫೋಟಗೊಂಡಿತು. ಪ್ರತಾಪ್‌ ಸಿಂಹ ಅವರು ತಮ್ಮನ್ನು ಪಕ್ಷದಿಂದ ಹೊರ ಹಾಕಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ರಾಮದಾಸ್‌ ಅವರು ಪರೋಕ್ಷವಾಗಿ ಆರೋಪಿಸಿದರು. ಒಂದು ವೇಳೆ ಬಸ್‌ ನಿಲ್ದಾಣ ಕಟ್ಟಿದ್ದು ತಪ್ಪಾಗಿದೆ ಎಂದಾದರೆ ಅದರ ಖರ್ಚನ್ನು ತಾವೇ ಭರಿಸುವುದಾಗಿ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪ್ರತಾಪ್‌ ಸಿಂಹ ಅವರು, ರಾಮದಾಸ್‌ ಅವರ ಬಳಿ ನನ್ನನ್ನು ಸುಟ್ಟುಹಾಕುವಷ್ಟು ದುಡ್ಡಿದೆ. ಅವರ ತಾಕತ್ತಿನ ಮುಂದೆ ನಾನೆಲ್ಲಿ, ಮೋದಿ ಅವರಿಂದಲೇ ಬೆನ್ನು ತಟ್ಟಿಸಿಕೊಂಡಿರುವ ರಾಮದಾಸ್‌ ಅವರನ್ನು ಪಕ್ಷದಿಂದ ಹೊರಹಾಕಲು ನಾನ್ಯಾರು ಎಂದು ಕೇಳಿದರು. ಜತೆಗೆ ಹೆದ್ದಾರಿ ನಿರ್ಮಿಸಿದ ಕೆಆರ್‌ಡಿಐಎಲ್‌ ರೂಪಿಸಿದ ನಕ್ಷೆಯನ್ನು ಶಾಸಕರ ಆಪ್ತಸಹಾಯಕ ಮುದ್ದುಕೃಷ್ಣ ಬದಲಿಸಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ | Shelter gumbaz | ಮೂಲ ನಕ್ಷೆಯಲ್ಲಿ ಗೋಪುರ ಇಲ್ಲವೇ ಇಲ್ಲ! ಶಾಸಕ ರಾಮದಾಸ್‌ ಆಪ್ತ ಸಹಾಯಕ ಬದಲಾಯಿಸಿದರೇ?

Exit mobile version