Site icon Vistara News

Shelter gumbaz| ರಾಮದಾಸ್‌ ಬಳಿ ನನ್ನನ್ನು ಸುಟ್ಟು ಹಾಕುವಷ್ಟು ಹಣವಿದೆ: ಪ್ರತಾಪ್‌ ಸಿಂಹ ತೀವ್ರ ವಾಗ್ದಾಳಿ

ಮೈಸೂರು: ಬಹಳ ಹಿಂದಿನಿಂದಲೂ ಇರುವ ಸಂಸದ ಪ್ರತಾಪ್‌ ಸಿಂಹ ಮತ್ತು ಶಾಸಕ ರಾಮದಾಸ್‌ ನಡುವಿನ ವೈಯಕ್ತಿಕ ವೈಷಮ್ಯ ಈಗ ಬಸ್‌ ಶೆಲ್ಟರ್‌ ವಿವಾದದ ಬಳಿಕ ತಾರಕಕ್ಕೇರಿದೆ. ಪ್ರತಾಪ್‌ ಸಿಂಹ ಅವರು ತನ್ನನ್ನು ಪಕ್ಷದಿಂದ ಓಡಿಸಲು ಯತ್ನಿಸುತ್ತಿದ್ದಾರೆ ಎಂದು ರಾಮದಾಸ್‌ ಅವರು ಗುರುವಾರ ಪರೋಕ್ಷ ಆರೋಪ ಮಾಡಿದ ಬೆನ್ನಿಗೇ ಸಿಡಿದದ್ದ ಪ್ರತಾಪ್‌ ಸಿಂಹ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಶೆಲ್ಟರ್‌ನ ವಿನ್ಯಾಸವನ್ನೇ ತಿರುಚಲಾಗಿದೆ, ಶಾಸಕರ ಆಪ್ತ ಕಾರ್ಯದರ್ಶಿಯ ಕೈವಾಡ ಇದರಲ್ಲಿದೆ ಎಂದು ದೂರಿದ್ದಾರೆ. ಒಂದು ವೇಳೆ ತಪ್ಪಾಗಿದ್ದರೆ ಅದರ ವೆಚ್ಚವನ್ನು ಭರಿಸಲು ತಾನು ಸಿದ್ಧ ಎಂದು ರಾಮದಾಸ್‌ ಹೇಳಿಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಪ್ರತಾಪ್‌ ಸಿಂಹ ಅವರು ʻರಾಮದಾಸ್‌ ಅವರ ಬಳಿ ನನ್ನನ್ನು ಸುಟ್ಟುಹಾಕುವಷ್ಟು ದುಡ್ಡಿದೆʼ ಎಂದು ಕುಟುಕಿದ್ದಾರೆ.

ಪ್ರತಾಪ್‌ ಸಿಂಹ ಅವರ ವಾಗ್ಬಾಣಗಳು

*ವಿನ್ಯಾಸವನ್ನೇ ಬದಲಿಸಿದ ಶಾಸಕರ ಆಪ್ತ
ಕೆ.ಆರ್.ಡಿ.ಸಿ.ಎಲ್.ನವರು ಅನುಮೋದಿಸಿ ವಿನ್ಯಾಸಗೊಳಿಸಿದ ರೀತಿಯಲ್ಲಿ ಬಸ್ ನಿಲ್ದಾಣ ನಿರ್ಮಾಣ ಆಗಿಲ್ಲ. ಕೆ.ಆರ್.ಡಿ.ಸಿ.ಎಲ್. ಅ‌‌ನುಮೋದಿತ ವಿನ್ಯಾಸ ನೀಡಿದ ನಂತರ ಶಾಸಕರ ಆಪ್ತ ಕಾರ್ಯದರ್ಶಿಯಿಂದ ಹೊಸ ವಿನ್ಯಾಸಕ್ಕೆ ಆದೇಶಿಸಿದ್ದಾರೆ. ಶಾಸಕರ ಆಪ್ತ ಕಾರ್ಯದರ್ಶಿಗೆ ಈ ಅಧಿಕಾರ ಕೊಟ್ಟವರಾರು? ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಕೆಲಸ ನಿಲ್ಲಿಸುವಂತೆ ಎರಡು ಬಾರಿ ಸೂಚಿಸಿದ್ದರೂ ಯಾಕೆ ಕೆಲಸ ನಿಲ್ಲಿಸಿಲ್ಲ.

* ನಾನು ಆದೇಶಿಸುವಂತಿಲ್ಲ, ಕಾದು ನೋಡುತ್ತೇನೆ
ಸಂಸದನಾಗಿ ನಾನು ಯಾರಿಗೂ ಆದೇಶ ಮಾಡುವ ಹಾಗಿಲ್ಲ. ನಾನು ಕೇವಲ ಶಿಫಾರಸು ಮಾಡಬಹುದೇ ಹೊರತು ಆದೇಶಿಸುವಂತಿಲ್ಲ. ಸಾರ್ವಜನಿಕರ ತೆರಿಗೆ ಹಣದಲ್ಲಿ ಇದರ ನಿರ್ಮಾಣ ಆಗಿದೆ. ಇದು ಅತ್ಯಂತ ಸೂಕ್ಷ್ಮ ವಿಚಾರವಾಗಿದೆ. ನಾನು ಗಡುವು ಕೊಟ್ಟಿದ್ದು ನಿಜ. ಆದರೆ ಜಿಲ್ಲಾಧಿಕಾರಿಗಳು ಪರಾಮರ್ಶೆಗೆ ಕಾಲಾವಕಾಶ ನೀಡಿದ್ದಾರೆ.
ಹಾಗಾಗಿ ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತ ಯಾವ ಕ್ರಮ ಕೈಗೊಳ್ಳತ್ತದೋ ಕಾದು ನೋಡುತ್ತೇನೆ.

*ನನ್ನನ್ನು ಸುಟ್ಟುಹಾಕುವಷ್ಟು ದುಡ್ಡಿದೆ
ಶಾಸಕ ರಾಮದಾಸ್ ಅವರ ಬಳಿಯಿರುವ ಹಣದಿಂದ ನನ್ನನ್ನು ಸುಟ್ಟು ಹಾಕಬಹುದು. ನಾವ್ಯಾರು ಅವರಿಗೆ ಕಿರುಕುಳ ಕೊಡಲು? ಅಷ್ಟೊಂದು ತಾಕತ್ತಿರುವವರಿಗೆ ಕಿರುಕುಳ ಕೊಡಲು ಸಾಧ್ಯವೇ?

*ಪ್ರಧಾನಿ ಮೋದಿಯವರಿಂದ ಬೆನ್ನು ತಟ್ಟಿಸಿಕೊಂಡವರಲ್ವೇ?
ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಮೈಸೂರಿಗೆ ಬಂದಿದ್ದಾಗ ಅವರ ಬೆನ್ನು ತಟ್ಟಿದ್ದರು. ಅವರು ಪಕ್ಷದ ಅತ್ಯಂತ ಹಿರಿಯ‌ ನೇತಾರ. ಪಕ್ಷ ಬಿಡಿಸಲು ನನಗೆ ಕಿರುಕುಳ ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಅವರು ಯಾವ ಕಾರಣಕ್ಕೆ ಹೀಗೆ ಹೇಳಿದ್ದಾರೋ ಗೊತ್ತಿಲ್ಲ. ಅವರಿಗೆ ಕಿರುಕುಳ ಕೊಡುವಷ್ಟು ನಾವು ದೊಡ್ಡವರಾಗಿ ಬೆಳೆದಿಲ್ಲ.

* ಇವರೂ ಗುಂಬಜ್‌ ಬಿದ್ದ ಮೇಲೆಯೇ ಶಾಸಕರಾದವರು
ಬಸ್ ನಿಲ್ದಾಣದ ಗೋಪುರ ಗುಂಬಜ್ ರೀತಿ ಕಾಣುತ್ತಿದೆ. ಇದನ್ನು ಕೆಡವಿದರೆ ಟಿಪ್ಪು ಅನುಯಾಯಿಗಳಿಗೆ ನೋವಾಗಬಹುದು. ಶಿವಾಜಿ ಮಹಾರಾಜರ ಅನುಯಾಯಿಗಳಿಗಲ್ಲ. ರಾಮದಾಸ್ ಅವರು 29 ವರ್ಷದ ಹಿಂದೆ ಪಕ್ಷದ ಶಾಸಕರಾದವರು. ಅಯೋಧ್ಯೆಯಲ್ಲಿ ಗುಂಬಜ್ ಬಿದ್ದ ಮೇಲೆ ರಾಮದಾಸ್ ಅವರು ಪಕ್ಷ ಸೇರಿದವರು.
ಹೀಗಾಗಿ ಗುಂಬಜ್ ಮಾದರಿ ಬಸ್ ಶೆಲ್ಟರ್ ತೆರವಿನಿಂದ ಅವರಿಗೆ ನೋವಾಗುತ್ತದೆ ಎಂಬುದನ್ನು ನಂಬಲಾರೆ.

ಇದನ್ನೂ ಓದಿ | Shelter gumbaz | ಪಕ್ಷ ಬಿಡಿಸಲು ಕಿರುಕುಳ ನೀಡಲಾಗ್ತಿದೆ, ದಯವಿಟ್ಟು ನನ್ನ ಬಿಟ್ಟುಬಿಡಿ ಎಂದು ಕಣ್ಣೀರಿಟ್ಟ ರಾಮದಾಸ್‌

Exit mobile version