Site icon Vistara News

Shelter gumbaz | ಕಣ್ಣೀರು ಹಾಕದಂತೆ ಶಾಸಕ ರಾಮದಾಸ್‌ಗೆ ಸಲಹೆ ನೀಡಿದ ಮಾಜಿ ಸಿಎಂ ಕುಮಾರಸ್ವಾಮಿ!

Kumaraswamy ಕಣ್ಣೀರು

ಮೈಸೂರು: ಸಣ್ಣ ಭಾವನಾತ್ಮಕ ವಿಚಾರ ಎದುರಾದರೂ ಭಾವುಕರಾಗಿ ಕಣ್ಣೀರು ಸುರಿಸುವ ಮೂಲಕ ʻಟಿಯರ್‌ ಸ್ಟಾರ್‌ʼ ಎಂದೇ ಟ್ರೋಲ್‌ಗೆ ಒಳಗಾಗುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರೇ ರಾಜಕಾರಣಿಗಳು ಕಣ್ಣೀರು ಹಾಕಿದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ! ಇದು ಮೈಸೂರಿನಲ್ಲಿ ನಡೆಯುತ್ತಿರುವ ಬಸ್‌ ಶೆಲ್ಟರ್‌ಗೆ (Shelter gumbaz) ಸಂಬಂಧಿಸಿದ ವಿಷಯ. ಬಸ್‌ ಶೆಲ್ಟರ್‌ ಮೇಲೆ ಗುಂಬಜ್‌ ಆಕಾರದ ನಿರ್ಮಾಣಗಳನ್ನು ಮಾಡಲಾಗಿದೆ ಎಂದು ಸಂಸದ ಪ್ರತಾಪ ಸಿಂಹ ಸಿಟ್ಟಿಗೆದ್ದಿದ್ದರು. ಆರಂಭದಲ್ಲಿ ಹಿಂದು-ಮುಸ್ಲಿಂ ಕೋನದಲ್ಲಿದ್ದ ಇದು ಬಳಿಕ ಸಂಸದ ಪ್ರತಾಪ್‌ ಸಿಂಹ ಮತ್ತು ಶಾಸಕ ಎಸ್‌.ಎ. ರಾಮದಾಸ್‌ ನಡುವಿನ ವೈಯಕ್ತಿಕ ವೈಷಮ್ಯದ ಮಟ್ಟಕ್ಕೆ ಬಂದು ನಿಂತಿದೆ. ಇದು ಬಿಜೆಪಿಗೂ ಮುಜುಗರ ತಂದಿದೆ.

ಗುರುವಾರ ಈ ಇಬ್ಬರು ನಾಯಕರು ಪರಸ್ಪರ ಬೈದಾಡಿಕೊಂಡಿದ್ದರು. ಬೆಳಗ್ಗೆ ಮಾತನಾಡಿದ ರಾಮದಾಸ್‌ ತನ್ನನ್ನು ಬಿಜೆಪಿಯಿಂದ ಹೊರದಬ್ಬಲು ಪ್ರಯತ್ನ ನಡೆಯುತ್ತಿದೆ ಎಂದು ಸಂಸದ ಪ್ರತಾಪ್‌ ಸಿಂಹ ಅವರ ಮೇಲೆ ರೇಗಿದ್ದರು. ಜತೆಗೆ ಬಸ್‌ ಶೆಲ್ಟರ್‌ ವಿಚಾರದಲ್ಲಿ ನನ್ನನ್ನು ಏನೂ ಕೇಳಬೇಡಿ ಪ್ಲೀಸ್‌ ಎಂದು ಕೈಮುಗಿದು ಕಣ್ಣೀರು ಹಾಕಿದ್ದರು. ಅದಕ್ಕೆ ಬಳಿಕ ಪ್ರತಾಪ್‌ ಸಿಂಹ ತಿರುಗೇಟು ಕೂಡಾ ನೀಡಿದ್ದರು.

ಈ ಪ್ರಕರಣದಲ್ಲಿ ಕಣ್ಣೀರಿನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ ಮಾಜಿ ಸಿಎಂ ಕುಮಾರಸ್ವಾಮಿ. ಜೆಡಿಎಸ್‌ನ ಪಂಚ ರತ್ನ ಯಾತ್ರೆ ಉದ್ಘಾಟನೆಗಾಗಿ ಆಗಮಿಸಿರುವ ಅವರು ಮಾಧ್ಯಮಗಳ ಜತೆ ಮಾತನಾಡಿದರು.

ʻʻಶಾಸಕರೇ ಕಣ್ಣೀರಿಟ್ಟರೆ ಅವರಿಗೆ ಮತ ಕೊಟ್ಟ ಜನರ ಗತಿ ಏನು? ಬಿಜೆಪಿ ಶಾಸಕರು ಕಣ್ಣೀರು ಹಾಕಿರುವುದನ್ನು ನಾನು ನೋಡಿದ್ದೇನೆ. ಸಂಸದರು ಕಣ್ಣೀರು ಹಾಕಿಸಿರುವುದನ್ನು ಗಮನಿಸಿದ್ದೇನೆ.‌ ಹೀಗಿದ್ದರೆ ಇವರಿಗೆ ಮತ ನೀಡಿದ ಜನರ ಕತೆ ಏನುʼʼ ಎಂದು ಪ್ರಶ್ನಿಸಿದ್ದಾರೆ. ಅಂತಿಮವಾಗಿ, ʻʻಮಸೀದಿಯನ್ನಾದರೂ ಮಾಡಿ, ಗೋಪುರವನ್ನಾದರೂ ಮಾಡಿ.
ಜನರಿಗೆ ನೆರಳು ಕೊಡಿ. ಕೆಡಹುವ ಕೆಲಸ ಮಾಡಬೇಡಿʼʼ ಎಂದು ಮಾಜಿ ಸಿಎಂ ಎಚ್‌ಡಿಕೆ ಸಲಹೆ ನೀಡಿದ್ದಾರೆ.

ಮಾಜಿ ಸಿಎಂ ಕುಮಾರಸ್ವಾಮಿ ಅವರು ಸಭೆ ಸಮಾರಂಭಗಳಲ್ಲೇ ಕಣ್ಣೀರು ಹಾಕುತ್ತಾರೆ, ತಾವೊಬ್ಬ ಭಾವುಕ ವ್ಯಕ್ತಿ ಎನ್ನುತ್ತಾರೆ. ಅವರು ಕರ್ಚೀಫ್‌ಗೆ ವಿಕ್ಸ್‌ ಹಾಕಿಕೊಂಡು ಬಂದು ಅಳುತ್ತಾರೆ ಎಂದು ಪ್ರತಿಪಕ್ಷಗಳು ಲೇವಡಿ ಮಾಡುತ್ತಾರೆ. ಆದರೆ, ಒಬ್ಬ ವ್ಯಕ್ತಿಯ ಭಾವುಕತೆಯನ್ನು ಲೇವಡಿ ಮಾಡಬಾರದು ಎನ್ನುತ್ತಾರೆ ಜನ. ಈಗ ಕುಮಾರಸ್ವಾಮಿ ಅವರೇ ರಾಮದಾಸ್‌ ಕಣ್ಣೀರಿಗೆ ಪ್ರತಿಕ್ರಿಯೆ ನೀಡಿದ್ದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ | Shelter gumbaz | ಪಕ್ಷ ಬಿಡಿಸಲು ಕಿರುಕುಳ ನೀಡಲಾಗ್ತಿದೆ, ದಯವಿಟ್ಟು ನನ್ನ ಬಿಟ್ಟುಬಿಡಿ ಎಂದು ಕಣ್ಣೀರಿಟ್ಟ ರಾಮದಾಸ್‌

Exit mobile version