ಶಿವಮೊಗ್ಗ: ಶಿವಮೊಗ್ಗದ ಉಪ್ಪಾರಕೇರಿಯಲ್ಲಿ ಪ್ರೇಮ್ ಸಿಂಗ್ (೨೨) ಎಂಬಾತನ ಮನೆ ಎದುರು ನಿಂತಿದ್ದಾಗ ದುಷ್ಕರ್ಮಿಗಳು ಚೂರಿಯಿಂದ ಇರಿದ ಘಟನೆ ಬೆನ್ನಿಗೇ ಪ್ರವೀಣ್ ಎಂಬ ಇನ್ನೊಬ್ಬನ ಮೇಲೆ ಚೂರಿ ಇರಿತವಾಗಿದೆ ಎಂಬ ವದಂತಿಗಳು ಹರಡಿವೆ. ಆದರೆ, ಇದು ನಿಜವಲ್ಲ ಎಂದು ತಿಳಿದುಬಂದಿದೆ. ಒಂದು ಘಟನೆ ಬೆನ್ನಿಗೇ ಇನ್ನೊಂದು ಘಟನೆಯ ಸುದ್ದಿ ಹರಡುವುದು ಸಹಜವಾಗಿದ್ದು, ಇದು ಸತ್ಯವಲ್ಲ ಎಂದು ತಿಳಿದುಬಂದಿದೆ. ಸದ್ಯಕ್ಕೆ ಪ್ರೇಮ್ ಸಿಂಗ್ ಮೇಲೆ ಮಾತ್ರ ದಾಳಿ ನಡೆದಿರುವುದು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಅಮೀರ್ ಅಹಮದ್ ವೃತ್ತದಲ್ಲಿದ್ದ ಹಿಂದೂ ಯುವಕರು ಸಾವರ್ಕರ್ ಅವರ ಪ್ಲೆಕ್ಸ್‌ನ್ನು ಹಾಕಿದ್ದರು. ಇದು ಅಲ್ಲಿನ ಸ್ಥಳೀಯ ಯುವಕರನ್ನು ಕೆರಳಿಸಿದ್ದು, ಅವರು ಟಿಪ್ಪು ಫ್ಲೆಕ್ಸ್ ಹಾಕಲು ಮುಂದಾಗಿದ್ದರು. ಇದರಿಂದ ಎರಡೂ ಗುಂಪುಗಳ ನಡುವೆ ಘರ್ಷಣೆ ಉಂಟಾಗಿದೆ. ಅದರನ್ನು ತಡೆಯಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಈಗ ಸ್ಥಳದಲ್ಲಿ ಸೆಕ್ಷನ್ ೧೪೪ ಹಾಕಲಾಗಿದೆ. ಆದರೆ, ಜನ ಸಂದಣಿ ಇನ್ನೂ ಕರಗುತ್ತಿಲ್ಲ. ಎರಡೂ ಕೋಮಿನವರಿಗೆ ಫ್ಲೆಕ್ಸ್ ಹಾಕಲು ಅವಕಾಶ ನೀಡಲಾಗುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.