ಶಿವಮೊಗ್ಗ: ಇಲ್ಲಿ ಅಮೀರ್ ಅಹಮದ್ ವೃತ್ತದಲ್ಲಿ ನಡೆದ ಫ್ಲೆಕ್ಸ್ ವಿವಾದ ಹಾಗೂ ಬಳಿಕ ನಗರದ ಎರಡು ಕಡೆಗಳಲ್ಲಿ ಪ್ರೇಮ್ ಮತ್ತು ಪ್ರವೀಣ್ ಎಂಬಿಬ್ಬರ ಮೇಲೆ ನಡೆದ ಚೂರಿ ಇರಿತ ಪ್ರಕರಣಗಳ ಬಳಿಕ ಪರಿಸ್ಥಿತಿ ಉದ್ವಿಗ್ನವಾಗಿದೆ. ಈ ಹಿನ್ನೆಲೆಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲು ಹೆಚ್ಚುವರಿ ಪೊಲೀಸ್ ಪಡೆಯನ್ನು ಕರೆಸಿಕೊಳ್ಳಲಾಗಿದೆ.
ಪೂರ್ವ ವಲಯದ ಐಜಿಪಿ ತ್ಯಾಗರಾಜನ್ ಅವರು ಶಿವಮೊಗ್ಗಕ್ಕೆ ದೌಡಾಯಿಸಿದ್ದು, ಶಿವಮೊಗ್ಗ ಎಸ್ ಪಿ ಲಕ್ಷ್ಮಿ ಪ್ರಸಾದ್ ರೊಂದಿಗೆ ಚರ್ಚೆ ನಡೆಸಿದ್ದಾರೆ. ಇದೀಗ ನಗರದ ಆಯಕಟ್ಟಿನ ಪ್ರದೇಶದಲ್ಲಿರುವ ಅಂಗಡಿಗಳನ್ನು ಮುಚ್ಚಿಸಲು ಸೂಚನೆ ನೀಡಲಾಗಿದೆ. ಎಲ್ಲರೂ ಮನೆಗಳಿಗೆ ಹೋಗುವಂತೆ ಪೊಲೀಸರು ಸೂಚನೆ ನೀಡುತ್ತಿದ್ದಾರೆ. ಅಮಾಯಕರ ಮೇಲೆ ದಾಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಯಾರೂ ಪೇಟೆಯಲ್ಲಿ ನಿಲ್ಲದಂತೆ ಪೊಲೀಸರು ಸೂಚಿಸುತ್ತಿದ್ದಾರೆ.
ಘಟನೆ ಕುರಿತು ಮಾಹಿತಿ ಪಡೆದ ಐಜಿಪಿ ಅವರು, ಜಿಲ್ಲೆಯಾದ್ಯಂತ ಕಟ್ಟೇಚ್ಚರ ವಹಿಸುವಂತೆ ಪೊಲೀಸರಿಗೆ ಸೂಚನೆ ನೀಡಿದರಲ್ಲದೆ, ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಪರಿಶೀಲನೆಗೆ ಆದೇಶಿಸಿದರು. ರಾತ್ರಿ ವೇಳೆ ಗಸ್ತು ತಿರುಗಲು ಖಡಕ್ ಸೂಚನೆ ನೀಡಿದ್ದು, ಆಯ ಕಟ್ಟಿದ ಸ್ಥಳಗಳಲ್ಲಿ ಬ್ಯಾರಿಕೇಡ್ ಹಾಕಿ ವಾಹನಗಳ ಪರಿಶೀಲನೆ ನಡೆಸಲು ಹೇಳಿದ್ದಾರೆ. ಅನಗತ್ಯ ಸಂಚಾರವನ್ನು ನಿರ್ಬಂಧಿಸಲು ಸೂಚಿಸಲಾಗಿದೆ.
ಎಲ್ಲೆಲ್ಲ ಅಂಗಡಿ ಮುಂಗಟ್ಟು ಬಂದ್?
ಪೊಲೀಸರು ಜನನಿಬಿಡ ಪ್ರದೇಶದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸುತ್ತಿದ್ದಾರೆ. ಹಲವೆಡೆ ಲಾಠಿ ಬೀಸಿ ಜನರನ್ನು ಚದುರಿಸುತ್ತಿದ್ದಾರೆ. ಗಾಂಧಿ ನಗರ, ಬಿಎಚ್ ರಸ್ತೆ, ನೆಹರು ರಸ್ತೆ, ಗಾರ್ಡನ್ ಏರಿಯಾ ಮತ್ತಿತರ ಪ್ರದೇಶಗಳು ಸಂಪೂರ್ಣ ಬಂದ್ ಆಗಿದೆ. ಬಂದೋಬಸ್ತಗೆ ಹೆಚ್ಚುವರಿ ತುಕಡಿ ನಿಯೋಜನೆಗೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ಎಸ್ಪಿ ಬಿ ಎಂ ಲಕ್ಷ್ಮಿಪ್ರಸಾದ ಹೇಳಿಕೆ ನೀಡಿದ್ದಾರೆ.
ನಾಲ್ಕು ದಿನಗಳ ಕಾಲ ಸೆಕ್ಷನ್ ಜಾರಿ
ಸದ್ಯ ಪರಿಸ್ಥಿತಿಯನ್ನು ನಿಯಂತ್ರಿಸುವುದಕ್ಕಾಗಿ ನಾಲ್ಕು ದಿನಗಳ ಕಾಲ ಸೆಕ್ಷನ್ ೧೪೪ ಜಾರಿ ಮಾಡಲಾಗಿದೆ. ಪರಿಸ್ಥಿತಿ ಅವಲೋಕಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಿವಮೊಗ್ಗ ಡಿಸಿ ಡಾ.ಸೆಲ್ವಮಣಿ ಹೇಳಿದ್ದಾರೆ.
ಇದನ್ನೂ ಓದಿ| Shimogga tense | ಹಿಂಸಾಚಾರ ಇತರ ಕಡೆಗಳಿಗೆ ಹರಡುವ ಭಯ, ಭದ್ರಾವತಿಯಲ್ಲೂ ಸೆಕ್ಷನ್ 144 ಜಾರಿ