ಶಿವಮೊಗ್ಗ: ಸಾವರ್ಕರ್ ಫ್ಲೆಕ್ಸ್ ಹೆಸರಲ್ಲಿ ಹುಟ್ಟಿಕೊಂಡ ಹಿಂದು-ಮುಸ್ಲಿಂ ತಂಡಗಳ ನಡುವಿನ ಜಟಾಪಟಿಯ ಬಳಿಕ ನಡೆದ ಚೂರಿ ಇರಿತದಲ್ಲಿ ಗಾಯಗೊಂಡಿದ್ದ ಪ್ರೇಮ್ ಸಿಂಗ್ ಅವರ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಅಮೀರ್ ಅಹಮದ್ ವೃತ್ತದಲ್ಲಿ ನಡೆದ ಜಗಳದ ಬೆನ್ನಿಗೇ ಶಿವಮೊಗ್ಗದ ಗಾಂಧಿ ಬಜಾರ್ ಸಮೀಪದ ಉಪ್ಪಾರಕೇರಿಯಲ್ಲಿ ಮನೆಯ ಹೊರಗಡೆ ನಿಂತಿದ್ದ ಪ್ರೇಮ್ ಕುಮಾರ್‌ಗೆ ದುಷ್ಕರ್ಮಿಗಳು ಚೂರಿಯಿಂದ ಇರಿದಿದ್ದರು. ಯಾವ ವಿಚಾರಕ್ಕೂ ಹೋಗದೆ ತನ್ನ ಪಾಡಿಗೆ ಮನೆಯಲ್ಲೇ ಇದ್ದ ಅಮಾಯಕನ ಮೇಲಿನ ಈ ದಾಳಿ ಆತಂಕ ಸೃಷ್ಟಿಸಿತ್ತು. ಅವರನ್ನು ಕೂಡಲೇ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಪ್ರೇಮ್ ಸಿಂಗ್ ಅವರ ಹೊಟ್ಟೆಯ ಭಾಗಕ್ಕೆ ಚೂರಿಯಿಂದ ಇರಿಯಲಾಗಿದ್ದು, ಕರುಳು ಕಿತ್ತು ಹೊರಬಂದಿತ್ತು. ದೊಡ್ಡ ಮಾಂಸದ ಮುದ್ದೆಯಂತೆ ಹೊರ ಚಾಚಿಕೊಂಡಿತ್ತು. ಅದೇ ಸ್ಥಿತಿಯಲ್ಲಿ ಆಸ್ಪತ್ರೆಗೆ ತರಲಾಗಿತ್ತು. ಅಲ್ಲಿ ವೈದ್ಯರು ತುರ್ತು ಚಿಕಿತ್ಸೆ ನೀಡಿದ್ದರಿಂದ ಜೀವಾಪಾಯ ತಪ್ಪಿದೆ.
ಮಾಜಿ ಸಚಿವ ಈಶ್ವರಪ್ಪ ಪುತ್ರ ಕೆ ಇ ಕಾಂತೇಶ್ ಅವರು ಗಾಯಾಳು ಆರೋಗ್ಯ ವಿಚಾರಿಸಿದ ಬಳಿಕ ಶಸ್ತ್ರಚಿಕಿತ್ಸೆ ಯಶಸ್ವಿಯಾದ ವಿಚಾರವನ್ನು ತಿಳಿಸಿದರು.
ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ನಾರಾಯಣಗೌಡ
ಇದೇ ವೇಳೆ ಉಸ್ತುವಾರಿ ಸಚಿವ ನಾರಾಯಣಗೌಡ ಅವರು ಆಸ್ಪತ್ರೆಗೆ ಭೇಟಿ ನೀಡಿದರು. ವೈದ್ಯರಿಂದ ಪ್ರೇಮ್ ಸಿಂಗ್ ಆರೋಗ್ಯದ ಬಗ್ಗೆ ಮಾಹಿತಿ ಪಡೆದ ಅವರು, ಪ್ರಾಣಾಪಾಯದಿಂದ ಪಾರಾಗಿರುವ ಬಗ್ಗೆ ನಿರಾಳತೆ ವ್ಯಕ್ತಪಡಿಸಿದರು.
ʻʻಗಲಾಟೆ ಆಗಿದ್ದೇ ಬೇರೆ ಕಡೆ ಚಾಕು ಇರಿತವಾಗಿದ್ದೇ ಬೇರೆ ಕಡೆ. ಚಾಕು ಹಾಕಿಸಿಕೊಂಡ ವ್ಯಕ್ತಿಗೆ ಯಾವುದೇ ಪ್ರಾಣಾಪಾಯವಿಲ್ಲ. ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಬಡಪಾಯಿಗೆ ಚಾಕು ಇರಿದಿದ್ದಾರೆ. ಆತನಿಗೆ ಆಪರೇಷನ್ ಆಗಿದ್ದು ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಪ್ರಾಣಾಪಾಯದಿಂದ ಪಾರಾಗಿದ್ದಾನೆʼʼ ಎಂದು ಅವರು ತಿಳಿಸಿದರು.