Site icon Vistara News

shimogga terror | ಯುವಕರು ಕೆಲಸ ಸಿಗದೆ ಕ್ರೈಂ ದಾರಿ ಹಿಡಿಯುತ್ತಿದ್ದಾರೆ ಎಂದ ಕಾಂಗ್ರೆಸ್‌ ನಾಯಕ ಮೊಹಮ್ಮದ್‌ ನಲಪಾಡ್‌!

mohammad nalapad

ಮೈಸೂರು: ʻʻಡಿಗ್ರಿ ಪಡೆದ ಯುವಕರಿಗೆ ಕೆಲಸ ಸಿಗುತ್ತಿಲ್ಲ. ಹೀಗಾಗಿ ಅವರು ಕ್ರೈಂ ದಾರಿ ಹಿಡಿಯುತ್ತಿದ್ದಾರೆʼ: ಇದು ಶಿವಮೊಗ್ಗದಲ್ಲಿ ಪತ್ತೆಯಾದ ಉಗ್ರ ಜಾಲದ ಬಗ್ಗೆ ಕೆಪಿಸಿಸಿ ಯೂತ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹಮ್ಮದ್ ಹ್ಯಾರೀಸ್ ನಲಪಾಡ್‌ ಅವರು ನೀಡಿರುವ ಪ್ರತಿಕ್ರಿಯೆ.

ಶಿವಮೊಗ್ಗದಲ್ಲಿ ಐಸಿಸ್ ಸಂಪರ್ಕದಲ್ಲಿದ್ದ ಮುಸ್ಲಿಂ ಯುವಕರ ಬಂಧನಕ್ಕೆ ಸಂಬಂಧಿಸಿ ಮೈಸೂರಿನಲ್ಲಿ ಮಾತನಾಡಿದ ಅವರು, ʻʻಡಿಗ್ರಿ ಪಡೆದ ಯುವಕರಿಗೇ ಕೆಲಸ ಸಿಗುತ್ತಿಲ್ಲ. ಹೀಗಾಗಿ ಅವರು ಅಪರಾಧದ ದಾರಿ ಹಿಡಿಯುತ್ತಿದ್ದಾರೆ. ತಪ್ಪಾದ ದಾರಿಗೆ ಹೋಗುತ್ತಿದ್ದಾರೆ. ಇದೇ ನಡೆಯುತ್ತಿರುವುದುʼʼ ಎಂದರು. ʻʻಐಸಿಸ್ ಸಂಪರ್ಕದಲ್ಲಿ ಇರೋರನ್ನು ಭಾರತದಲ್ಲಿ ಇಟ್ಟು ಕೊಳ್ಳಬೇಡಿ. ಅವರಿಗೆ ಗಲ್ಲು ಶಿಕ್ಷೆ ಕೊಡಿʼʼ ಎಂದೂ ಅವರು ಹೇಳಿದರು.

ʻʻಐಸಿಸ್ ಸಂಘಟನೆ ಸೇರುತ್ತಾರೆ ಅಂತ ನಾನು ಹೇಳುತ್ತಿಲ್ಲ. ಆದರೆ, ಯುವಕರು ತಪ್ಪಾದ ದಾರಿ ಹಿಡಿಯುತ್ತಿರುವುದು ಸತ್ಯ. ನಿರುದ್ಯೋಗದ ಕಾರಣಕ್ಕಾಗಿಯೇ ಯುವಕರು ತಪ್ಪು ದಾರಿ ಹಿಡಿಯುತ್ತಿರುವುದು. ಇದಕ್ಕೆ ಬಿಜೆಪಿಯೇ ಹೊಣೆ,ʼʼ ಎಂದು ಹೇಳಿದರು. ʻʻಕೆಲಸ ಇದ್ದರೆ ಯುವಕರಿಗೆ ತಪ್ಪು ದಾರಿಗೆ ತುಳಿಯುವ ಯೋಚನೆ ಬರಲ್ಲʼʼ ಎಂದು ನುಡಿದರು.

ʻʻ2023ರವರೆಗೆ ಯುವಕರು ತಾಳ್ಮೆಯಿಂದ ಇರಬೇಕು. ಆಗ ಸುವರ್ಣ ಕಾಲ ಬರುತ್ತೆ. ತಪ್ಪು ದಾರಿಗೆ ಹೋಗಬೇಡಿʼʼ ಎಂದು ಮನವಿ ಮಾಡಿದ ಅವರು, ೨೦೨೩ರ ವಿಧಾನಸಭಾ ಚುನಾವಣೆಯ ಬಳಿಕ ಕಾಂಗ್ರೆಸ್‌ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ಸೂಚ್ಯವಾಗಿ ಹೇಳಿದರು.

ಒತ್ತುವರಿ ತೆರವಿಗೆ ಕಾಂಗ್ರೆಸ್‌ ವಿರೋಧವಿಲ್ಲ
ʻʻಬೆಂಗಳೂರಿನಲ್ಲಿ ಒತ್ತುವರಿ ತೆರವಿಗೆ ಕಾಂಗ್ರೆಸ್ ವಿರೋಧವಿದೆʼʼ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ʻʻಕಾಂಗ್ರೆಸ್ ಗೂ ಒತ್ತುವರಿ ತೆರವಿಗೂ ಸಂಬಂಧವಿಲ್ಲ. ಬಿಜೆಪಿ ಸರಕಾರ ಕಾನೂನು ಪ್ರಕಾರ ಕ್ರಮ ತೆಗೆದು ಕೊಳ್ಳಲಿʼʼ ಎಂದರು.
ʻʻಒತ್ತುವರಿ ತೆರವು ಮಾಡುವ ಮುನ್ನ ವೈಜ್ಞಾನಿಕವಾಗಿ ವರದಿ ತಯಾರಿಸಿ. ಪ್ರವಾಹ ಬಂತು ಅಂದ ಕೂಡಲೇ ಆ ಕಟ್ಟಡ ಒಡೆಯಿರಿ. ಈ ಕಟ್ಟಡ ಒಡೆಯಿರಿ ಎಂದರೆ ಹೇಗೆ? ವೈಜ್ಞಾನಿಕವಾಗಿ ವರದಿ ತಯಾರು ಮಾಡದೆ ಸಿಕ್ಕ ಸಿಕ್ಕವರ ಮನೆ ಹೊಡೆದರೆ ಹೇಗೆ ಹೇಳಿ?ʼʼ ಎಂದು ಪ್ರಶ್ನಿಸಿದರು.

ಮನೆ ಅಂದ ಮೇಲೆ ಒಂದು ಮಾತು ಬರುತ್ತೆ, ಹೋಗುತ್ತೆ
ಭಾರತ್ ಜೋಡೋ ಯಾತ್ರೆ ಸಂಘಟನೆ ವಿಚಾರದಲ್ಲಿ ಕಾಂಗ್ರೆಸ್ ನಾಯಕರಲ್ಲೇ ಅಸಮಾಧಾನ ಇದೆ ಎಂಬ ದೂರುಗಳಿಗೆ ಪ್ರತಿಕ್ರಿಯಿಸಿದ ಮೊಹಮ್ಮದ್‌ ನಲಪಾಡ್‌, ʻʻಪಕ್ಷ ಅಂದರೆ ಅದು ಮನೆ ಇದ್ದಂತೆ, ಒಂದು ಮಾತು ಬರುತ್ತದೆ, ಹೋಗುತ್ತದೆ. ನಾವೇ ಮನೆಯೊಳಗೆ ಕೂತು ಮಾತಾಡಿ ಕೊಂಡು ಸರಿ ಮಾಡಿ ಕೊಳ್ತೀವಿ. ಯಾತ್ರೆಯ ಸಂಘಟನೆ ವಿಚಾರದಲ್ಲಿ ಯಾರೂ ತಾರತಮ್ಯ ಮಾಡುವಂತಿಲ್ಲ. ಯಾರೂ ತುಟಿಕ್ ಪಿಟಿಕ್ ಅನ್ನುವ ಹಾಗಿಲ್ಲʼʼ ಅಂದರು.

ಇದನ್ನೂ ಓದಿ | Shivamogga terror|‌ 40 ದಿನದ ಹಿಂದೆ ಶಾರಿಕ್‌ ತಂದೆ ಸಾವು, 20 ದಿನದಿಂದ ಮನೆಗೆ ಬಂದಿಲ್ಲ ಎಂದ ತಾಯಿ

Exit mobile version