ಹಾಸನ: ಬೆಂಗಳೂರು (Bengaluru) ಹಾಗೂ ಮಂಗಳೂರಿನ ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 75ರ ಮೂಲಕ ಹಾದುಹೋಗುವ ಶಿರಾಡಿ ಘಾಟ್ ರಸ್ತೆಯ ಮೇಲೆ ಮತ್ತೆ ಭೂಕೂಸಿತ (Landslide) ಉಂಟಾಗಿದೆ. ಹಾಗಾಗಿ, ಶಿರಾಡಿ ಘಾಟ್ (Shiradi Ghat) ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಗೊಳಿಸಲಾಗಿದೆ. ಈಗ ಕುಸಿದಿರುವ ಮಣ್ಣು ಹಾಗೂ ಕಲ್ಲನ್ನು ತೆರವುಗೊಳಿಸುವುದು ಹಾಗೂ ಮತ್ತೆ ಭೂಕುಸಿತ ಉಂಟಾಗುವ ಭೀತಿ ಇರುವುದರಿಂದ ಶಿರಾಡ್ ಘಾಟ್‌ನಲ್ಲಿ ಮತ್ತೆ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಭೂಕುಸಿತ ಸೇರಿ ಹಲವು ಕಾರಣಗಳಿಂದಾಗಿ ಶಿರಾಡಿ ಘಾಟ್ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರು ಆದೇಶ ಹೊರಡಿಸಿದ್ದಾರೆ. ಈ ರಸ್ತೆಯ ಬದಲು ಬೇರೆ ಮಾರ್ಗದ ಮೂಲಕ ಸಂಚರಿಸಬೇಕು ಎಂದು ಅವರು ಆದೇಶಿಸಿದ್ದಾರೆ. ಸಕಲೇಶಪುರ ತಾಲೂಕಿನ ದೊಡ್ಡ ತಪ್ಲು ಬಳಿ ಗುಡ್ಡ ಕುಸಿದಿದೆ. ಮಣ್ಣು ತೆರವುಗೊಳಿಸುವವರೆಗೂ ಶಿರಾಡಿಘಾಟ್ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ಮಣ್ಣಿನಡಿ ಎರಡು ಕಂಟೇನರ್ ಹಾಗೂ ಟ್ಯಾಂಕರ್ ಸಿಲುಕಿದ್ದು, ಮಣ್ಣು ತೆರವುಗೊಳಿಸಿ ವಾಹನಗಳನ್ನು ತೆಗೆಯಬೇಕು. ಅಲ್ಲದೆ, ಮಳೆ ಸುರಿಯುತ್ತಿರುವ ಕಾರಣ ಕಂಟೇನರ್ ಹಾಗೂ ಟ್ಯಾಂಕರ್ ಹೊರತೆಗೆಯಲು ಕಷ್ಟವಾಗುತ್ತಿದೆ. ಹಾಗೆಯೇ, ಮತ್ತೆ ಭೂಕುಸಿತ ಉಂಟಾಗುವ ಭೀತಿ ಎದುರಾಗಿದೆ. ಜುಲೈ ಮಧ್ಯಭಾಗದಲ್ಲೂ ಶಿರಾಡಿ ಘಾಟ್ ರಸ್ತೆಯಲ್ಲಿ ಬೆಟ್ಟ ಕುಸಿದ ಕಾರಣ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಮತ್ತೆ ಭೂಕುಸಿತ ಉಂಟಾದ ಕಾರಣ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
ರೆಡ್ ಅಲರ್ಟ್ ಘೋಷಣೆ
ರಾಜ್ಯದ ಕರಾವಳಿ-ಮಲೆನಾಡು ಭಾಗದಲ್ಲಿ ಭರ್ಜರಿ ಮಳೆಯಾಗಲಿದ್ದು, 9 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಚದುರಿದಂತೆ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಮೈಸೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಉಳಿದಂತೆ ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಳ್ಳಾರಿ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು ಸೇರಿದಂತೆ ವಿಜಯನಗರದಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗಲಿದೆ.
ಇದನ್ನೂ ಓದಿ: Tips for Monsoon: ಮಳೆಗಾಲದಲ್ಲಿ ಬಟ್ಟೆಗಳನ್ನು ಗರಿಗರಿಯಾಗಿ ಇರಿಸುವುದು ಹೇಗೆ?