Site icon Vistara News

Shiradi Ghat | ಶಿರಾಡಿ ಘಾಟ್ ಬಂದ್ ಮಾಡಲ್ಲ: ಸಚಿವ ಸಿ.ಸಿ.ಪಾಟೀಲ

ಶಿರಾಡಿಘಾಟ್‌

ದಕ್ಷಿಣ ಕನ್ನಡ: ಬೆಂಗಳೂರು ಮತ್ತು ಮಂಗಳೂರು ನಡುವಿನ ಪ್ರಮುಖ ಸಂಪರ್ಕ ಮಾರ್ಗವಾಗಿರುವ ಶಿರಾಡಿ ಘಾಟ್ ದುರಸ್ತಿ ನಿಮಿತ್ತವಾಗಿ ಈ ಮಳೆಗಾಲದಲ್ಲಿ ವಾಹನ ಸಂಚಾರ ನಿಷೇಧ ಮಾಡುವುದಿಲ್ಲ. ಆದರೆ, ರಸ್ತೆ ದುರಸ್ತಿ ಕಾಮಗಾರಿಯನ್ನು ಮುಂದುವರಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು ಮತ್ತು ಶಿರಾಡಿ ಘಾಟ್ ನಡುವಿನ ಹೆದ್ದಾರಿ ಸೇರಿದಂತೆ ಇತರ ಸೇತುವೆಗಳ ಕಾಮಗಾರಿ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಶಿರಾಡಿ ಘಾಟ್ ಮೂಲಕ ಪ್ರತಿನಿತ್ಯ ಸರಾಸರಿ 30 ಸಾವಿರ ವಾಹನಗಳು ಸಂಚರಿಸುತ್ತವೆ. ಒಂದು ವೇಳೆ ರಸ್ತೆ ಬಂದ್ ಮಾಡಿದರೆ ಸಾರ್ವಜನಿಕರಿಗೆ ತೀವ್ರ ಸಮಸ್ಯೆಯಾಗುತ್ತದೆ. ಆದ್ದರಿಂದ ಒಂದು ಭಾಗದಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟು, ಮತ್ತೊಂದು ಭಾಗದಲ್ಲಿ ದುರಸ್ತಿ ಕಾಮಗಾರಿಗಳಿಗೆ ಅವಕಾಶ ಮಾಡಿಕೊಡಲಾಗುವುದು. ತೀರಾ ಅನಿವಾರ್ಯವಾದರೆ ಮಾತ್ರ ಏಕಮುಖ ಸಂಚಾರಕ್ಕೆ ಅವಕಾಶ ನೀಡುವ ಬಗ್ಗೆ ಪರಿಶೀಲಿಸಲಾಗುವುದು. ಸದ್ಯಕ್ಕಂತೂ ಶಿರಾಡಿ ಘಾಟ್‌ನಲ್ಲಿ ವಾಹನ ಸಂಚಾರಕ್ಕೆ ಯಾವುದೇ ನಿರ್ಬಂಧವಿರುವುದಿಲ್ಲ ಎಂದರು.

ಮಳೆ ಮತ್ತಿತರ ನೈಸರ್ಗಿಕ ಪ್ರಕೋಪಗಳಿಂದ ರಸ್ತೆಗಳು ಅಥವಾ ಸೇತುವೆಗಳು ಹಾನಿಗೊಳಗಾದರೆ ದುರಸ್ತಿ ಕಾಮಗಾರಿ ನಡೆಸುವುದಕ್ಕೆ ಯಾವುದೇ ಹಣಕಾಸು ತೊಂದರೆ ಇಲ್ಲ. ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳಲಾಗುವುದು ವಿವರಿಸಿದರು. ಸ್ಥಳೀಯ ಶಾಸಕ ಕುಮಾರಸ್ವಾಮಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಡಾ. ಕೃಷ್ಣ ರೆಡ್ಡಿ, ಮತ್ತಿತರ ಅಧಿಕಾರಿಗಳು ಇದ್ದರು.

ಇದನ್ನೂ ಓದಿ | Rain News | ಮಂಗಳೂರು ಏರ್‌ಪೋರ್ಟ್‌ ರನ್‌ ವೇ ಬಳಿ ರಸ್ತೆ ಕುಸಿತ, ಫ್ಲೈಟ್‌ ಹಾರಾಟಕ್ಕಿಲ್ಲ ತೊಂದರೆ

Exit mobile version