ಗದಗ: ಬಿರುಗಾಳಿಗೆ ಕಾಂಗ್ರೆಸ್ ಸಮಾವೇಶದ ವೇದಿಕೆ ಕುಸಿದು, ಅಭ್ಯರ್ಥಿ ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿರುವ ಘಟನೆ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿಯಲ್ಲಿ ಸೋಮವಾರ ನಡೆದಿದೆ. ಶಿರಹಟ್ಟಿ ಕಾಂಗ್ರೆಸ್ ಅಭ್ಯರ್ಥಿ ಸುಜಾತಾ ದೊಡ್ಡಮನಿ ಪರ ಪ್ರಚಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದರು. ಆದರೆ, ಕಾರ್ಯಕ್ರಮ ಮುಗಿದ ಬಳಿಕ ಏಕಾಏಕಿ ವೇದಿಕೆ ಕುಸಿದಿದ್ದು (Stage Collapses), ಅದೃಷ್ವವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.
ಸುಮಾರು 10 ಸಾವಿರ ಜನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಅಭ್ಯರ್ಥಿ ಸುಜಾತಾ ದೊಡ್ಡಮನಿ ಹಾಗೂ ಬೆಂಬಲಿಗರು ಮಾತ್ರ ವೇದಿಕೆ ಬಳಿ ಇದ್ದರು. ಕಾರ್ಯಕರ್ತರೊಬ್ಬರ ಹುಟ್ಟುಹಬ್ಬ ಆಚರಣೆ ಮಾಡಿ ಮಾತುಕತೆ ನಡೆಸುತ್ತಿದ್ದರು. ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಬಿರುಗಾಳಿ ಬೀಸಿದ್ದರಿಂದ ಶಾಮಿಯಾನ ಪೆಂಡಾಲ್ ಸಮೇತ ಬೃಹತ್ ವೇದಿಕೆ ನೆಲಕ್ಕುರುಳಿದೆ. ಚೇರ್‌ಗಳು, ಟೇಬಲ್ ಮತ್ತು ಕೆಲ ಪೀಠೋಪಕರಣಗಳು ಜಖಂಗೊಂಡಿವೆ.
ರಾಯಚೂರಿನಲ್ಲಿ ಮಳೆಗೆ ಪ್ರಧಾನಿ ಮೋದಿ ಕಾರ್ಯಕ್ರಮದ ವೇದಿಕೆ ಕುಸಿತ, ಸ್ಥಳ ಜಲಾವೃತ
ರಾಯಚೂರು: ನಗರದಲ್ಲಿ ಶನಿವಾರ ತಡರಾತ್ರಿ ಸುರಿದ ವಿಪರೀತ ಮಳೆಗೆ, ಪ್ರಧಾನಿ ಕಾರ್ಯಕ್ರಮಕ್ಕಾಗಿ (ಮೇ 2) ನಿರ್ಮಿಸಿರುವ ವೇದಿಕೆ ಕುಸಿದು, ಸ್ಥಳದಲ್ಲಿ ನೀರು ತುಂಬಿಕೊಂಡು ಕೆಸರುಮಯವಾಗಿರುವುದರಿಂದ ಬಿಜೆಪಿ ಕಾರ್ಯಕರ್ತರು, ಮುಖಂಡರಲ್ಲಿ ಆತಂಕ ಉಂಟಾಗಿದೆ.
ನಗರದಲ್ಲಿ ಮೇ 2ರಂದು ಆಯೋಜಿಸಿರುವ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ. ಇದಕ್ಕಾಗಿ ಬೃಹತ್ ವೇದಿಕೆ, ಪೆಂಡಾಲ್ ಹಾಕಲಾಗುತ್ತಿದೆ. ಆದರೆ, ಭಾರಿ ಮಳೆಗೆ ವೇದಿಕೆ ಕುಸಿದು, ಸ್ಥಳದಲ್ಲಿ ನೀರು ತುಂಬಿಕೊಂಡಿದೆ. ಹೀಗಾಗಿ ಕೆಸರಿದ್ದ ಸ್ಥಳದಲ್ಲಿ ಮಣ್ಣು ಡಂಪ್ ಮಾಡಲಾಗುತ್ತಿದ್ದು, ವೇದಿಕೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರನ್ನು ಬಳಸಿಕೊಂಡು ವೇದಿಕೆಯನ್ನು ಸಿದ್ಧಪಡಿಸಲಾಗುತ್ತಿದೆ.
ಇದನ್ನೂ ಓದಿ | D ಕೋಡ್ ಅಂಕಣ: ಜಗದೀಶ್ ಶೆಟ್ಟರು ಸ್ವತಂತ್ರ ಅಭ್ಯರ್ಥಿ ಆಗುವ ಬದಲು ಕಾಂಗ್ರೆಸ್ ಸೇರಿದ್ದೇಕೆ?
ವಿಜಯಪುರದಲ್ಲಿ ಜಮೀರ್ ಅಹ್ಮದ್ ಖಾನ್ ಕಾರ್ಯಕ್ರಮ ರದ್ದು
ವಿಜಯಪುರ: ನಗರದ ಝಂಡಾ ಕಟ್ಟಿ ಬಳಿ ನಡೆಯಬೇಕಿದ್ದ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಕಾರ್ಯಕ್ರಮ ಸೋಮವಾರ ರದ್ದಾಗಿದೆ. ವಿಜಯಪುರ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ಹಮೀದ್ ಮುಶ್ರೀಫ್ ಪರ ಮತಯಾಚನೆಗಾಗಿ ಜಮೀರ್ ಅಹ್ಮದ್ ಖಾನ್ ಆಗಮಿಸಬೇಕಿತ್ತು. ಆದರೆ, ಅನುಮತಿ ಇಲ್ಲದ ಕಾರಣ ಕಾರ್ಯಕ್ರಮದ ವೇದಿಕೆಯ ತೆರವುಗೊಳಿಸಲು ಪೊಲೀಸರು ಸೂಚನೆ ನೀಡಿದ್ದಾರೆ. ಹೀಗಾಗಿ ಕಾರ್ಯಕ್ರಮ ರದ್ದಾಗಿದೆ.
ಪರವಾನಗಿ ಇಲ್ಲದೆ ಕಾರ್ಯಕ್ರಮ ನಡೆಸುವಂತಿಲ್ಲ ಎಂದು ಪೊಲೀಸರು ಹೇಳಿದ್ದು, ಕಾರ್ಯಕ್ರಮಕ್ಕಾಗಿ ಹಾಕಲಾಗಿದ್ದ ವೇದಿಕೆ ತೆರವುಗೊಳಿಸಲು ಸೂಚಿಸಿದ್ದಾರೆ. ಹೀಗಾಗಿ ಸ್ಥಳದಲ್ಲಿ ನೂರಾರು ಜನರು ಬೀಡು ಬಿಟ್ಟಿದ್ದಾರೆ. ತೆರವುಗೊಳಿಸಬೇಕಿದ್ದ ವೇದಿಕೆಯಲ್ಲೇ ಜನರನ್ನು ಉದ್ದೇಶಿಸಿ ಕಾಂಗ್ರೆಸ್ ಮುಖಂಡರು ಹಾಗೂ ಅಭ್ಯರ್ಥಿ ಅಬ್ದುಲ್ ಹಮೀದ್ ಮುಶ್ರೀಫ್ ಮಾತನಾಡಿದರು.