ಗದಗ: ʻʻಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲಜ್ಜೆಗೆಟ್ಟು ನಿಂತಿದ್ದಾರೆ. ತಾನೊಬ್ಬ ಕರ್ನಾಟಕದ (Karnataka Election 2023) ಮುಖ್ಯಮಂತ್ರಿ ಇದ್ದೇನೆ ಎಂಬ ಪ್ರಜ್ಞೆಯೇ ಇಲ್ಲ. ಅಂತಹ ನಾಲಾಯಕ್ ಮುಖ್ಯಮಂತ್ರಿ ಇದ್ದಾರೆʼʼ ಎಂದು ಶಿರಹಟ್ಟಿ ಬಿಜೆಪಿ ಶಾಸಕ ರಾಮಣ್ಣ ಲಮಾಣಿ ಆಕ್ರೋಶ ಹೊರಹಾಕಿದ್ದಾರೆ.
ಶಿರಹಟ್ಟಿ ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಏಕವಚನದಲ್ಲೇ ಆಕ್ರೋಶ ಹೊರಹಾಕಿರುವ ಅವರು, ಲೋಕಾಯುಕ್ತದಲ್ಲಿ ಕೇಸ್ ಇರುವ ಅಭ್ಯರ್ಥಿಗೆ (ಚಂದ್ರು ಲಮಾಣಿ) ಟಿಕೆಟ್ ನೀಡಲಾಗಿದೆ. ಈ ಮೂಲಕ ಸಿಎಂ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿಗೆ ಮಾನ, ಮರ್ಯಾದೆ ಏನೂ ಉಳಿದಿಲ್ಲ, ಲಜ್ಜೆಗೆಟ್ಟು ನಿಂತಿದ್ದಾನೆ. ತಾನೊಬ್ಬ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಇದೀನಿ ಎಂಬ ಪ್ರಜ್ಞೆಯೇ ಇಲ್ಲ. ಇಂಥ ನಾಲಾಯಕ್ ಮುಖ್ಯಮಂತ್ರಿಯನ್ನು ಎಲ್ಲೂ ನೋಡಿಲ್ಲ ಎಂದು ಹರಿಹಾಯ್ದಿದ್ದಾರೆ.
ಇದನ್ನೂ ಓದಿ | Karnataka Congress: ಬಿಜೆಪಿ ಅಣೆಕಟ್ಟೆ ಒಡೆದಿದೆ; ವೀರಶೈವ ಲಿಂಗಾಯತರು ಕಾಂಗ್ರೆಸ್ ಸೇರುವುದನ್ನು ತಡೆಯಲಾಗದು: ಡಿಕೆಶಿ
ʻʻಲಜ್ಜೆಗೆಟ್ಟ ಮುಖ್ಯಮಂತ್ರಿ ನನಗೆ ಟಿಕೆಟ್ ತಪ್ಪಿಸುವ ಕೆಲಸ ಮಾಡಿದ್ದಾನೆ. ದೇವರು ಅವರಿಗೂ ಒಂದು ಕಾಲಾವಕಾಶ ಕೊಡುತ್ತಾನೆ. ಯಾವ ಆಮಿಷಕ್ಕೆ ಬಲಿಯಾಗಿ ಟಿಕೆಟ್ ನೀಡಿದ್ದಾರೋ ಗೊತ್ತಿಲ್ಲ. ಲೋಕಾಯುಕ್ತ ಕೇಸ್ ಇದ್ದರೂ ಕೊನೆ ಘಳಿಗೆಯಲ್ಲಿ ಅಭ್ಯರ್ಥಿಯ ರಾಜೀನಾಮೆ ಅಂಗೀಕಾರ ಮಾಡಿದ್ದಾರೆ. ಪೊಲೀಸ್ ಭದ್ರತೆ ಕಳುಹಿಸಿ ರಾಜೀನಾಮೆ ಅಂಗೀಕಾರ ಮಾಡಿಸುವ ಕೆಲಸವನ್ನು ಭಂಡ ಮುಖ್ಯಮಂತ್ರಿ ಮಾಡಿದ್ದಾರೆʼʼ ಎಂದು ಆರೋಪಿಸಿದ್ದಾರೆ.
ಬಂಡಾಯ ಅಭ್ಯರ್ಥಿಯಾಗಿ ರಾಮಣ್ಣ ಲಮಾಣಿ ಕಣಕ್ಕೆ
ಮೀಸಲು ಕ್ಷೇತ್ರ ಶಿರಹಟ್ಟಿ ಬಿಜೆಪಿ ಟಿಕೆಟ್ ಕೈತಪ್ಪಿರುವುದರಿಂದ ಶಾಸಕ ರಾಮಣ್ಣ ಲಮಾಣಿ ಬಂಡಾಯವೆದ್ದಿದ್ದಾರೆ. ಈ ಬಾರಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವರು ನಿರ್ಧರಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ನಾನು ಬಿಜೆಪಿಗೆ ಇನ್ನೂ ರಾಜೀನಾಮೆ ಸಲ್ಲಿಸಿಲ್ಲ. ಬಂಡಾಯವಾಗಿ ಕಣಕ್ಕೆ ಇಳಿದಿದ್ದೇನೆ ಎಂದು ತಿಳಿಸಿದ್ದಾರೆ.
ʻʻದೇವರು ನನಗೆ ಶಕ್ತಿ ಕೊಟ್ಟಿದ್ದಾನೆ. ಎರಡು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ನಮ್ಮ ಕಾರ್ಯಕರ್ತರ ಸಭೆ ಕರೆದು ಸಮಾಲೋಚನೆ ಮಾಡುವೆ. ಕಣದಲ್ಲಿ ಮುಂದುವರೆಯಬೇಕೋ ಬೇಡವೋ ಎಂಬುದರ ಬಗ್ಗೆ ಚರ್ಚೆ ಮಾಡುತ್ತೇನೆ. ಪಕ್ಷದ ಮುಖಂಡರು ಮನವೊಲಿಸಲು ಪ್ರಯತ್ನಿಸಿದರೂ ನಾನು ಒಪ್ಪುವುದಿಲ್ಲ. ಯಾವ ಮಾನದಂಡದ ಮೇಲೆ ನನ್ನನ್ನು ಗುರುತಿಸಿಲ್ಲವೋ ತಿಳಿಯದುʼʼ ಎಂದು ಅಸಮಾಧಾನ ಹೊರಹಾಕಿದ್ದಾರೆ.
ʻʻನಾನಷ್ಟೇ ಅಲ್ಲ, ಹಿರಿಯ ಶಾಸಕರನ್ನೂ ಪಕ್ಷ ಕಳೆದುಕೊಂಡಿದೆ. ಇದರ ಫಲ ಮುಂದೆ ಗೊತ್ತಾಗುತ್ತದೆ. ನನಗೂ ಸೇರಿ ಬಹಳ ಮಂದಿಗೆ ನೋವಾಗಿದೆ. ಕಾಂಗ್ರೆಸ್‌ನವರು ಗದಗ ಮತಕ್ಷೇತ್ರದವರಿಗೆ ಟಿಕೆಟ್ ಕೊಟ್ಟಿದ್ದರೆ, ಬಿಜೆಪಿಯವರು ರೋಣ ಕ್ಷೇತ್ರದ ಅಭ್ಯರ್ಥಿಗೆ ಟಿಕೆಟ್ ನೀಡಿದ್ದಾರೆ ಎಂದು ಸ್ಥಳೀಯರಿಗೆ ಆದ್ಯತೆ ನೀಡಿಲ್ಲʼʼ ಎಂದು ಕಿಡಿ ಕಾರಿದ್ದಾರೆ.
ಇದನ್ನೂ ಓದಿ | BJP Karnataka: ಕಾಂಗ್ರೆಸ್ ಮಾಜಿ ಶಾಸಕ ಎಸ್. ಬಾಲರಾಜು ಬಿಜೆಪಿ ಸೇರ್ಪಡೆ: 140 ಸ್ಥಾನ ನಿಶ್ಚಿತ ಎಂದ ಬಿ.ಎಸ್. ಯಡಿಯೂರಪ್ಪ
ಶಿರಹಟ್ಟಿಯಲ್ಲಿ ಡಾ.ಚಂದ್ರು ಲಮಾಣಿಗೆ ಬಿಜೆಪಿ ಟಿಕೆಟ್
ಶಿರಹಟ್ಟಿಯಲ್ಲಿ ಬಿಜೆಪಿ ಹಾಲಿ ಶಾಸಕ ರಾಮಣ್ಣ ಲಮಾಣಿ ಬದಲಿಗೆ ಸರ್ಕಾರಿ ವೈದ್ಯ ಡಾ.ಚಂದ್ರು ಲಮಾಣಿಗೆ ಟಿಕೆಟ್ ನೀಡಲಾಗಿದೆ. ಬಿಜೆಪಿ ಅಭ್ಯರ್ಥಿ ಡಾ. ಚಂದ್ರು ಲಮಾಣಿ ವೈದ್ಯ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಬಂದಿದ್ದರು. 2021ರ ಆರಸ್ಟ್ 31ರಂದು ರಾಜೀನಾಮೆ ನೀಡಿದ್ದರೂ ಹಲವು ಕಾರಣಗಳಿಂದ ಅಂಗೀಕಾರವಾಗಿರಲಿಲ್ಲ. ಹೀಗಾಗಿ ಈ ಬಾರಿ ಟಿಕೆಟ್ ಸಿಕ್ಕಿದ್ದರೂ ಅವರು ನಾಮಪತ್ರ ಸಲ್ಲಿಸುವರೋ ಇಲ್ಲವೋ ಎಂಬ ಅನುಮಾನಗಳು ಮೂಡಿದ್ದವು. ಆದರೆ, ಏಪ್ರಿಲ್ 19ರಂದು ಆರೋಗ್ಯ ಇಲಾಖೆ ರಾಜೀನಾಮೆ ಅಂಗೀಕರಿಸಿದ್ದರಂದ ನಿರಾಳರಾಗಿದ್ದರು. ಇವರ ವಿರುದ್ಧ ಭ್ರಷ್ಟಾಚಾರ ಆರೋಪದಲ್ಲಿ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದೆ.