Site icon Vistara News

ಬೆಳಗಾವಿ ಗಡಿಯಲ್ಲಿ ಶಿವಸೇನೆ ಹೈಡ್ರಾಮಾ; ರಾಜ್ಯ ಪ್ರವೇಶಕ್ಕೆ ಪೊಲೀಸರ ಬ್ರೇಕ್‌, ಸಂಚಾರ ತಡೆ ನಡೆಸಿ ಪ್ರತಿಭಟನೆ

ಶಿವಸೇನೆ

ಚಿಕ್ಕೋಡಿ: ಕನ್ನಡ ರಾಜ್ಯೋತ್ಸವವನ್ನು ಕರಾಳ ದಿನವನ್ನಾಗಿ ಆಚರಿಸಲು ಎಂಇಎಸ್‌ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಿಂದ ಆಗಮಿಸುತ್ತಿದ್ದಾಗ ಗಡಿಯಲ್ಲಿ ಪೊಲೀಸರು ತಡೆದಿದ್ದರಿಂದ ಶಿವಸೇನೆ ಪುಂಡರು ಹೆದ್ದಾರಿಯಲ್ಲಿ ಸಂಚಾರ ತಡೆ ನಡೆಸಿ ಸೋಮವಾರ ಪ್ರತಿಭಟನೆ ಮಾಡಿದರು.

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಬಳಿ ಇರುವ ಕುಗನೋಳಿ ಚೆಕ್‌ ಪೋಸ್ಟ್ ಬಳಿ 50ಕ್ಕೂ ಹೆಚ್ಚು ಉದ್ಧವ್‌ ಠಾಕ್ರೆ ಬಣದ ಶಿವಸೇನೆ ಪುಂಡರು ರಾಜ್ಯದೊಳಗೆ ಪ್ರವೇಶಿಸಲು ಯತ್ನಿಸಿದ್ದರಿಂದ ಪೊಲೀಸರು ತಡೆದಿದ್ದಾರೆ. ಇದರಿಂದ ಆಕ್ರೋಶಗೊಂಡ ಕಾರ್ಯಕರ್ತರು, ಠಾಕ್ರೆ ಸೇನೆ ಕೊಲ್ಲಾಪುರ ಅಧ್ಯಕ್ಷ ವಿಜಯ ದೇವಣೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಬೆಳಗಾವಿ ನಮ್ಮದು ಎಂದು ಘೋಷಣೆ ಕೂಗಿ ಬ್ಯಾರಿಕೇಡ್‌ಗಳನ್ನು ಪಕ್ಕಕ್ಕೆ ತಳ್ಳಿ ಒಳನುಗ್ಗಲು ಪ್ರಯತ್ನಿಸಿದರು. ಇದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ‌ ಸಂಚಾರ ದಟ್ಟಣೆ ಉಂಟಾಯಿತು.

ಇದನ್ನೂ ಓದಿ | Election 2023 | ಬಿಜೆಪಿಯವರು ಕರೆದರೆ ಹೋಗಬೇಡಿ, ನಳಿನ್‌ ಕುಮಾರ್‌ ಕಟೀಲ್‌ ಒಬ್ಬ ಜೋಕರ್‌: ಸಿದ್ದರಾಮಯ್ಯ

ಕೈಯಲ್ಲಿ ವಿಜಯ ಜ್ಯೋತಿ ಹಿಡಿದು ಬೆಳಗಾವಿಯ ಕರಾಳ ದಿನದಲ್ಲಿ ಭಾಗಿಯಾಗಲು ಹೊರಟಿದ್ದ ಶಿವಸೇನೆ ಪುಂಡರು ರಾಜ್ಯದೊಳಗೆ ಪ್ರವೇಶ ನೀಡಲು ಒತ್ತಾಯಿಸಿ ಅರ್ಧ ಗಂಟೆ ಪ್ರತಿಭಟನೆ ನಡೆಸಿದರು. ಆದರೆ ಪೊಲೀಸರು ರಾಜ್ಯದೊಳಗೆ ಪ್ರವೇಶಿಸಲು ಅನುಮತಿ ನೀಡದ ಕಾರಣ ಕಾರ್ಯಕರ್ತರು ವಾಪಸ್‌ ತೆರಳಿದರು.

ಗಡಿಯಲ್ಲಿ ಪೊಲೀಸರ ಹದ್ದಿನ ಕಣ್ಣು
ಎಂ‌ಇಎಸ್ ಹಾಗೂ ಶಿವಸೇನೆ ಕಾರ್ಯಕರ್ತರು ರಾಜ್ಯ ಗಡಿ ಪ್ರವೇಶ ಸಾಧ್ಯತೆ ಹಿನ್ನೆಲೆಯಲ್ಲಿ ನಿಪ್ಪಾಣಿಯ ಕುಗನೊಳ್ಳಿ ಬಳಿ ನೂರಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ 1 ಎಎಸ್‌ಪಿ, 3 ಡಿಎಸ್‌ಪಿ, 3 ಸಿಪಿಐ, 7 ಪಿಎಸ್ಐ, 3 ಕೆಎಸ್‌ಆರ್‌ಪಿ, 3 ಡಿಆರ್ ತುಕಡಿ ಸೇರಿ 100 ಸಿಬ್ಬಂದಿಯನ್ನು ನಿಯೋಜನೆ ಮಾಡಿ, ಗಡಿ ಭಾಗದಲ್ಲಿ ನಿಗಾ ಇಡಲಾಗಿದೆ.

ಇದನ್ನೂ ಓದಿ | ರಾಜ್ಯೋತ್ಸವದಂದು `ಕರಾಳ ದಿನ’ ಆಚರಿಸಲು ಕನ್ನಡವಿರೋಧಿ ಎಂಇಎಸ್ ತಯಾರಿ

Exit mobile version