ಹಾಸನ: ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅವರು ಜೆಡಿಎಸ್‌ನ ಪ್ರಮುಖರಿರುವ ವಾಟ್ಸ್‌ಆ್ಯಪ್ ಗ್ರೂಪ್‌ಗಳಿಂದ ಎಕ್ಸಿಟ್ ಆಗಿದ್ದಾರೆ. ಜೆಡಿಎಸ್‌ನಿಂದ ಮತ್ತೊಬ್ಬ ಶಾಸಕರು ಹೊರನಡೆದರೇ ಎಂಬ ಮಾತುಗಳು ಕೇಳಿ ಬರುತ್ತಿವೆ.
ಹಲವು ವರ್ಷಗಳಿಂದ ಗ್ರೂಪ್‌ನಲ್ಲಿದ್ದ ಶಾಸಕ ಶಿವಲಿಂಗೇಗೌಡ, ʼ2023ಕ್ಕೆ ಜನತಾ ಸರ್ಕಾರʼ, ʼಕನ್ನಡ ನಾಡಿನ ಜೆಡಿಎಸ್ ಪಡೆʼ, ʼವಿಜಯಪುರ ಜೆಡಿಎಸ್ʼ, ‘ದಳಪತಿಗಳುʼ ಸೇರಿ ಅನೇಕ ಗ್ರೂಪ್‌ಗಳಿಂದ ಭಾನುವಾರ (ಜೂನ್ 26) ಸಂಜೆಯಿಂದ ಹೊರನಡೆದಿದ್ದಾರೆ. ಕಳೆದ ಕೆಲ ದಿನಗಳಿಂದ ಜೆಡಿಎಸ್ ನಾಯಕರ ಜತೆ ಅಂತರವನ್ನು ಕಾಯ್ದುಕೊಂಡಿದ್ದ ಶಾಸಕರ ನಡೆ, ಪಕ್ಷದಿಂದ ಹೊರನಡೆಯುವ ಮುನ್ಸೂಚನೆ ಎಂದೇ ಭಾವಿಸಲಾಗಿದೆ.
ಈ ಹಿಂದೆ ಶಿವಲಿಂಗೇಗೌಡ ವಿರುದ್ಧ ಜೆಡಿಎಸ್ ವರಿಷ್ಠ ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಬಹಿರಂಗ ಸಭೆಯಲ್ಲೇ ಅಸಮಾಧಾನ ಹೊರಹಾಕಿದ್ದರು. ಇದಾದ ಬಳಿಕ ಜೆಡಿಎಸ್‌ನ ಎಲ್ಲಾ ಕಾರ್ಯಕ್ರಮಗಳಿಂದ ಶಿವಲಿಂಗೇಗೌಡ ದೂರ ಉಳಿದಿದ್ದರು. ಇತ್ತೀಚೆಗೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಶಿವಲಿಂಗೇಗೌಡ ಅಡ್ಡಮತದಾನ ಮಾಡುತ್ತಾರೆ ಎನ್ನಲಾಗಿತ್ತು. ಆದರೆ ಜೆಡಿಎಸ್ ಅಭ್ಯರ್ಥಿಗೇ ಮತ ಚಲಾಯಿಸಿದ್ದರು. ಮತದಾರರು ತಮ್ಮನ್ನು ಜೆಡಿಎಸ್ ಶಾಸಕನಾಗಿ ಆಯ್ಕೆ ಮಾಡಿದ್ದಾರೆ, ಹಾಗಾಗಿ ಅವರಿಗೆ ದ್ರೋಹ ಮಾಡುವುದಿಲ್ಲ ಎಂದಿದ್ದರು. ಜೆಡಿಎಸ್ ನಾಯಕರ ಜತೆ ಅಸಮಾಧಾನ ಇರುವುದನ್ನು ಖಚಿತಪಡಿಸಿದ್ದ ಶಿವಲಿಂಗೇಗೌಡ, ಪಕ್ಷದಿಂದ ಹೊರನಡೆಯುವುದನ್ನು ಪರೋಕ್ಷವಾಗಿ ಪುಷ್ಠೀಕರಿಸಿದ್ದರು. ಇದೀಗ ತಾವಿದ್ದ ವಾಟ್ಸ್‌ಆ್ಯಪ್ ಗ್ರೂಪ್‌ಗಳಿಂದಲೂ ಹೊರನಡೆದಿದ್ದಾರೆ.
ಇದನ್ನೂ ಓದಿ | ಅಡ್ಡಮತದಾನದ ಮೂಲಕ ನಿಷ್ಠೆಯ ಪರೀಕ್ಷೆ: ಜೆಡಿಎಸ್ ಶಾಸಕರೇ ಟಾರ್ಗೆಟ್ ಏಕೆ?
ಈ ವಿಚಾರಕ್ಕೆ ಸಂಬಂಧಿಸಿ ಮಾಜಿ ಸಚಿವ ಎಚ್.ಡಿ. ರೇವಣ್ಣ ಪ್ರತಿಕ್ರಿಯಿಸಿದ್ದು, ರಾಜ್ಯಸಭೆ ಚುನಾವಣೆಯಲ್ಲಿ ಶಿವಲಿಂಗೇಗೌಡ ಬಂದು ಓಟು ಹಾಕಿದ್ದಾರೆ. ನನ್ನ ಬಳಿ ಇನ್ನೂ ಸಂಪರ್ಕದಲ್ಲಿದ್ದಾರೆ. ಶಿವಲಿಂಗೇಗೌಡ ನೇತೃತ್ವದಲ್ಲೇ ಎಂಎಲ್‌ಸಿ ಚುನಾವಣೆ ಮಾಡಿದ್ದೇವೆ. ವಾಟ್ಸ್‌ಆ್ಯಪ್ ಗ್ರೂಪ್‌ಗಳಿಂದ ಹೊರಬಂದಿರುವ ಬಗ್ಗೆ ವಿಚಾರಿಸುತ್ತೇನೆ ಎಂದು ಹೇಳಿದರು.
ಜೆಡಿಎಸ್‌ನ ಇಬ್ಬರು ಶಾಸಕರನ್ನು ಉಚ್ಚಾಟನೆ ಮಾಡಿದ ಕುರಿತು ಪ್ರತಿಕ್ರಿಯಿಸಿದ ರೇವಣ್ಣ, ರಾಜ್ಯಸಭೆ ಚುನಾವಣೆಯಲ್ಲಿ ಇಬ್ಬರೂ ಅಡ್ಡಮತದಾನ ಮಾಡಿದ್ದರು. ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್, ಕೋಲಾರ ಶಾಸಕ ಶ್ರೀನಿವಾಸ್‌ಗೌಡ ಇಬ್ಬರೂ ನಮ್ಮ ಪಕ್ಷದ ವಿಪ್ ಉಲ್ಲಂಘನೆ ಮಾಡಿದ್ದಾರೆ. ಈ ಬಗ್ಗೆ ನನ್ನ ಹತ್ತಿರ ರಿಪೋರ್ಟ್ ಕೇಳಿದ್ದರು. ಅವರು ಅಡ್ಡಮತದಾನ ಮಾಡಿರುವುದನ್ನು ರಿಪೋರ್ಟ್ ನೀಡಿದ್ದೇನೆ. ಸ್ಪೀಕರ್ ಅವರಿಗೆ ದೂರು ಕೊಟ್ಟು ಇಬ್ಬರನ್ನೂ ಶಾಸಕ ಸ್ಥಾನದಿಂದ ಅನರ್ಹ ಮಾಡುವಂತೆ ಒತ್ತಾಯ ಮಾಡುತ್ತೇನೆ ಎಂದರು.
ಸಿಂಧನೂರು ಪಟ್ಟಣದಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ, ನನ್ನ ವಾಟ್ಸ್‌ಆ್ಯಪ್‌ನಲ್ಲಿ 2 ಸಾವಿರ ಗ್ರೂಪ್ ಇದ್ದವು. ಹೀಗಾಗಿ ಮೊಬೈಲ್ ಹ್ಯಾಂಗ್ ಆಗಿತ್ತು. ಅದಕ್ಕಾಗಿ ಡಿಲೀಟ್ ಕೂಡ ಮಾಡಿದ್ದೆ. ಶಿವಲಿಂಗಣ್ಣ ಅವರಿಗೂ ಹೀಗಾಗಿರಬೇಕಷ್ಟೆ. ಅವರು ನಮ್ಮ ಜತೆ ಇರುತ್ತಾರೆ. ಜನರನ್ನು ತಪ್ಪು ದಾರಿಗೆ ಎಳಿಯಬೇಡಿ ಎಂದು ಮಾಧ್ಯಮಗಳಿಗೇ ಬುದ್ಧಿವಾದ ಹೇಳಿದರು.
ಜೆಡಿಎಸ್‌ನಲ್ಲಿ ಉಚ್ಚಾಟನೆ ಪ್ರಕರಣ ಹೆಚ್ಚುತ್ತಿರುವ ವಿಚಾರಕ್ಕೆ ಪ್ರಜ್ವಲ್ ರೇವಣ್ಣ ಪ್ರತಿಕ್ರಿಯಿಸಿ, ತಪ್ಪು ಮಾಡದೇ ಇರುವುದಕ್ಕೆ ನಾವೇನೂ ದೇವರುಗಳಲ್ಲ. 10 ಜನ ದುಷ್ಟರು ಹೋದರೆ, ನೂರು ಜನ ಒಳ್ಳೆಯವರು ಬರುತ್ತಾರೆ. ಪಕ್ಷ ನಿಷ್ಠೆಗೆ ಧಕ್ಕೆ ಆದರೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಇದನ್ನೂ ಓದಿ | ಜೆಡಿಎಸ್ ತೊರೆದ ಹೆಚ್.ಆರ್. ಶ್ರೀನಾಥ್, ಮತ್ತೆ ಕಾಂಗ್ರೆಸ್ ಸೇರಲು ಸಿದ್ಧತೆ