ಶಿವಮೊಗ್ಗ: ಮಲೆನಾಡಿಗೆ ಪ್ರದೇಶಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒಂದು ಕಾಣಿಕೆ. ನಮ್ಮ ನಾಯಕರಾದ ಯಡಿಯೂರಪ್ಪ ಅವರ ಕನಸು ನನಸಾಗುತ್ತಿದೆ. ಮಲೆನಾಡಿನ ಅಭಿವೃದ್ಧಿಗೆ ಅವರು ಬಹಳವೇ ಶ್ರಮಿಸಿದ್ದಾರೆ. ಅವರ ಪರಿಶ್ರಮದ ಫಲವಾಗಿ ಇಂದು ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ (Shivamogga Airport) ಸ್ಥಾಪಿತವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕಾಲದಲ್ಲಿ ಅತಿ ಹೆಚ್ಚು ವಿಮಾನ ನಿಲ್ದಾಣ ಸ್ಥಾಪನೆಯಾಗಿವೆ. ಈ ಭಾಗದಲ್ಲಿ ಜನರಿಗೆ ವಿಮಾನ ನಿಲ್ದಾಣದಿಂದ ಬಹಳಷ್ಟು ಅನುಕೂಲವಾಗಲಿದೆ. ಅಲ್ಲದೆ, ಇದು ಯಡಿಯೂರಪ್ಪ ಅವರ ಹುಟ್ಟುಹಬ್ಬದಂದೇ ಉದ್ಘಾಟನೆಯಾಗುತ್ತಿರುವುದು ದೈವಿಚ್ಛೆ ಎಂದು ಹೇಳಿದರು.
ಏರ್‌ಪೋರ್ಟ್‌ನತ್ತ ಸಿಎಂ, ಮಾಜಿ ಸಿಎಂ
ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ವಿಮಾನದ ಮೂಲಕ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಕಾರಣ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಂಸದ ಬಿ.ವೈ. ರಾಘವೇಂದ್ರ ಸೇರಿದಂತೆ ಮತ್ತಿತರ ಗಣ್ಯರು ಶಿವಮೊಗ್ಗ ವಿಮಾನ ನಿಲ್ದಾಣದತ್ತ ಆಗಮಿಸಿದ್ದಾರೆ. ಅಲ್ಲದೆ, 5ಕ್ಕೂ ಹೆಚ್ಚು ಕಾರುಗಳಲ್ಲಿ ಬಿಎಸ್‌ವೈ ಕುಟುಂಬಸ್ಥರು ಆಗಮಿಸಿದ್ದರು. ಅರುಣಾದೇವಿ, ಉಮಾದೇವಿ ಸೇರಿದಂತೆ ಮಕ್ಕಳು-ಮೊಮ್ಮಕ್ಕಳು ಆಗಮಿಸಿದ್ದರು.
ಇದನ್ನೂ ಓದಿ: BS Yediyurappa : ಅಪ್ಪ ಈಗಲೂ 25 ವರ್ಷದ ಯುವಕನಂತೆ, ಬೆಳಗ್ಗೆ 15 ನ್ಯೂಸ್‌ಪೇಪರ್ ಓದಿ ಆಯ್ತು!; ಮಗಳು ಅರುಣಾ ಅಭಿಮಾನದ ಮಾತು
11.45ಕ್ಕೆ ಮೋದಿ ಆಗಮನ
ಬೆಳಗ್ಗೆ 11.35ಕ್ಕೆ ವಿಶೇಷ ವಿಮಾನದಲ್ಲಿ ಶಿವಮೊಗ್ಗಕ್ಕೆ ಮೋದಿ ಆಗಮಿಸಲಿದ್ದು, ಈ ವಿಮಾನವೇ ಅಧಿಕೃತವಾಗಿ ಲ್ಯಾಂಡ್ ಆಗಲಿರುವ ಪ್ರಥಮ ವಿಮಾನವಾಗಲಿದೆ. 11.45 ರಿಂದ 11.55ರ ವರೆಗೆ ವಿಮಾನ ನಿಲ್ದಾಣದ ಟರ್ಮಿನಲ್ ಅನ್ನು ಮೋದಿ ವೀಕ್ಷಣೆ ನಡೆಸಲಿದ್ದು, ಮಧ್ಯಾಹ್ನ 12 ಗಂಟೆಗೆ ಸಾರ್ವಜನಿಕ ಸಭೆಯಲ್ಲಿ ಏರ್ಪೋರ್ಟ್ ಅನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಅಲ್ಲದೆ, ಇದು ರಾಜ್ಯದಲ್ಲೇ ೨ನೇ ಅತಿ ದೊಡ್ಡ ವಿಮಾನ ನಿಲ್ದಾಣ ಎಂಬ ಖ್ಯಾತಿಯನ್ನೂ ಹೊಂದಿದೆ.
ವಿಮಾನ ನಿಲ್ದಾಣ ಮತ್ತು ಇತರೆ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ 1 ಲಕ್ಷ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. 2 ಕಡೆ ಊಟದ ವ್ಯವಸ್ಥೆ ಇದ್ದು, ಒಂದೊಂದು ಕಡೆ 100 ಕೌಂಟರ್‌ಗಳನ್ನು ತೆರೆಯಲಾಗುತ್ತಿದೆ. ಕಾರ್ಯಕ್ರಮದ ವೀಕ್ಷಣೆಗೆ 4 ಕಡೆ ವಿಶಾಲವಾದ ಪ್ರೊಜೆಕ್ಟರ್‌ಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಜತೆಗೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ವಿವರ
ಒಟ್ಟು 775 ಎಕರೆ ವಿಸ್ತೀರ್ಣದಲ್ಲಿ 449.22 ಕೋಟಿ ರೂ. ವೆಚ್ಚದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಎಟಿಆರ್ 72ರಿಂದ ಏರ್‌ಬಸ್ 320 ರವರೆಗೆ ಎಲ್ಲ ರೀತಿಯ ವಿಮಾನಗಳು ಹಗಲು-ರಾತ್ರಿ ಕಾರ್ಯಾಚರಣೆಗೆ ಅನುಕೂಲವಾಗುವಂತೆ 3.2 ಕಿ.ಮೀ. ರನ್ ವೇ ಹಾಗೂ 4320 ಚದರ ಅಡಿ ವಿಸ್ತೀರ್ಣದ ಸುಸಜ್ಜಿತ ಪ್ಯಾಸೆಂಜರ್ ಟರ್ಮಿನಲ್ ಅನ್ನು ನಿರ್ಮಾಣ ಮಾಡಲಾಗಿದೆ. ಏರ್ ಟ್ರಾಫಿಕ್ ಸೆಂಟರ್ ಸೇರಿದಂತೆ ಇನ್ನಿತರೆ ಸೌಲಭ್ಯಗಳೊಂದಿಗೆ ನಿರ್ಮಿಸಲಾಗಿದೆ.
ಇದನ್ನೂ ಓದಿ: Shivamogga Airport: ಇಂದು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ, ತಿಳಿಯಲೇಬೇಕಾದ 5 ಅಂಶ ಇಲ್ಲಿವೆ
995 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ 103 ಕಿ.ಮೀ. ಉದ್ದದ ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲು ಮಾರ್ಗದ ಶಂಕುಸ್ಥಾಪನೆ, 97.18 ಕೋಟಿ ರೂ. ವೆಚ್ಚದಲ್ಲಿ ಕೋಟೆಗಂಗೂರಿನಲ್ಲಿ ರೈಲ್ವೆ ಕೋಚಿಂಗ್ ಡಿಪೋ, ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ 862 ಕೋಟಿ ರೂ. ಮೊತ್ತದ ಕಾಮಗಾರಿ ಶಂಕುಸ್ಥಾಪನೆ ಮತ್ತು 91.50 ಕೋಟಿ ರೂ. ಮೊತ್ತದ ಕಾಮಗಾರಿ ಲೋಕಾರ್ಪಣೆ ನಡೆಯಲಿದೆ.
66.44 ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ 766ಸಿ ಬೈಂದೂರು-ರಾಣೆಬೆನ್ನೂರು ರಸ್ತೆಯಲ್ಲಿ 14.77 ಕಿಮೀ ಉದ್ದದ ಶಿಕಾರಿಪುರ ಬೈಪಾಸ್ ನಿರ್ಮಾಣ, 96.20 ಕೋಟಿ ರೂ. ವೆಚ್ಚದಲ್ಲಿ ರಾ.ಹೆ. 169ಎ ತೀರ್ಥಹಳ್ಳಿ-ಮಲ್ಪೆ ರಸ್ತೆಯ ಮೇಗರವಳ್ಳಿಯಿಂದ ಆಗುಂಬೆವರೆಗೆ 17.77 ಕಿ.ಮೀ ದ್ವಿಪಥ ರಸ್ತೆ ಅಗಲೀಕರಣ ಕಾಮಗಾರಿ, 56.56 ಕೋಟಿ ರೂ. ವೆಚ್ಚದಲ್ಲಿ ರಾ.ಹೆ 169 ಶಿವಮೊಗ್ಗ-ಮಂಗಳೂರು ರಸ್ತೆಯ ತೀರ್ಥಹಳ್ಳಿ ತಾಲೂಕಿನ ಭಾರತೀಪುರ ಬಳಿ 1.29 ಕಿ.ಮೀ ರಸ್ತೆ ನಿರ್ಮಾಣ ಮತ್ತು ತಿರುವಿನ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.
ಇದನ್ನೂ ಓದಿ: PM-KISAN 13th Installment: ರೈತರ ಖಾತೆಗೆ ಇಂದು 2 ಸಾವಿರ ರೂ. ಜಮಾ? ಫಲಾನುಭವಿ ಪಟ್ಟಿ ಚೆಕ್ ಮಾಡುವುದು ಹೇಗೆ?
ಒಟ್ಟು 896.16 ಕೋಟಿ ರೂ. ವೆಚ್ಚದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಾಣಗೊಂಡಿರುವ 44 ಯೋಜನೆಗಳ ಕಾಮಗಾರಿಗಳ ಲೋಕಾರ್ಪಣೆ, ಶಿಮುಲ್ ಶಿವಮೊಗ್ಗ ಕೇಂದ್ರ ಡೇರಿ ಆವರಣದಲ್ಲಿ 45 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಿರುವ 2 ಲಕ್ಷ ಲೀಟರ್ ಸಾಮರ್ಥ್ಯದ ಹಾಲು, ಮೊಸರು ಮತ್ತು ಮಜ್ಜಿಗೆ ಪ್ಯಾಕಿಂಗ್ ಘಟಕ ಕಟ್ಟಡ ಉದ್ಘಾಟನೆ ಹಾಗೂ ನಗರದ ಎಪಿಎಂಸಿ ಆವರಣದಲ್ಲಿ 8 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಮ್ಯಾಮ್ಕೋಸ್‌ನ 4 ಅಂತಸ್ತುಗಳ ಆಡಳಿತ ಕಚೇರಿ ಕಟ್ಟಡದ ಉದ್ಘಾಟನೆಯನ್ನು ಪ್ರಧಾನಿ ನೆರವೇರಿಸಲಿದ್ದಾರೆ.