Site icon Vistara News

Shivamogga attack | ಯಾರಾದ್ರೂ ತಂಗಿ ನಂಬರ್‌ ಕೇಳ್ತಾರಾ: ಎಸ್‌ಪಿ ಹೇಳಿಕೆ ಬಗ್ಗೆ ಶಾಸಕ ಹರತಾಳು ಹಾಲಪ್ಪ ಸಂಶಯ

Haratalu Halappa

ಶಿವಮೊಗ್ಗ: ಸಾಗರದ ನೆಹರೂ ನಗರದಲ್ಲಿ ಬಜರಂಗ ದಳ ನಗರ ಸಹ ಸಂಚಾಲಕ ಸುನಿಲ್‌ ಮೇಲೆ ನಡೆದಿರುವ ಕೊಲೆ ಯತ್ನ ವೈಯಕ್ತಿಕ ವಿಚಾರ (Shivamogga attack) ಎಂಬ ಎಸ್‌ಪಿ ಮಿಥುನ್‌ ಕುಮಾರ್‌ ಅವರ ಹೇಳಿಕೆಯ ಬಗ್ಗೆ ಸಾಗರ ಶಾಸಕ ಹರತಾಳು ಹಾಲಪ್ಪ ಸಂಶಯ ವ್ಯಕ್ತಪಡಿಸಿದ್ದಾರೆ.

ಕೊಲೆಗೆ ಯತ್ನಿಸಿದವರನ್ನು ೧೮ ಗಂಟೆಯಲ್ಲಿ ಬಂಧಿಸುವ ಮೂಲಕ ಪೊಲೀಸರು ಒಳ್ಳೆಯ ಕೆಲಸ ಮಾಡಿದ್ದಾರೆ. ಅದರೆ, ಎಸ್‌ಪಿಯವರ ಹೇಳಿಕೆ ಮಾತ್ರ ಸಂಶಯಾಸ್ಪದವಾಗಿದೆ ಎಂದು ಹರತಾಳು ಹಾಲಪ್ಪ ಹೇಳಿದ್ದಾರೆ. ಸುನಿಲ್‌ ಎಂಬಾತ ಸಮೀರ್‌ನ ತಂಗಿಯನ್ನು ಚುಡಾಯಿಸುತ್ತಿದ್ದ. ಈ ಕಾರಣಕ್ಕಾಗಿ ಹಲವು ಬಾರಿ ಎಚ್ಚರಿಕೆ ನೀಡಲಾಗಿತ್ತು. ಆದರೂ ಕೇಳದೆ ಚುಡಾಯಿಸುವುದನ್ನು ಮುಂದುವರಿಸಿದಾಗ ಹಲ್ಲೆಗೆ ಮುಂದಾಗಿದ್ದಾನೆ ಎಂದು ಎಸ್‌ಪಿ ಹೇಳಿದ್ದರು. ಆದರೆ ಇದು ನಂಬುವಂಥ ಹೇಳಿಕೆಯಲ್ಲ ಎಂದಿದಾರೆ ಶಾಸಕ ಹರತಾಳು ಹಾಲಪ್ಪ.

ಸಾಗರದಲ್ಲಿ ಹೇಳಿಕೆ ನೀಡಿದ ಶಾಸಕ ಹರತಾಳು ಹಾಲಪ್ಪ, ʻʻಬಜರಂಗ ದಳದ ಮುಖಂಡ ಸುನೀಲ್ ಮೇಲೆ ಹಲ್ಲೆ ಯತ್ನ ಮಾಡಿದ ಮೂವರು ಆರೋಪಿಗಳನ್ನು ಪೊಲೀಸರು 18 ಗಂಟೆಯಲ್ಲಿ ಬಂಧಿಸಿದ್ದಾರೆ. ಘಟನೆ ಖಂಡಿಸಿ ಇಂದು ಸಾಗರ ಬಂದ್ ಕೂಡ ಯಶಸ್ವಿಯಾಗಿದೆ. ಹಲ್ಲೆಗೆ ಕಾರಣ ಏನೇ ಆಗಿರಲಿ ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು. ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕುʼʼ ಎಂದರು.

ʻʻಪೊಲೀಸರು ಆರೋಪಿಗಳನ್ನು ಬಂಧಿಸುವ ಕೆಲಸ ಮಾಡಿರುವುದು ಅಭಿನಂದನೀಯ. ಆದರೆ, ಎಸ್ಪಿ ನೀಡಿರುವ ಹೇಳಿಕೆ ಸಂಶಯಾಸ್ಪದವಾಗಿದೆ. ಯಾರಾದರೂ ತಂಗಿಯ ನಂಬರ್ ಕೊಡುವಂತೆ ಹೇಳ್ತಾರಾ?ʼʼ ಎಂದು ಕೇಳಿದ್ದಾರೆ.

ʻʻಸಮೀರ್‌ ಕುರಿಗಳಿಗೆ ಹುಲ್ಲು ತರಲು ಹೋಗುತ್ತಿದ್ದ ಎಂದು ಎಸ್‌ಪಿ ಹೇಳಿದ್ದಾರಲ್ಲಾ.. ಅವನೆಷ್ಟು ಕುರಿ ಸಾಕಿದ್ದಾನೆʼʼ ಎಂದು ಪ್ರಶ್ನಿಸಿರುವ ಅವರು, ʻʻಕ್ರಿಕೆಟ್ ಆಟ ಆಡಿ ಬಂದು ಲಾಡ್ಜ್‌ನಲ್ಲಿ ಉಳಿದಿದ್ದಾರೆ ಅಂದರೆ ಯಾರಾದರೂ ಹಾಗೆ ಮಾಡುತ್ತಾರಾ? ಅವರ ಉದ್ದೇಶವೇನುʼʼ ಎಂದೂ ಕೇಳಿದ್ದಾರೆ.

ʻʻಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ಪೊಲೀಸರು ಈಗ ಆರೋಪಿ ಹೇಳಿದ್ದನ್ನು ಹೇಳಿದ್ದಾರೆ. ಇದರ ಹಿಂದೆ ಇಷ್ಟೇ ಇರುವುದಲ್ಲ. ಎಲ್ಲವೂ ತನಿಖೆಯಿಂದ ಬಯಲಾಗಬೇಕುʼʼ ಎಂದು ಅವರು ಆಗ್ರಹಿಸಿದರು. ತನಿಖೆ ನಿಷ್ಪಕ್ಷಪಾತವಾಗಿ ನಡೆಯಲಿ ಎಂದು ಹೇಳಿದರು.

ಸಮೀರ್‌ ಸೋದರಿ ನಭಾ ಶೇಖ್‌ ಹೇಳಿದ್ದೇನು?
ʻʻಸುನಿಲ್‌ ನನ್ನನ್ನು ಪೀಡಿಸುತ್ತಿದ್ದ. ಹಿಜಾಬ್ ತೆಗೆಯುವಂತೆ ಒತ್ತಾಯಿಸುತ್ತಿದ್ದ. ಕಳೆದ ವರ್ಷ ಹಿಜಾಬ್ ಗಲಾಟೆ ನಂತರ ಪೀಡನೆ ಹೆಚ್ಚಾಗಿತ್ತು. ನಾನು ಈ ವಿಷಯವನ್ನು ಅಣ್ಣನಿಗೆ ಹೇಳಿದ್ದೆʼʼ ಎಂದು ಸಭಾ ಶೇಖ್‌ ಹೇಳಿದ್ದಾರೆ.

ʻʻನನ್ನ ಅಣ್ಣ ಸಮೀರ್ ಯಾರನ್ನೂ ಹೊಡೆಯುವುದು, ಬಡಿಯುವುದು ಮಾಡಿದವನಲ್ಲ. ಆತ ಯಾವ ಸಂಘಟನೆಗೂ ಸೇರಿದವನಲ್ಲ. ಅವನ ವಿರುದ್ಧ ಇದುವರೆಗೂ ಯಾವುದೇ ಪ್ರಕರಣವಿಲ್ಲ. ಅವನು ನನ್ನ ವಿಚಾರಕ್ಕೆ ಸಂಬಂಧಿಸಿ ಸುನಿಲ್‌ನನ್ನು ಹೆದರಿಸಲು ಹೀಗೆ ಮಾಡಿರಬಹುದುʼʼ ಎಂದು ಸಭಾ ಶೇಖ್‌ ಹೇಳಿದ್ದಾರೆ.

ಎಸ್‌ಪಿ ಮಿಥುನ್‌ ಕುಮಾರ್‌ ಹೇಳಿದ್ದೇನು?
ಇದಕ್ಕಿಂತ ಮೊದಲು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ್ದ ಎಸ್‌ಪಿ ಮಿಥುನ್‌ ಕುಮಾರ್‌ ಘಟನೆಯ ಹಿನ್ನೆಲೆಯ ವಿವರ ನೀಡಿದರು.
ಸಾಗರದಲ್ಲಿ ನಡೆದಿರುವ ಘಟನೆ ವೈಯಕ್ತಿಕವಾದುದು. ಬಜರಂಗದಳದ ಸಹಸಂಚಾಲಕರಾಗಿರುವ ಸುನಿಲ್, ತನ್ನ ಸೋದರಿಯನ್ನು ಚುಡಾಯಿಸುತ್ತಿದ್ದ ಹಿನ್ನೆಲೆಯಲ್ಲಿ ಸಮೀರ್‌ ವೈಯಕ್ತಿಕ ದ್ವೇಷದಿಂದ ಈ ಕೃತ್ಯ ನಡೆಸಿದ್ದಾನೆ ಎಂದು ತಿಳಿಸಿದರು.

ಸುನಿಲ್‌ ಕಳೆದ ನಾಲ್ಕೈದು ತಿಂಗಳಿನಿಂದ ಚುಡಾಯಿಸುತ್ತಿದ್ದ. ಈ ವಿಷಯದಲ್ಲಿ ಸಮೀರ್‌ ಹಲವು ಬಾರಿ ಸುನಿಲ್‌ಗೆ ಎಚ್ಚರಿಕೆಯನ್ನೂ ನೀಡಿದ್ದ ಎನ್ನಲಾಗಿದೆ. ಇಷ್ಟಾಗಿಯೂ ಸುನಿಲ್‌, ಸಮೀರ್‌ನ ತಂಗಿಯ ಫೋನ್‌ ಕೂಡಾ ನಂಬರ್‌ ಕೂಡಾ ಕೇಳಿದ್ದ ಎನ್ನಲಾಗಿದೆ. ಹೀಗಾಗಿ ಸಮೀರ್, ಸುನಿಲ್ ವಿರುದ್ಧ ಸಿಕ್ಕಾಪಟ್ಟೆ ಸಿಟ್ಟಾಗಿದ್ದ ಎಂದು ಎಸ್‌ಪಿ ವಿವರಿಸಿದ್ದಾರೆ.

ʻʻಎರಡ್ಮೂರು ಬಾರಿ ಸಮೀರ್ ಸುನಿಲ್‌ಗೆ ಎಚ್ಚರಿಕೆ ನೀಡಿದ್ದ. ತಂಗಿಯ ವಿಷಯಕ್ಕೆ ಬರಬೇಡ ಎಂದು ಹೇಳಿದ್ದಾನೆ. ಆದರೆ, ಸುನಿಲ್‌ ಮತ್ತೆ ಮತ್ತೆ ತನ್ನ ಚಾಳಿ ಮುಂದುವರಿಸಿದ್ದ. ಸೋಮವಾರ ಸಮೀರ್‌ ಮೇಕೆಗೆ ಹುಲ್ಲು ತರಲೆಂದು ಹೊರಟಿದ್ದ. ಈ ಸಂದರ್ಭದಲ್ಲಿ ಸುನಿಲ್‌ ದ್ವಿಚಕ್ರ ವಾಹನದಲ್ಲಿ ಬಂದಿದ್ದ. ಆಗ ಹುಲ್ಲು ಕೊಯ್ಯಲೆಂದು ಹಿಡಿದಿದ್ದ ಕತ್ತಿಯನ್ನೇ ಹಿಡಿದು ಆತನ ಕಡೆಗೆ ಧಾವಿಸಿದ್ದ. ಈ ನಡುವೆ ಅವರಿಬ್ಬರು ಬೈದಾಡಿಕೊಂಡಿದ್ದಾರೆʼʼ ಎಂದು ಪೊಲೀಸರು ತಿಳಿಸಿದರು.

ಇದನ್ನೂ ಓದಿ | Shivamogga attack | ಸುನಿಲ್‌ ಕೊಲೆ ಯತ್ನಕ್ಕೆ ಟ್ವಿಸ್ಟ್‌: ಸಮೀರ್‌ನ ಸೋದರಿಯನ್ನು ಚುಡಾಯಿಸಿದ್ದೇ ಕಾರಣ ಎಂದ ಎಸ್‌ಪಿ

Exit mobile version