Site icon Vistara News

Shivamogga attack | ಬಜರಂಗ ದಳ ಮುಖಂಡನ ಕೊಲೆ ಯತ್ನ ಖಂಡಿಸಿ ಸಾಗರ ಬಂದ್‌, ಆಜಾದ್‌ ರಸ್ತೆಯಲ್ಲಿ ಉದ್ವಿಗ್ನ ಸ್ಥಿತಿ

sagara bundh

ಶಿವಮೊಗ್ಗ: ಬಜರಂಗ ದಳದ ಸಾಗರ ನಗರ ಸಹ ಸಂಚಾಲಕ ಸುನಿಲ್‌ ಅವರನ್ನು ತಲವಾರಿನಿಂದ ಕಡಿದು ಕೊಲೆಗೈಯಲು (Shivamogga attack) ಯತ್ನಿಸಿದ ಪ್ರಕರಣವನ್ನು ಖಂಡಿಸಿ ಹಿಂದು ಸಂಘಟನೆಗಳು ಕರೆ ನೀಡಿರುವ ಸಾಗರ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದರೆ, ಮುಸ್ಲಿಂ ವ್ಯಾಪಾರಿಗಳೇ ದೊಡ್ಡ ಸಂಖ್ಯೆಯಲ್ಲಿರುವ ಆಜಾದ್‌ ರಸ್ತೆಯಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿಲ್ಲ. ಹೀಗಾಗಿ ಆ ಭಾಗದಲ್ಲಿ ಸ್ವಲ್ಪ ಮಟ್ಟಿಗೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಬಜರಂಗ ದಳದ ನಗರ ಸಹ ಸಂಚಾಲಕ ಸುನೀಲ್ ಅವರು ಸೋಮವಾರ ಬೆಳಗ್ಗೆ ಬೈಕ್‍ನಲ್ಲಿ ತಮ್ಮ ಮನೆಯಿಂದ ಬಿ.ಎಚ್.ರಸ್ತೆಯ ಆಭರಣ ಜ್ಯುವೆಲರ್ಸ್ ಪಕ್ಕದ ಜಿಯೋ ಕಚೇರಿಗೆ ಹೋಗುತ್ತಿದ್ದಾಗ ಸಮೀರ್‌ ಎಂಬಾತ ತಲವಾರಿನಿಂದ ಹಲ್ಲೆ ಮಾಡಲು ಮುಂದಾಗಿದ್ದ. ಅದೃಷ್ಟವಶಾತ್‌ ಸುನಿಲ್‌ ಕೂದಲೆಳೆ ಅಂತರದಿಂದ ತಪ್ಪಿಸಿಕೊಂಡಿದ್ದಾರೆ.

ಸಮೀರ್‌ನ ಪತ್ತೆಗಾಗಿ ಪೊಲೀಸರು ಮೂರು ತಂಡಗಳನ್ನು ರಚಿಸಿದ್ದ ಸಾಗರ ಟೌನ್ ಪೊಲೀಸರು ಸಮೀರ್‌ನನ್ನು ಬಂಧಿಸಿದ್ದಾರೆ. ಜತೆಗೆ ಆತನ ಜತೆ ಸೇರಿದ್ದಾರೆ ಎಂದು ಹೇಳಲಾದ ಇಮಿಯಾನ್‌ ಮತ್ತು ಮನ್ಸೂರ್‌ ಅವರನ್ನೂ ಬಂಧಿಸಲಾಗಿದೆ.

ಸುನಿಲ್‌ ಕೊಲೆ ಯತ್ನ ಖಂಡಿಸಿ ಹಿಂದು ಸಂಘಟನೆಗಳು ಸಾಗರ ಬಂದ್‌ಗೆ ಕರೆ ಕೊಟ್ಟಿದ್ದು, ಬೆಳಗಿನಿಂದಲೂ ಸಾಗರದ ಬಹುತೇಕ ಭಾಗಗಳು ಬಂದ್‌ ಆಗಿವೆ. ಹಿಂದು ಸಂಘಟನೆಗಳ ಕಾರ್ಯಕರ್ತರು ಬೆಳಗಿನಿಂದಲೇ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸುತ್ತಿರುವುದು ಕಂಡುಬಂತು.

ಸಾಗರದ ನೆಹರು ನಗರದಲ್ಲಿ ಸೋಮವಾರ ಮುಂಜಾನೆ ಸುನಿಲ್‌ ಮೇಲೆ ಹಲ್ಲೆಗೆ ಯತ್ನಿಸಿದ ಸ್ಥಳ

ಸಾಗರ ನಗರದಲ್ಲಿ ಅಲ್ಲೊಂದು ಇಲ್ಲೊಂದು ಅಂಗಡಿಗಳು ಓಪನ್‌ ಆಗಿದ್ದುದನ್ನು ಕಾರ್ಯಕರ್ತರು ಮುಚ್ಚಿಸಿದರು. ಸಾಗರದ ಜತೆಗೆ ತಾಳಗುಪ್ಪದಲ್ಲೂ ಬಂದ್‌ಗೆ ಬೆಂಬಲ ಸಿಕ್ಕಿದೆ.

ಆಜಾದ್‌ ರಸ್ತೆಯಲ್ಲಿ ಗೊಂದಲದ ವಾತಾವರಣ
ಈ ನಡುವೆ ಸಾಗರದಲ್ಲಿ ಅತಿ ಹೆಚ್ಚು ಮುಸ್ಲಿಂ ವ್ಯಾಪಾರಿಗಳಿರುವ ಆಜಾದ್‌ ರಸ್ತೆಯಲ್ಲಿ ವ್ಯಾಪಾರ ಎಂದಿನಂತೆಯೇ ನಡೆಯುತ್ತಿರುವುದು ಕಂಡುಬಂದಿದೆ. ಇದು ಹಿಂದು ಕಾರ್ಯಕರ್ತರನ್ನು ಕೆರಳಿಸಿದ್ದು, ಬೈಕ್‌ನಲ್ಲಿ ಹೋಗಿ ಅಂಗಡಿಗಳನ್ನು ಮುಚ್ಚುವಂತೆ ಆಗ್ರಹಿಸಿದರು. ಆದರೆ, ಅವರ ಮಾತಿಗೆ ಸೊಪ್ಪು ಹಾಕಿದಂತೆ ಕಾಣಲಿಲ್ಲ. ಪೊಲೀಸರೇ ಹಿಂದು ಕಾರ್ಯಕರ್ತರನ್ನು ಸಮಾಧಾನ ಮಾಡಿ ಕಳುಹಿಸಿದರು.

ಅಂಗಡಿ ಮುಚ್ಚುವುದಿಲ್ಲ ಎಂದು ಹಠ ಹಿಡಿದಿರುವ ಮುಸ್ಲಿಂ ವ್ಯಾಪಾರಿಗಳು

ಒತ್ತಡದ ಬಂದ್ ಗೆ ಮುಸ್ಲಿಮರು ವಿರೋಧ ವ್ಯಕ್ತಪಡಿಸಿದ್ದರಿಂದ ಆಜಾದ್ ರಸ್ತೆಯಲ್ಲಿ ತ್ವೇಷಮಯ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಒಂದು ಕಡೆ ಜೈಶ್ರೀರಾಮ್‌, ಇನ್ನೊಂದೆಡೆ ಅಲ್ಲಾಹು ಅಕ್ಬರ್ ಘೋಷಣೆ ಕೇಳಿಬಂದಿದೆ.

ಈ ನಡುವೆ, ಸಾಗರದ ಬೀದಿಗಳಲ್ಲಿ ದೊಡ್ಡ ಮಟ್ಟದ ಮೆರವಣಿಗೆ ಆರಂಭಗೊಂಡಿದೆ.

ಇದನ್ನೂ ಓದಿ | Shivamogga attack | ಬಜರಂಗ ದಳ ಸಹ ಸಂಚಾಲಕನ ಕೊಲೆ ಯತ್ನ: ಪ್ರಧಾನ ಆರೋಪಿ ಸಮೀರ್‌ ಪೊಲೀಸ್‌ ವಶಕ್ಕೆ

Exit mobile version