Site icon Vistara News

Shivamogga attack | ಬಜರಂಗ ದಳ ಸಹ ಸಂಚಾಲಕನ ಕೊಲೆ ಯತ್ನ: ಪ್ರಧಾನ ಆರೋಪಿ ಸಮೀರ್‌ ಪೊಲೀಸ್‌ ವಶಕ್ಕೆ

Shivamogga- sunil sameer

ಶಿವಮೊಗ್ಗ: ಸಾಗರ ಪಟ್ಟಣದ ನೆಹರೂ ನಗರದ ಬಜರಂಗ ದಳದ ನಗರ ಸಹ ಸಂಚಾಲಕ ಸುನೀಲ್ ಎಂಬುವವರ ಮೇಲೆ ತಲ್ವಾರ್ ನಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ (Shivamogga attack) ಆರೋಪಿ ಸಮೀರ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸುನಿಲ್‌ ಹತ್ಯಾ ಯತ್ನ ಖಂಡಿಸಿ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗ ದಳ, ಪರಿವಾರದ ಸಂಘಟನೆಗಳು ಕರೆ ನೀಡಿದ ಬಂದ್‌ ಸಾಗರದಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಪಡೆಯುತ್ತಿರುವ ನಡುವೆಯೇ ಪೊಲೀಸರು ಬಿರುಸಿನ ಕಾರ್ಯಾಚರಣೆ ನಡೆಸಿದ ಸಮೀರ್‌ನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಬಜರಂಗ ದಳದ ನಗರ ಸಹ ಸಂಚಾಲಕ ಸುನೀಲ್ ಎಂಬುವವರು ಸೋಮವಾರ ಬೆಳಗ್ಗೆ ಬೈಕ್‍ನಲ್ಲಿ ತಮ್ಮ ಮನೆಯಿಂದ ಬಿ.ಎಚ್.ರಸ್ತೆಯ ಆಭರಣ ಜ್ಯುವೆಲರ್ಸ್ ಪಕ್ಕದ ಜಿಯೋ ಕಚೇರಿಗೆ ಹೊರಟಿದ್ದರು. ಈ ಸಂದರ್ಭದಲ್ಲಿ ಅಂಗಡಿ ಎದುರು ಬೈಕ್ ನಿಲ್ಲಿಸುತ್ತಿದ್ದಾಗ ಸಮೀರ್‌ ಹತ್ತಿರ ಬಂದು ತಲ್ವಾರ್‌ ಬೀಸಿದ್ದಾನೆ. ಅದೃಷ್ಟವಶಾತ್‌ ಸುನಿಲ್‌ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡಿದ್ದಾರೆ. ಬಳಿಕ ಸುನಿಲ್‌ ಅಲ್ಲಿಂದ ದ್ವಿಚಕ್ರ ವಾಹನವನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಿ ಗೆಳೆಯರಿಗೆ ವಿಷಯ ತಿಳಿದಿದ್ದರು. ಸಮೀರ್‌ ಕೂಡಾ ಸುನಿಲ್‌ ಹೋದ ದಾರಿಯಲ್ಲೇ ಸಾಗಿದ್ದನಾದರೂ ನಂತರ ಕಣ್ಮರೆಯಾಗಿದ್ದ.

ಸಮೀರ್‌ನ ಪತ್ತೆಗಾಗಿ ಪೊಲೀಸರು ಮೂರು ತಂಡಗಳನ್ನು ರಚಿಸಿದ್ದರು. ಸಾಗರ ಟೌನ್ ಠಾಣೆಯಲ್ಲಿ ದಾಖಲಾದ ಎಫ್ಐಆರ್ ನಲ್ಲಿ ಸಾಗರದ ಸಮೀರ್‌ನನ್ನು ಎ1 ಆರೋಪಿ ಎಂದು ಗುರುತಿಸಲಾಗಿದೆ. ಫಾರೂಖ್‌ ಸೇರಿದಂತೆ ನಾಲ್ಕೈದು ಜನರ ವಿರುದ್ಧ ಸಹ ಎಫ್ಐಆರ್ ದಾಖಲಾಗಿದೆ. ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ 307, 149, 506, 504 ಅಡಿ ಕೇಸ್ ದಾಖಲಾಗಿದೆ. ಜೀವ ಬೆದರಿಕೆ, ಕೊಲೆ ಯತ್ನ ಸಂಬಂಧ ಪ್ರಕರಣ ದಾಖಲಾಗಿತ್ತು.

ಸೋಮವಾರ ರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ ಪೊಲೀಸರು ಸಮೀರ್‌ನನ್ನು ವಶಕ್ಕೆ ಪಡೆದಿದ್ದಾರೆ. ಆತನ ಪ್ರಾಥಮಿಕ ವಿಚಾರಣೆ ನಡೆಸಿ ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ. ಸಮೀರ್‌ನ ಉದ್ದೇಶವೇನಿತ್ತು ಎನ್ನುವುದು ಈಗ ಬಯಲಾಗಲಿದೆ.

ಇದನ್ನೂ ಓದಿ | Street dog attack | ಮಲಗಿದ್ದ ಭಿಕ್ಷುಕಿಯನ್ನು ಕಚ್ಚಿ ಕೊಂದ ಬೀದಿನಾಯಿಗಳು

Exit mobile version