ಶಿವಮೊಗ್ಗ: ಸಾಗರದ ಬಜರಂಗ ದಳದ ಸಹ ಸಂಚಾಲಕ ಸುನೀಲ್ ಹತ್ಯೆ ಯತ್ನ ಪ್ರಕರಣದಲ್ಲಿ (Shivamogga attack) ಮತ್ತೊಂದು ಟ್ವಿಸ್ಟ್ ಎದುರಾಗಿದೆ. ಹತ್ಯೆ ಯತ್ನಕ್ಕೆ ಒಳಗಾಗಿದ್ದಾನೆ ಎನ್ನಲಾದ ಸುನಿಲ್ ವಿರುದ್ಧ ಹತ್ಯೆ ಯತ್ನದ ಆರೋಪಿ ಸಭಾ ಕೌಸರ್ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸುನಿಲ್ ತನ್ನನ್ನು ಚುಡಾಯಿಸುತ್ತಿದ್ದು, ಫೋನ್ ನಂಬರ್ ಕೊಡುವಂತೆ ಒತ್ತಾಯಿಸುತ್ತಿದ್ದ ಎಂದು ಸಭಾ ಕೌಸರ್ ನೀಡಿದ ದೂರಿನಲ್ಲಿ ತಿಳಿಸಲಾಗಿದ್ದು, ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ʻʻನಾನು ಕಾಲೇಜು ಒಂದರಲ್ಲಿ ಅಂತಿಮ ವರ್ಷದ ಬಿಎಸ್ಸಿ ಮಾಡುತ್ತಿದ್ದೇನೆ. ಪ್ರತಿದಿನ ಕಾಲೇಜಿಗೆ ಹೋಗುವ ಮತ್ತು ಬರುವ ವೇಳೆ ಸುನೀಲ್ ಚುಡಾಯಿಸುತ್ತಿದ್ದ. ಫೋನ್ ನಂಬರ್ ಕೊಡುವಂತೆ ಚುಡಾಯಿಸುತ್ತಿದ್ದʼʼ ಎಂದು ದೂರಿನಲ್ಲಿ ಸಭಾ ಕೌಸರ್ ತಿಳಿಸಿದ್ದಾರೆ.
ಠಾಣೆಯ ಮುಂದೆ ಹೈಡ್ರಾಮಾ
ಸುನಿಲ್ ಹತ್ಯಾ ಯತ್ನಕ್ಕೆ ಹಿಂದು-ಮುಸ್ಲಿಂ ಕೋಮು ಭಾವನೆ ಕಾರಣವಲ್ಲ. ಬಜರಂಗದಳ ಸಹ ಸಂಚಾಲಕನಾಗಿರುವ ಸುನಿಲ್, ಹಲ್ಲೆ ಮಾಡಲು ಯತ್ನಿಸಿದ ಸಮೀರ್‌ನ ತಂಗಿಯನ್ನು ಚುಡಾಯಿಸುತ್ತಿದ್ದ. ಇದೇ ಕಾರಣಕ್ಕೆ ವೈಯಕ್ತಿಕವಾಗಿ ಹುಟ್ಟಿಕೊಂಡ ಜಗಳವಿದು ಎಂದು ಎಸ್‌ಪಿ ಮಿಥುನ್ ಕುಮಾರ್ ತಿಳಿಸಿದ್ದರು.
ಇದಾದ ಬೆನ್ನಿಗೇ ಸಂಜೆಯ ಹೊತ್ತಿಗೆ ಸಭಾ ಕೌಸರ್ ಅವರು ಸುನಿಲ್ ವಿರುದ್ಧ ದೂರು ನೀಡಲು ಟೌನ್ ಪೊಲೀಸ್ ಠಾಣೆಗೆ ಆಗಮಿಸಿದರು. ಆದರೆ, ಸಾಗರ ಪೊಲೀಸರು ಈ ವೇಳೆ ದೂರು ಪಡೆಯಲು ನಿರಾಕರಿಸಿದ್ದರು.
ಈ ಹಿನ್ನೆಲೆಯಲ್ಲಿ ಮುಸ್ಲಿಂ ಯುವಕರು ಮತ್ತು ಮುಖಂಡರು ಠಾಣೆಯ ಮುಂದೆ ಜಮಾಯಿಸಿದರು. ಈ ವೇಳೆ ಠಾಣೆಗೆ ಠಾಣೆಗೆ ಆಗಮಿಸಿ, ಮಾತುಕತೆ ನಡೆಸಿದ ಸಾಗರ ಡಿವೈಎಸ್ಪಿ ರೋಹನ್ ಜಗದೀಶ್ ಅವರು ಕೊನೆಗೆ ದೂರು ಸ್ವೀಕರಿಸಿ, ಸ್ವೀಕೃತಿ ಪತ್ರ ನೀಡಿದರು. ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರ ಒದಗಿಸುವುದಾಗಿ ಹೇಳಿ ಸಭಾ ಕೌಸರ್ ತೆರಳಿದರು. ಇಷ್ಟೆಲ್ಲ ಆಗುವಾಗ ರಾತ್ರಿ ೧೧ ಗಂಟೆ ಆಗಿತ್ತು.
ಇದನ್ನೂ ಓದಿ | Shivamogga attack | ಸುನಿಲ್ ನನ್ನನ್ನು ಪೀಡಿಸುತ್ತಿದ್ದ, ಅಣ್ಣ ಅವನನ್ನು ಹೆದರಿಸಲು ಹೋಗಿರಬೇಕು: ಸಮೀರ್ ತಂಗಿ ಹೇಳಿಕೆ