Site icon Vistara News

Shivamogga clash: ಗಂಡನಿಗೆ ಗುಂಡೇಟು ಬೀಳಲು ರಾಜಕಾರಣಿಗಳ ಒತ್ತಡ ಕಾರಣ ಎಂದ ಜಬಿವುಲ್ಲಾ ಪತ್ನಿ

kalige gundu

ಶಿವಮೊಗ್ಗ: ʻʻಆಗಸ್ಟ್‌ ೧೫ರಂದು ರಾತ್ರಿ ನನ್ನ ಪತಿಯನ್ನು ಮನೆಯಿಂದ ಕರೆದುಕೊಂಡು ಹೋದ ಪೊಲೀಸರು ಮರುದಿನ ಬೆಳಗ್ಗೆ ಕಾಲಿಗೆ ಗುಂಡು ಹೊಡೆದಿದ್ದಾರೆ. ಅವರು ಯಾವುದೇ ಗಲಭೆಯಲ್ಲಿ ಪಾಲ್ಗೊಂಡಿರಲಿಲ್ಲ. ಪೊಲೀಸರು ರಾಜಕಾರಣಿಗಳ ಒತ್ತಡದಿಂದ ನನ್ನ ಗಂಡನಿಗೆ ಗುಂಡು ಹಾರಿಸಿದ್ದಾರೆʼʼ – ಇದು ಶಿವಮೊಗ್ಗದಲ್ಲಿ ನಡೆದ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾದ ಆರೋಪಿ ಜಬೀವುಲ್ಲಾನ ಪತ್ನಿ ಶಬಾನಾ ಬಾನು ಮಾಡಿರುವ ನೇರ ಆರೋಪ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತನ್ನ ಪತಿ ಅಮಾಯಕ ಎಂದರು. ಮನೆಯಿಂದ ಕರೆದುಕೊಂಡು ಹೋಗಿ ಗುಂಡು ಹಾರಿಸಿದ್ದಾರೆ. ರಾಜಕಾರಣಿಗಳ ಒತ್ತಡಕ್ಕೆ ಮಣಿದು ನನ್ನ ಗಂಡನ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದರು. ಆಗಸ್ಟ್‌ ೧೫ರಂದು ಶಿವಮೊಗ್ಗ ಅಮೀರ್‌ ಅಹ್ಮದ್‌ ವೃತ್ತದಲ್ಲಿ ನಡೆದ ಸಾವರ್ಕರ್‌ ಫ್ಲೆಕ್ಸ್‌ ವಿವಾದ ತಾರಕಕ್ಕೇರಿ ಪೊಲೀಸರ ಮಧ್ಯ ಪ್ರವೇಶದಿಂದ ಸ್ವಲ್ಪ ತಣ್ಣಗಾದ ಬಳಿಕ ಪ್ರೇಮ್‌ ಸಿಂಗ್‌ ಎಂಬ ವ್ಯಾಪಾರಿಗೆ ಚೂರಿಯಿಂದ ಇರಿಯಲಾಗಿತ್ತು. ಈ ಘಟನೆ ಸಂಬಂಧ ನಾಲ್ವರನ್ನು ಬಂಧಿಸಲಾಗಿದ್ದು, ಜಬಿವುಲ್ಲಾ ಅಲಿಯಾಸ್‌ ಜಬಿ ಪ್ರಧಾನ ಆರೋಪಿ ಎಂದು ಹೇಳಲಾಗುತ್ತಿದೆ. ಆತನನ್ನು ಬಂಧಿಸಿ ಕರೆದೊಯ್ಯುವ ವೇಳೆ ಹಲ್ಲೆ ನಡೆಸಲು ಮುಂದಾದ. ಆತ್ಮರಕ್ಷಣೆಗಾಗಿ ಕಾಲಿಗೆ ಗುಂಡು ಹಾರಿಸಲಾಯಿತು ಎನ್ನುವುದು ಪೊಲೀಸರ ಮಾತು. ಅದನ್ನು ಪತ್ನಿ ಶಬಾನಾ ಬಾನು ಆಕ್ಷೇಪಿಸಿದ್ದಾರೆ.

ಶಬಾನಾ ಬಾನು ಹೇಳಿದ್ದೇನು?
-ಮನೆಯಲ್ಲಿದ್ದ ನನ್ನ ಗಂಡನನ್ನು ಕರೆದುಕೊಂಡು ಹೋಗಿ ಗುಂಡು ಹಾರಿಸಿದ್ದಾರೆ. ರಾಜಕಾರಣಿಗಳ ಒತ್ತಡಕ್ಕೆ ನನ್ನ ಗಂಡನ ಮೇಲೆ‌ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಮನೆಯಿಂದ ಜಬಿಯನ್ನು ಕರೆದುಕೊಂಡು ಹೋಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗುಂಡು ಹಾರಿಸಿದ್ದಷ್ಟೇ ಅಲ್ಲ, ಕೊಲ್ಲುವ ಬೆದರಿಕೆಯನ್ನೂ ಹಾಕಲಾಗಿದೆ.
– ಆ.೧೫ರಂದು ಶಿವಮೊಗ್ಗದಲ್ಲಿ ಗಲಾಟೆಯಾದಾಗ ನನ್ನ ಗಂಡ ಜಬಿ ಮನೆಯಲ್ಲಿದ್ದರು. ಗಲಾಟೆ ಮಾಹಿತಿ ತಿಳಿದು ನನ್ನ ಗಂಡ ಮನೆ ಬಿಟ್ಟು ಎಲ್ಲಿಯೂ ಹೋಗಿರಲಿಲ್ಲ. ಅದೇ ದಿನ ರಾತ್ರಿ ೯.೩೦ ಗಂಟೆಗೆ ನನ್ನ ಗಂಡ ಊಟ ಮಾಡುತ್ತಿರುವಾಗ ಪೊಲೀಸರು ಬಂದಿದ್ದರು.
– ಪೊಲೀಸರು ಕರೆದಾಗ ನನ್ನ ಗಂಡ ಊಟ ಮಾಡುವುದನ್ನು ಬಿಟ್ಟು ಹೊರಗೆ ಹೋದರು. ಇಬ್ಬರು ಪೊಲೀಸರು ನನ್ನ ಗಂಡನನ್ನು ಬೈಕ್‌ನಲ್ಲಿ ಕರೆದೊಯ್ದರು. ಪೊಲೀಸರನ್ನು ಪ್ರಶ್ನಿಸಿದಾಗ ೧೦ ನಿಮಿಷದಲ್ಲಿ ಬಿಡುವುದಾಗಿ ಹೇಳಿದ್ದರು. ಆದರೆ, ಆ.೧೬ರಂದು ಬೆಳಗ್ಗೆ ನನ್ನ ಗಂಡನಿಗೆ ಗುಂಡು ಹಾರಿಸಿದ್ದಾರೆ.
– ಕಾಲಿಗೆ ಗುಂಡು ಹಾರಿಸಿದ ಪೊಲೀಸರೇ ಅವರನ್ನು ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಗಂಡ ತಿಳಿಸಿದ್ದಾರೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ನನ್ನ ಗಂಡನನ್ನು ಭೇಟಿ ಆದಾಗ ಮುಖಕ್ಕೆ ಬಟ್ಟೆ ಕಟ್ಟಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿರುವುದು ಗೊತ್ತಾಯಿತು.
– ನನ್ನ ಗಂಡನ ಮೇಲೆ ಗುಂಡು ಹಾರಿಸಿದ್ದು ಪೂರ್ವ ನಿಯೋಜಿತ. ಇದು ಸ್ಯಾಂಪಲ್ ಫೈರಿಂಗ್ ಎಂಬ ಈಶ್ವರಪ್ಪ ಹೇಳಿಕೆಗೂ ಇದಕ್ಕೂ ಸಂಬಂಧವಿದೆ ಎಂದು ಅನಿಸುತ್ತದೆ. ಹಾಗಿದ್ದರೆ ಪೊಲೀಸರ ಮೇಲೆ ಯಾರ ಒತ್ತಡವಿತ್ತು?

ಇದನ್ನೂ ಓದಿ| Shivamogga Clash| ಮುಸ್ಲಿಂ ಮುಖಂಡ ಆಡಿದ ಪ್ರಚೋದನಾಕಾರಿ ಮಾತು ಪ್ರೇಮ್‌ ಸಿಂಗ್‌ಗೆ ಇರಿಯಲು ಪ್ರೇರಣೆ?

Exit mobile version