Site icon Vistara News

Shivamogga Clash: ಬೂದಿ ಮುಚ್ಚಿದ ಕೆಂಡದಂತಿರುವ ಶಿವಮೊಗ್ಗ, ನಗರ ಪೂರ್ತಿ ಸೆಕ್ಷನ್‌ 144 ಜಾರಿ

shivamogga section 144

ಶಿವಮೊಗ್ಗ: ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಗಲಭೆಯ (Shivamogga Clash) ಹಿನ್ನೆಲೆಯಲ್ಲಿ ನಗರವು ಬೂದಿ ಮುಚ್ಚಿದ ಕೆಂಡದಂತಿದ್ದು, 144 ಸೆಕ್ಷನ್ ಅನ್ನು ನಗರದಾದ್ಯಂತ ವಿಸ್ತರಣೆ ಮಾಡಲಾಗಿದೆ.

ಮಹಾನಗರ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಿಗೆ 144 section ಜಾರಿ ಮಾಡಲಾಗಿದ್ದು, ಸದ್ಯ ಶಾಂತಿ ನಗರದಲ್ಲಿ ಪರಿಸ್ಥಿತಿ ಹತೋಟಿಯಲ್ಲಿದೆ. ಶಾಂತಿನಗರದಲ್ಲಿ ಹೆಚ್ಚುವರಿ ಪೊಲೀಸ್‌ ಬಲ ನಿಯೋಜನೆ ಮಾಡಲಾಗಿದೆ. ನಗರದ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿದೆ. ಬೆಳ್ಳಂಬೆಳಗ್ಗೆ ತೆರೆದ ಕೆಲವು ಅಂಗಡಿಗಳನ್ನು ಪೊಲೀಸರು ಬಂದ್‌ ಮಾಡಿಸಿದರು. ಶಾಲಾ ಬಸ್ಸುಗಳನ್ನು ಮರಳಿ ಕಳಿಸಲಾಯಿತು.

ಗಾಯಾಳುಗಳಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡವರು, ಆಸ್ತಿಪಾಸ್ತಿ ಹಾನಿಗೊಳಗಾದವರಿಂದ ದೂರು ಸ್ವೀಕಾರ ಮಾಡಲಾಗಿದೆ. 25ಕ್ಕೂ ಹೆಚ್ಚು ಜನರನ್ನು ಪೊಲೀಸರು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಿದ್ದು, ಕಲ್ಲು ತೂರಾಟದಲ್ಲಿ ಕೆಲವು ಪೊಲೀಸರಿಗೂ ಗಾಯವಾಗಿದೆ. ದುಷ್ಕರ್ಮಿಗಳ ಪತ್ತೆಗೆ ಸಿಸಿ ಟಿವಿ ಫೂಟೇಜ್‌ ಮತ್ತಿತರ ವಿಡಿಯೋಗಳನ್ನು ಪರಿಶೀಲಿಸಲಾಗುತ್ತಿದೆ.

ರಾತ್ರಿ ಕಲ್ಲು ತೂರಾಟ ನಡೆದ ಘಟನಾ ಸ್ಥಳವನ್ನು ಪೂರ್ವ ವಲಯ ಐಜಿಪಿ ತ್ಯಾಗರಾಜನ್ ಪರಿಶೀಲಿಸಿದರು. ಪರಿಸ್ಥಿತಿಯ ಬಗ್ಗೆ ಡಿಸಿ ಡಾ.ಆರ್.ಸೆಲ್ವಮಣಿ ವಿವರ ಪಡೆದಿದ್ದಾರೆ. ಶಾಸಕ ಚನ್ನಬಸಪ್ಪ ಶಾಂತಿನಗರಕ್ಕೆ ಭೇಟಿ ನೀಡಿದ್ದು, ಆಸ್ತಿ ಪಾಸ್ತಿ ಹಾನಿಗೊಳಗಾದ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಮೆಗ್ಗಾನ್ ಆಸ್ಪತ್ರೆಗೂ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.

ಶಿವಮೊಗ್ಗದ ರಾಗಿಗುಡ್ಡದ ಬಳಿಯ ಶಾಂತಿನಗರದಲ್ಲಿ ನಿನ್ನೆ ರಾತ್ರಿ ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆಯಾಗಿತ್ತು. ಮೆರವಣಿಗೆ ವೇಳೆ ಕೆಲವರು ಕಲ್ಲು ಬಿದ್ದಿರುವುದಾಗಿ ಹೇಳಿದ್ದರಿಂದ ಮೆರವಣಿಗೆಯಲ್ಲಿ ಭಾಗಿಯಾಗಿದ್ದವರು ಮತ್ತೊಂದು ಕೋಮಿನ ಪ್ರದೇಶಗಳಿಗೆ ನುಗ್ಗಿದ್ದರಿಂದ ಗಲಭೆ ಉಂಟಾಗಿದೆ. ನಂತರ ನಡೆದ ಕಲ್ಲು ತೂರಾಟದಲ್ಲಿ ಮೂವರು ಗಾಯಗೊಂಡಿದ್ದರು.

ಇದನ್ನೂ ಓದಿ: Shivamogga Clash: ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆ, ಕಲ್ಲು ತೂರಾಟ; ಮೂವರಿಗೆ ಗಾಯ

Exit mobile version