ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪದೇಪದೆ ಸ್ವಾತಂತ್ರ್ಯ ವೀರ ಸಾವರ್ಕರ್ ಅವರನ್ನು ಹೀಯಾಳಿಸುತ್ತಿರುವುದು ಹಲವರಿಗೆ ಕುಮ್ಮಕ್ಕು ನೀಡಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ʻʻಸಿದ್ದರಾಮಯ್ಯ ಅವರು ವೋಟಿಗಾಗಿ ವಿ.ಡಿ ಸಾವರ್ಕರ್ ಬಗ್ಗೆ ಅವಹೇಳನ ಮಾಡುತ್ತಿದ್ದಾರೆ. ಸಾವರ್ಕರ್ ಬ್ರಿಟಿಷರ ಬೂಟು ನೆಕ್ಕಿದರು ಎಂಬ ಹೇಳಿಕೆ ಕೆಲವರಿಗೆ ಪ್ರಚೋದನೆ ನೀಡಿದೆ. ಹಿರಿಯ ರಾಜಕಾರಣಿಯಾಗಿ ಅವರು ನೀಡಿದ ಹೇಳಿಕೆ ಸಮುದಾಯವನ್ನು ಎತ್ತಿಕಟ್ಟಿದೆʼʼ ಎಮದು ಹೇಳಿದರು. ಈ ರೀತಿಯ ಹೇಳಿಕೆಗಳಿಂದ ಒಂದು ವರ್ಗಕ್ಕೆ ಸಾವರ್ಕರ್ ಅವರ ಮೇಲೆ ದ್ವೇಷ ಹುಟ್ಟಲು ಕಾರಣವಾಗುತ್ತಿದೆ. ಹೀಗಾಗಿಯೇ ಅವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಸಾವರ್ಕರ್ ಫ್ಲೆಕ್ಸ್‌ನ್ನು ಮುಸ್ಲಿಂ ಗಲ್ಲಿಯಲ್ಲಿ ಹಾಕಬೇಕಿತ್ತಾ ಎಂಬ ಸಿದ್ದರಾಮಯ್ಯ ಮಾತಿಗೆ ಪ್ರತ್ಯುತ್ತರ ನೀಡಿದ ಗೃಹ ಸಚಿವರು, ʻʻಮುಸ್ಲಿಂ ಗಲ್ಲಿಗಳು ಈ ದೇಶದ ಭಾಗವಲ್ಲವೇ? ಸಾವರ್ಕರ್ ಪೋಟೊ ಈ ದೇಶದಲ್ಲಿ ಹಾಕಬಾರದಾ? ನಿಷೇಧ ಮಾಡಲಾಗಿದೆಯಾ? ಸಿದ್ದರಾಮಯ್ಯ ಇಂತಹ ಮಾತು ಆಡುವುದರಿಂದ ಒಂದು ಸಮುದಾಯಕ್ಕೆ ಪ್ರಚೋದನೆಯಾಗುತ್ತದೆ. ಸಿದ್ದರಾಮಯ್ಯನವರು ಹೀಗೆ ಮಾಡಿಯೇ ಅವರ ಆಳ್ವಿಕೆಯಲ್ಲಿ ಒಂದು ಸಮುದಾಯವನ್ನು ಎತ್ತಿ ಕಟ್ಟುತ್ತಿದ್ದಾರೆʼʼ ಎಂದು ಹೇಳಿದರು.
ಶಿವಮೊಗ್ಗ ಘಟನೆ ಸಮಗ್ರ ತನಿಖೆ
ಶಿವಮೊಗ್ಗ ಘಟನೆ ಹಿಂದೆ ಯಾರೇ ಇದ್ದರೂ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಯಾವ ಯಾವ ಸಂಘಟನೆ ಹಿನ್ನೆಲೆ ಇದೆ. ಯಾರ್ಯಾರು ಇದ್ದಾರೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಈ ಪ್ರಕರಣವನ್ನು ತಾರ್ಕಿಕ ಅಂತ್ಯದವರೆಗೂ ಕೊಂಡೊಯ್ಯುತ್ತೇವೆ ಎಂದು ಹೇಳಿದರು ಗೃಹ ಸಚಿವರು.
ಪೊಲೀಸರಿಗೆ ಮುಕ್ತ ಹಸ್ತ
ಶಿವಮೊಗ್ಗದಲ್ಲಿ ಪ್ರೇಮ್ ಸಿಂಗ್ ಅವರಿಗೆ ಚೂರಿಯಿಂದ ಇರಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಬಂಧಿಸಲಾಗಿದೆ. ಎಷ್ಟು ಜನರನ್ನು ಬಂಧಿಸುತ್ತಾರೆ, ಯಾರೆಲ್ಲ ಶಾಮೀಲಾಗಿದ್ದಾರೆ ಎನ್ನುವುದು ಪೊಲೀಸರಿಗೆ ಬಿಟ್ಟ ವಿಚಾರ. ಅವರಿಗೆ ಮುಕ್ತ ಹಸ್ತ ನೀಡಲಾಗಿದೆ.
ನಿಮ್ಮ ಕೈಯಲ್ಲಿ ಆಗದಿದ್ರೆ ಅಧಿಕಾರ ಬಿಟ್ಟು ಮನೆಗೆ ಹೋಗಿ ಎಂಬ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು ಆರಗ ಜ್ಞಾನೇಂದ್ರ ಅವರು, ನಾನು ಗೃಹ ಮಂತ್ರಿಯಾಗಿದ್ದೇನೆ. ಇದು ಸರಕಾರ ಇಲಾಖೆ. ಎಲ್ಲರನ್ನೂ ಜತೆಗೆ ಕರೆದುಕೊಂಡು ಹೋಗುವುದು ನನ್ನ ಧರ್ಮ. ಧರ್ಮದ ಆಧಾರ ಮೇಲೆ ಕ್ರಮ ಕೈಗೊಳ್ಳುವುದಿಲ್ಲ ಎಂದರು.