Site icon Vistara News

Shivamogga clash| ಚೂರಿ ಇರಿತ ಆರೋಪಿಗಳು ಇನ್ನೂ ಎರಡು ದಿನ ಪೊಲೀಸ್‌ ಕಸ್ಟಡಿಗೆ

Shivamogga police custody

ಶಿವಮೊಗ್ಗ: ಶಿವಮೊಗ್ಗದಲ್ಲಿ ಆಗಸ್ಟ್‌ ೧೫ರಂದು ನಡೆದ ಫ್ಲೆಕ್ಸ್‌ ವಿವಾದದ ಬಳಿಕ ಪ್ರೇಮ್‌ ಸಿಂಗ್‌ ಎಂಬ ವ್ಯಾಪಾರಿಗೆ ಚೂರಿಯಿಂದ ಇರಿದ ಪ್ರಕರಣದ ಮೂವರು ಆರೋಪಿಗಳನ್ನು ಕೋರ್ಟ್‌ ಇನ್ನೂ ಎರಡು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿದೆ.

ಆಗಸ್ಟ್‌ ೧೫ರಂದು ಶಿವಮೊಗ್ಗದ ಅಮೀರ್‌ ಅಹಮದ್‌ ವೃತ್ತದಲ್ಲಿ ಸಾವರ್ಕರ್‌ – ಟಿಪ್ಪು ಸುಲ್ತಾನ್‌ ಫ್ಲೆಕ್ಸ್‌ ವಿವಾದ ಸೃಷ್ಟಿಯಾಗಿತ್ತು. ಹಿಂದು ಮತ್ತು ಮುಸ್ಲಿಂ ಗುಂಪುಗಳ ಪರಸ್ಪರ ಎದುರಾಗಿದ್ದವು. ಆದರೆ, ಪೊಲೀಸರ ಮಧ್ಯಪ್ರವೇಶದಿಂದಾಗಿ ದೊಡ್ಡ ಸಂಘರ್ಷ ತಪ್ಪಿತ್ತು. ಈ ನಡುವೆ ಸಂಜೆಯಾಗುವ ಹೊತ್ತಿಗೆ ಉಪ್ಪಾರಕೇರಿಯಲ್ಲಿ ಪ್ರೇಮ್‌ ಸಿಂಗ್‌ ಎಂಬ ವ್ಯಾಪಾರಿ ಮನೆ ಸಮೀಪ ಇದ್ದಾಗ ಅವರ ಹೊಟ್ಟೆಗೆ ಚೂರಿಯಿಂದ ಇರಿಯಲಾಗಿತ್ತು.

ಈ ವಿದ್ಯಮಾನ ಶಿವಮೊಗ್ಗ ಗಲಭೆಯ ದಿಕ್ಕನ್ನೇ ಬದಲಿಸುವ ಅಪಾಯ ಎದುರಾಗಿತ್ತು. ಹೀಗಾಗಿ ಪೊಲೀಸರು ಕೂಡಲೇ ಶ್ರಮ ವಹಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ನದೀಮ್, ಅಬ್ದುಲ್ ರೆಹಮಾನ್ ಎಂಬವರನ್ನು ರಾತ್ರಿಯೇ ಬಂಧಿಸಿದರು. ಮರುದಿನ ಬೆಳಗ್ಗೆ ಜಬಿಯುಲ್ಲಾ ಎಂಬಾತನನ್ನು ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದರು. ಬಳಿಕ ತನ್ವೀರ್‌ ಅಹಮದ್‌ನನ್ನು ಬಂಧಿಸಿದರು.

ಜಬಿಯುಲ್ಲಾನ ಕಾಲಿಗೆ ಗುಂಡೇಟು ಬಿದ್ದಿದ್ದರಿಂದ ಆತನನ್ನು ಹೊರತುಪಡಿಸಿ ನದೀಮ್‌, ಅಬ್ದುಲ್‌ ರೆಹಮಾನ್‌ ಮತ್ತು ತನ್ವೀರ್‌ ಅಹಮದ್‌ನ್ನು ಕೋರ್ಟ್‌ಗೆ ಹಾಜರುಪಡಿಸಿದ್ದರು. ಆಗ ಅವರನ್ನು ಎರಡು ದಿನಗಳ ಕಾಲ ಕಸ್ಟಡಿಗೆ ಒಪ್ಪಿಸಲಾಗಿತ್ತು. ಎರಡು ದಿನಗಳ ಅವಧಿ ಗುರುವಾರಕ್ಕೆ ಅಂತ್ಯಗೊಂಡಿತ್ತು.

ಗುರುವಾರ ಈ ಮೂವರನ್ನು ಕೋರ್ಟ್‌ಗೆ ಹಾಜರುಪಡಿಸಿದಾಗ ಇನ್ನೂ ಕೆಲವು ದಿನಗಳ ಕಾಲ ಕಸ್ಟಡಿಗೆ ಬೇಕು ಎಂಬ ಬೇಡಿಕೆ ಮಂಡಿಸಲಾಗಿದೆ. ಆದರೆ, ಇದಕ್ಕೆ ಆರೋಪಿಗಳ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ಆದರೆ, ಪೊಲೀಸರ ಮನವಿಯನ್ನು ಪುರಸ್ಕರಿಸಿದ ಕೋರ್ಟ್‌ ಇನ್ನೆರಡು ದಿನಗಳ ಕಾಲ ಕಸ್ಟಡಿಗೆ ಒಪ್ಪಿಸಿತು. ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಮುಖ‌ ಆರೋಪಿ ಜಬಿಯನ್ನು ಗುಣಮುಖನಾದ ನಂತರ ಪೊಲೀಸರು ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ.
ಈ ನಡುವೆ, ಜಬಿ ಯಾವುದೇ ದುಷ್ಕೃತ್ಯಗಳಲ್ಲಿ ಭಾಗಿಯಾಗಿಲ್ಲ. ಆತನನ್ನು ಮನೆಯಿಂದಲೇ ಕರೆದುಕೊಂಡು ಹೋದ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. ಯಾರನ್ನೋ ಮೆಚ್ಚಿಸಲು, ರಾಜಕೀಯ ಒತ್ತಡಕ್ಕೆ ಮಣಿದು ಈ ರೀತಿ ಮಾಡಿದ್ದಾರೆ ಎಂದು ಅವನ ಪತ್ನಿ ಶಬಾನಾ ಬಾನು ಆರೋಪಿಸಿದ್ದಾಳೆ.

ಇದನ್ನೂ ಓದಿ Shivamogga clash: ಗಂಡನಿಗೆ ಗುಂಡು ಹಾಕಲು ರಾಜಕಾರಣಿಗಳ ಒತ್ತಡ ಕಾರಣ ಎಂದ ಜಬಿವುಲ್ಲಾ ಪತ್ನಿ

Exit mobile version