ಶಿವಮೊಗ್ಗ: ಇಲ್ಲಿನ ಕಾಮಾಕ್ಷಿ ಬೀದಿಯ ನಿವಾಸಿ, ಶಿವಮೊಗ್ಗ ಕಾಂಗ್ರೆಸ್ ಮುಖಂಡರೊಬ್ಬರ ತಾಯಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ (Suicide Case) ಮಾಡಿಕೊಂಡಿದ್ದಾರೆ.
ಕಾಮಾಕ್ಷಿ ಬೀದಿಯ ಸರೋಜಮ್ಮ ( 85) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವವರು. ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಎನ್.ರಮೇಶ್ ಅವರ ತಾಯಿ ಇವರಾಗಿದ್ದು, ಗುರುವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಂಜುಂಡಪ್ಪ ಹಾಗೂ ಸರೋಜಮ್ಮ ವೃದ್ಧ ದಂಪತಿ ಕಾಮಾಕ್ಷಿ ಬೀದಿಯ ಮನೆಯೊಂದರಲ್ಲಿ ವಾಸವಾಗಿದ್ದರು. ಗುರುವಾರ ಬೆಳಗ್ಗೆ ಪತಿ ನಂಜುಡಪ್ಪ ದೋಸೆ ತರಲು ಹೋಟೆಲ್‌ಗೆ ಹೋದಾಗ ಇವರು ನೇಣಿಗೆ ಶರಣಾಗಿದ್ದಾರೆ. ಮೃತರಿಗೆ ಒಬ್ಬರು ಹೆಣ್ಣು, ನಾಲ್ಕು ಗಂಡು ಮಕ್ಕಳಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ: Karnataka Elections: ಬೊಮ್ಮಾಯಿ ಹಗರಣ ಬಿಚ್ಚಿಡ್ತೀನಿ ಎಂದ ಓಲೆಕಾರ್, ದಾಖಲೆ ಕೊಟ್ಟು ಮಾತಾಡಲಿ ಎಂದ ಸಿಎಂ
ಅಪ್ಪ ಎಂದು ಹಿಂದೆ ಹಿಂದೆ ಬಂದ ಒಂದೂವರೆ ವರ್ಷದ ಮಗು; ಗೊತ್ತಾಗದೆ ಟ್ರ್ಯಾಕ್ಟರ್ ರಿವರ್ಸ್ ತೆಗೆಯುವಾಗ ಹರಿದು ಸಾವು
ಶಿವಮೊಗ್ಗ: ಅಪ್ಪನನ್ನು ಹಿಂಬಾಲಿಸಲು ಹೋಗಿ ಮಗುವೊಂದು ಟ್ರ್ಯಾಕ್ಟರ್‌ಗೆ ಸಿಲುಕಿ ಮೃತಪಟ್ಟಿರುವ ದುರ್ಘಟನೆ ತೀರ್ಥಹಳ್ಳಿಯ ಹೆದ್ದೂರಿನಲ್ಲಿ ಬುಧವಾರ (ಏ.12) ನಡೆದಿದೆ. ಗ್ರಾಮದ ಆದರ್ಶ್ ಹೆದ್ದೂರು ಎಂಬುವವರ ಒಂದೂವರೆ ವರ್ಷದ ಮಗು ದುರ್ಮರಣ ಹೊಂದಿದೆ.
ಆದರ್ಶ್ ಅವರು ತಮ್ಮ ಒಂದೂವರೆ ವರ್ಷದ ಮಗುವಿನೊಂದಿಗೆ ಆಟವಾಡುತ್ತಿದ್ದರು. ನಂತರ ಕೆಲಸದ ನಿಮಿತ್ತ ಮಗುವನ್ನು ಮನೆಯೊಳಗೆ ಬಿಟ್ಟಿದ್ದಾರೆ. ಮನೆ ಮುಂದೆ ನಿಲ್ಲಿಸಿದ್ದ ಟ್ರ್ಯಾಕ್ಟರ್ ಅನ್ನು ತೆಗೆಯಲು ಹೋಗಿದ್ದಾರೆ. ಈ ವೇಳೆ ಒಂದೂವರೆ ವರ್ಷದ ಮಗು ಅಪ್ಪನನ್ನೇ ಹಿಂಬಾಲಿಸಿಕೊಂಡು ಬಂದಿದೆ. ಆದರೆ, ಇದ್ಯಾವುದರ ಅರಿವು ಇರದ ಆದರ್ಶ್ ಅವರು ಟ್ರ್ಯಾಕ್ಟರ್ ಅನ್ನು ಹಿಂದೆ ತೆಗೆಯಲು ಮುಂದಾಗಿದ್ದು, ಮಗುವಿನ ಮೈಮೇಲೆ ಹರಿದಿದೆ. ಪರಿಣಾಮ ಗಂಭೀರ ಗಾಯಗೊಂಡ ಮಗು ಸ್ಥಳದಲ್ಲೇ ಮೃತಪಟ್ಟಿದೆ. ಇತ್ತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಬಾವಿಕೇರಿಯಲ್ಲಿ ರಿಕ್ಷಾ ಡಿಕ್ಕಿಯಾಗಿ ಗರ್ಭಿಣಿ ಸಾವು, ನಡೆದುಹೋಗುತ್ತಿದ್ದಾಗ ಬಡಿಯಿತು ಆಟೊ
ಅಂಕೋಲಾ: ರಸ್ತೆಯ ಬದಿಯ ಕಚ್ಚಾ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ಗರ್ಭಿಣಿಯೊಬ್ಬರಿಗೆ ರಿಕ್ಷಾ ಬಡಿದು ಆಕೆ ಸ್ಥಳದಲ್ಲೇ ಮೃತಪಟ್ಟ ಘಟನೆ ಭಾವಿಕೇರಿಯಲ್ಲಿ ನಡೆದಿದೆ. ಶೋಭಾ ಗೋಪಾಲ ನಾಯಕ (28) ಮೃತ ಮಹಿಳೆ. ಸುಮಾರು ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಇವರು ತನ್ನ ಮನೆ ಮುಂದಿನ ಡಾಂಬರು ರಸ್ತೆ ಪಕ್ಕದ ಮಣ್ಣಿನ ರಸ್ತೆಯಲ್ಲಿ ತನ್ನ ಗಂಡನೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಅತಿವೇಗ ಮತ್ತು ಅಜಾಗರೂಕತೆಯಿಂದ ಬಂದ ರಿಕ್ಷಾ ಚಾಲಕ ನಿಯಂತ್ರಣ ತಪ್ಪಿ ಮಹಿಳೆಗೆ ಡಿಕ್ಕಿ ಹೊಡೆಸಿದ್ದಾನೆ.
ಅಪಘಾತದ ರಭಸಕ್ಕೆ ಗರ್ಭಿಣಿ ಮಹಿಳೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಪಟ್ಟಣದ ಲಕ್ಷೇಶ್ವರ – ಕುಂಬಾರಕೇರಿ ವ್ಯಾಪ್ತಿಯ ರಿಕ್ಷಾ ಚಾಲಕ ಇವನಾಗಿದ್ದು, ಘಟನೆ ಬಳಿಕ ರಿಕ್ಷಾ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.
ನದಿಗೆ ಸ್ನಾನಕ್ಕೆ ಹೋಗಿದ್ದ 8ನೇ ತರಗತಿ ವಿದ್ಯಾರ್ಥಿನಿ ನೀರಿನಲ್ಲಿ ಮುಳುಗಿ ಮೃತ್ಯು
ಶಿರಸಿ: ಎಂಟನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಉ.ಕ ಜಿಲ್ಲೆ ಸಿದ್ದಾಪುರ ತಾಲೂಕಿನ ಹರ್ಲಗುಂಡಿ ಗ್ರಾಮದಲ್ಲಿ ನಡೆದಿದೆ. ಬುಧವಾರ ಸಂಜೆ ಗ್ರಾಮದ ನದಿಯಲ್ಲಿ ಸ್ನಾನಕ್ಕೆಂದು ತೆರಳಿದ್ದ ವೇಳೆ ಈ ಘಟನೆ ಸಂಭವಿಸಿದ್ದು, ಮೃತ ವಿದ್ಯಾರ್ಥಿನಿಯನ್ನು ಧನ್ಯಾ ಗೌಡ ಕಂಚಾಳ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: Belagavi Border Dispute: ಬೆಳಗಾವಿ ಗಡಿ ವಿವಾದ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದ ಸುಪ್ರೀಂ ಕೋರ್ಟ್ ಜಡ್ಜ್!
ಎಂಟನೇ ತರಗತಿ ಓದುತ್ತಿದ್ದ ಧನ್ಯ ಸ್ನಾನಕ್ಕೆಂದು ತೆರಳಿದ್ದಳು. ಈಜಲು ಬರದ ಕಾರಣ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾಳೆ. ಹೊಳೆ ಆಳವಿದ್ದರಿಂದ ಈಜು ಬಾರದೇ ನೀರಿನಲ್ಲಿ ಸಾವು ಕಂಡಿದ್ದಾಳೆ. ಈ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.