Site icon Vistara News

ಶಿವಮೊಗ್ಗ ಗಣೇಶ ಮೆರವಣಿಗೆಯಲ್ಲಿ ಹರ್ಷ, ಪ್ರವೀಣ್‌, ಗೋಡ್ಸೆ ಚಿತ್ರ: ರಾಷ್ಟ್ರಲಾಂಛನ ಮೇಲಿದ್ದ ಕೇಸರಿ ಧ್ವಜ ತೆರವು

ಶಿವಮೊಗ್ಗ:  ಇಲ್ಲಿನ ಹಿಂದೂ ಮಹಾಸಭಾ ವತಿಯಿಂದ ಕೋಟೆ ರಸ್ತೆಯ ಭೀಮೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ನಗರದ ಬೀದಿಗಳಲ್ಲಿ ಅದ್ದೂರಿಯಾಗಿ ನಡೆಯುತ್ತಿದೆ. ಲಕ್ಷಾಂತರ ಮಂದಿ ಈ ಮೆರವಣಿಗೆಯಲ್ಲಿ ಭಾಗವಹಿಸಿದ್ದು ಇಡೀ ನಗರ ಕೇಸರಿಮಯವಾಗಿ ಕಂಗೊಳಿಸುತ್ತಿವೆ. ಮೆರವಣಿಗೆಯು ಗಾಂಧಿ ಬಜಾರ್‌, ರಾಮಣ್ಣ ಶ್ರೇಷ್ಠಿ ಪಾರ್ಕ್, ಶಿವಪ್ಪ ನಾಯಕ ವೃತ್ತ, ಅಮೀರ್ ಅಹ್ಮದ್ ಸರ್ಕಲ್, ನೆಹರೂ ರಸ್ತೆ, ದುರ್ಗಿಗುಡಿ ಮೂಲಕ ಸಾಗುತ್ತಿದ್ದು ಎಲ್ಲ ಕಡೆ ಸಂಭ್ರಮ ನೆಲೆ ಮಾಡಿದೆ.

ಶಿವಮೊಗ್ಗ ನಗರದಲ್ಲಿ ನಡೆಯುತ್ತಿರುವ ವೈಭವದ ಗಣೇಶೋತ್ಸವ ಮೆರವಣಿಗೆ

ಮೆರವಣಿಗೆಯಲ್ಲಿ ಮಾಜಿ ಸಚಿವರಾದ ಕೆ.ಎಸ್‌. ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ ಸೇರಿದಂತೆ ಪ್ರಮುಖ ಗಣ್ಯರು ಭಾಗವಹಿಸಿದ್ದು ಕಾರ್ಯಕರ್ತರ ಉತ್ಸಾಹವನ್ನು ಹೆಚ್ಚಿಸಿದೆ. ಕೋಮುದಳ್ಳುರಿಯಿಂದ ತತ್ತರಿಸುತ್ತಿದ್ದ ನಗರದಲ್ಲಿ ನಡೆಯುತ್ತಿರುವ ಈ ಮೆರವಣಿಗೆಗೆ ಬಿಗಿ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿದೆ.

ಮೆರವಣಿಗೆಯಲ್ಲಿ ಗೋಡ್ಸೆ ಚಿತ್ರ

ರಾರಾಜಿಸಿದ ಹರ್ಷ, ಪ್ರವೀಣ್‌ ಚಿತ್ರಗಳು
ಈ ಬಾರಿಯ ಗಣೇಶೋತ್ಸವದಲ್ಲಿ ಸಾವರ್ಕರ್‌ ಹೆಚ್ಚು ವಿಜೃಂಭಿಸಿದ್ದರು. ಅದೇ ರೀತಿ ಪುನೀತ್‌ ರಾಜ್‌ ಕುಮಾರ್‌ ಅವರ ಚಿತ್ರಗಳೂ ಎಲ್ಲ ಕಡೆ ಬಳಕೆಯಾಗಿದ್ದವು. ಶಿವಮೊಗ್ಗದ ಎಲ್ಲ ಪ್ರಮುಖ ಭಾಗಗಳಲ್ಲಿ ಸಾವರ್ಕರ್‌ ಚಿತ್ರಗಳು, ಹೋರ್ಡಿಂಗ್‌, ಫ್ಲೆಕ್ಸ್‌, ಬ್ಯಾನರ್‌ಗಳು ವಿಜೃಂಭಿಸುತ್ತಿವೆ. ಯುವಕರು ಪುನೀತ್‌ ಚಿತ್ರಗಳನ್ನು ಹಿಡಿದುಕೊಂಡು ಕುಣಿಯುತ್ತಿದ್ದಾರೆ.
ಇದರ ನಡುವೆಯೇ ಗಮನ ಸೆಳೆಯುತ್ತಿರುವುದು ಇತ್ತೀಚೆಗೆ ಕೊಲೆಯಾದ ಹಿಂದೂ ಕಾರ್ಯಕರ್ತರಾದ ಶಿವಮೊಗ್ಗದ ಹರ್ಷ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯ ಪ್ರವೀಣ್‌ ನೆಟ್ಟಾರು ಅವರ ಭಾವಚಿತ್ರ, ಫ್ಲೆಕ್ಸ್‌ಗಳು. ಯುವಕರಂತೂ ಇಬ್ಬರ ಚಿತ್ರಗಳನ್ನು ಹಿಡಿದುಕೊಂಡು ಜಯಘೋಷ ಮಾಡುತ್ತಿದ್ದಾರೆ. ಶಿವಮೊಗ್ಗ ಶಿವಪ್ಪನಾಯಕ ಸರ್ಕಲ್‌ನಲ್ಲಿ ಹಿಂದೂ ಹರ್ಷನ ಜೊತೆ ಕರಾವಳಿಯ ಪ್ರವೀಣ್ ನೆಟ್ಟಾರು ಭಾವಚಿತ್ರವನ್ನು ದೊಡ್ಡ ಹಾಕಲಾಗಿದೆ.ಅದರ ನಡುವೆಯೇ ಮಹಾತ್ಮಾ ಗಾಂಧಿ ಹತ್ಯೆಯಲ್ಲಿ ಪಾಲ್ಗೊಂಡಿದ್ದಾರೆ ಎಂಬ ಆರೋಪ ಹೊತ್ತಿದ್ದ ನಾಥೂರಾಮ್‌ ಗೋಡ್ಸೆ ಅವರ ಚಿತ್ರವನ್ನೂ ಮೆರವಣಿಗೆಯಲ್ಲಿ ಪ್ರದರ್ಶಿಸಿದ್ದು ಕಂಡುಬಂತು.

ಸಾವರ್ಕರ್‌ ಅವರ ಬೃಹತ್‌ ಹೋರ್ಡಿಂಗ್‌

ರಾಷ್ಟ್ರ ಲಾಂಛನದ ಮೇಲಿನ ಬಾವುಟ ತೆರವು
ಈ ನಡುವೆ, ನಗರದ ಅಶೋಕ ವೃತ್ತದಲ್ಲಿರುವ ರಾಷ್ಟ್ರ ಲಾಂಛನದ ಮೇಲೆ ಹಿಂದೂ ಕಾರ್ಯಕರ್ತರು ಕೇಸರಿ ಧ್ವಜವನ್ನು ಹಾರಿಸಿದ್ದರು. ಇದನ್ನು ಪೊಲೀಸರು ಮಧ್ಯಪ್ರವೇಶಿಸಿ ತೆರವುಗೊಳಿಸಿದರು. ರಾಷ್ಟ್ರ ಲಾಂಛನದ ಮೇಲೆ ಕೇಸರಿ ಧ್ವಜ ಹಾಕಿದ್ದನ್ನು ಎಸ್‌ಡಿಪಿಐ ಆಕ್ಷೇಪಿಸಿತ್ತು.

ಎಸ್ಪಿ ಲಕ್ದ್ಮೀ ಪ್ರಸಾದ್‌ ಅವರಿಂದ ಭದ್ರತಾ ಪರಿಸ್ಥಿತಿ ಸಮಾಲೋಚನೆ

ರಾತ್ರಿವರೆಗೂ ನಡೆಯುವ ಮೆರವಣಿಗೆಗೆ ಬಿಗಿ ಭದ್ರತೆ
ರಾಜಬೀದಿ ಉತ್ಸವ ಬೆಳಗ್ಗೆ ೧೦ ಗಂಟೆಗೆ ಆರಂಭವಾಗಿದೆ ಶನಿವಾರ ಮುಂಜಾನೆವರೆಗೂ ಮುಂದುವರಿಯುವ ನಿರೀಕ್ಷೆ ಇದೆ. ಹೀಗಾಗಿ ಬಿಗಿ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿದೆ. ಎರಡು ಹೆಚ್ಚುವರಿ ಪೊಲೀಸ್ ಅಧೀಕ್ಷಕರು, 19 ಪೊಲೀಸ್ ಉಪಾಧೀಕ್ಷಕರು, 46 ಪೊಲೀಸ್‌ ನಿರೀಕ್ಷಕರು, 71 ಪೊಲೀಸ್ ಉಪನಿರೀಕ್ಷಕರು, 1970 ಪೊಲೀಸ್ ಸಿಬ್ಬಂದಿ, 700 ಗೃಹರಕ್ಷಕ ದಳ ಸಿಬ್ಬಂದಿ, 1 ಆರ್‌ಎಎಫ್ ಕಂಪನಿ (200 ಅಧಿಕಾರಿ ಮತ್ತು ಸಿಬ್ಬಂದಿ), 15 ಕೆಎಸ್ಆರ್‌ಪಿ ತುಕಡಿ ( 300 ಅಧಿಕಾರಿ ಮತ್ತು ಸಿಬ್ಬಂದಿ), 15 ಡಿಎಆರ್ ತುಕಡಿ (120 ಅಧಿಕಾರಿ ಹಾಗೂ ಸಿಬ್ಬಂದಿ) ರಕ್ಷಣಾ ಜವಾಬ್ದಾರಿ ಹೊತ್ತಿದ್ದಾರೆ. ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರ ನಿಯೋಜನೆ ಜಾಸ್ತಿಯಾಗಿದೆ.

ಅಮೀರ್‌ ಅಹಮದ್‌ ಸರ್ಕಲ್‌

ಅಮೀರ್‌ ಅಹಮದ್‌ ವೃತ್ತದಲ್ಲಿ ಭಾರಿ ಜನಸಂದಣಿ
ಸಂಜೆ ೬.೩೦ರ ಹೊತ್ತಿಗೆ ಗಾಂಧಿ ಬಜಾರ್‌ ದಾಟಿ ಶಿವಪ್ಪ ನಾಯಕನ ವೃತ್ತದ ಬಳಿಕ ಗಣೇಶ ಮೂರ್ತಿ ಆಗಮಿಸಿದೆ. ಮುಂದೆ ಅತ್ಯಂತ ಮಹತ್ವದ ಆಯಕಟ್ಟಿನ ಅಮೀರ್‌ ಅಹಮದ್‌ ವೃತ್ತದ ಮೂಲಕ ಸಾಗಿ ಹೋಗಲಿದೆ.

ಕಳೆದ ಆಗಸ್ಟ್‌ ೧೫ರಂದು ಅಮೀರ್‌ ಅಹಮದ್‌ ವೃತ್ತದಲ್ಲಿ ಸಾವರ್ಕರ್‌ ಫ್ಲೆಕ್ಸ್‌ಗೆ ಸಂಬಂಧಿಸಿ ದೊಡ್ಡ ಮಟ್ಟದ ಗಲಾಟೆ ನಡೆದಿದ್ದರಿಂದ ಈ ಪ್ರದೇಶ ಸೂಕ್ಷ್ಮವಾಗಿದೆ. ಈ ವೃತ್ತದಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದಾರೆ. ಪೊಲೀಸರು ಕೂಡಾ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಇಲ್ಲಿ ಜನರು ಮೊಬೈಲ್‌ ಬೆಳಗಿ ಸಂಭ್ರಮಿಸುತ್ತಿರುವುದು ಕಂಡುಬಂದಿದೆ.

ಮಸೀದಿ ಎದುರು ಬಿಗಿ ಭದ್ರತೆ

ಮಸೀದಿ ಎದುರು ಮೆರವಣಿಗೆಗೆ ನಿಷೇಧವಿತ್ತು
ಸ್ವಾತಂತ್ರ್ಯ ಪೂರ್ವದಲ್ಲಿ ಇಲ್ಲಿ ಮೆರವಣಿಗೆ ಶಾಂತಿಯುತವಾಗಿ ನಡೆದಿತ್ತು. ಆದರೆ, 1947ರಲ್ಲಿ ಅಹಿತಕರ ಘಟನೆ ನಡೆದಿತ್ತು. ಅಂದಿನಿಂದ ಮಸೀದಿ ಎದುರು ಗಣೇಶ ಮೆರವಣಿಗೆ ನಿಷೇಧಿಸಲಾಗಿತ್ತು. . ಈ ಘಟನೆ ಬಳಿಕ ಹಿಂದೂ ಮಹಾಸಭಾ ಸಮಿತಿಯು ಹೈಕೋರ್ಟ್‌ ಮೊರೆ ಹೋಗಿತ್ತು. ಪ್ರಾರ್ಥನಾ ಮಂದಿರ ಮುಂದೆ ಮೆರವಣಿಗೆ ನಡೆಸಲು 1950ರಲ್ಲಿ ಆದೇಶ ಪಡೆದಿತ್ತು. ಮೊದಲು ಗಣಪನ ಮೆರವಣಿಗೆ ರಾತ್ರಿ ವೇಳೆ ನಡೆಯುತ್ತಿತ್ತು. ಕಾಲಾನಂತರದಲ್ಲಿ ಮೆರವಣಿಗೆ ಹಗಲಿಗೆ ಬಂತು. ಪ್ರಸ್ತುತ ಬೆಳಗ್ಗೆ 10:30ಕ್ಕೆ ಮೆರವಣಿಗೆ ಪ್ರಾರಂಭವಾಗಿ ರಾತ್ರಿ 2 ಗಂಟೆಗೆ ನಿಮಜ್ಜನ ನಡೆಸಲಾಗುತ್ತದೆ.

Exit mobile version