ಶಿವಮೊಗ್ಗ: ಶಿವಮೊಗ್ಗದಲ್ಲಿ ಇಷ್ಟೆಲ್ಲ ಗಲಾಟೆಗಳು ನಡೆಯುತ್ತಿವೆ. ಆದರೆ, ಕಾಂಗ್ರೆಸ್ ನಾಯಕರು ಯಾರೂ ಬಂದು ಧೈರ್ಯ ತುಂಬಿಲ್ಲ ಎಂಬ ಆಕ್ರೋಶ ಅಲ್ಲಿನ ಮುಸ್ಲಿಮರಲ್ಲಿದೆ. ಅದು ಒಬ್ಬ ಕಾಂಗ್ರೆಸ್ ಮುಖಂಡನ ಆಕ್ರೋಶದ ಮಾತುಗಳ ಮೂಲಕ ಹೊರಬಿದ್ದಿದೆ. ಶಿವಮೊಗ್ಗ ಟಿಪ್ಪುನಗರ ಭಾಗದ ಕಾಂಗ್ರೆಸ್ ಮುಖಂಡನಾಗಿರುವ ನಜರುಲ್ಲಾ ಶೇಕ್ ಅವರು ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ವಿಡಿಯೊ ಮೂಲಕ ತಮ್ಮ ಆಕ್ರೋಶ ಹೊರಗೆಡಹಿದ್ದಾರೆ.
ಶಿವಮೊಗ್ಗ ಮುಸ್ಲಿಂ ಫೇಸ್ಬುಕ್ ಪೇಜ್ ಬುಧವಾರ ರಾತ್ರಿ ಅಪ್ಲೋಡ್ ಆಗಿರುವ ವಿಡಿಯೊದಲ್ಲಿ ಕಾಂಗ್ರೆಸ್ ನಾಯಕರ ನಡೆಯ ವಿರುದ್ಧ ಮುಸ್ಲಿಂ ಮುಖಂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ʻನಾವು ಇಲ್ಲಿ ರಾಹುಲ್ ಗಾಂಧಿಗೆ ಏನಾದರೂ ಆದ್ರೆ, ಡಿಕೆಶಿಗೆ ಏನಾದರೂ ಆದ್ರೆ ಪ್ರತಿಭಟನೆ ಮಾಡುತ್ತೇವೆ. ಆದರೆ, ನಮ್ಮದೇ ಕಾರ್ಪೊರೇಟರ್ ಪತಿಯನ್ನು ಪೊಲೀಸರು ಕಾರಣವಿಲ್ಲದೆ ಬಂಧಿಸಿದ್ದಾರೆ. ಈಗೆಲ್ಲಿದ್ದಾರೆ ಕಾಂಗ್ರೆಸ್ ನಾಯಕರುʼʼ ಎಂದು ಹೇಳಿರುವ ನಜರುಲ್ಲಾ, ಶಿವಮೊಗ್ಗದ ಕಾಂಗ್ರೆಸ್ ನಾಯಕರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ. ಜತೆಗೆ ಮುಂದಿನ ಚುನಾವಣೆ ಸಂದರ್ಭದಲ್ಲಿ ಟಿಪ್ಪು ನಗರಕ್ಕೆ ವೋಟು ಕೇಳಲು ಬನ್ನಿ. ಆಗ ಪಾಠ ಕಲಿಸುತ್ತೇವೆ ಎನ್ನುವ ಅರ್ಥದಲ್ಲಿ ಎಚ್ಚರಿಕೆ ನೀಡಿದ್ದಾರೆ.
ನಜರುಲ್ಲಾ ವಿಡಿಯೊದಲ್ಲಿ ಹೇಳಿದ್ದೇನು?
– ಕಾಂಗ್ರೆಸ್ ಲೀಡರ್ಸ್ ಅನ್ನೋರು ಬಹಳ ಜನ ಇದ್ದಾರೆ. ಜಿಲ್ಲೆಯಲ್ಲಿ ಬೇಕಾದಷ್ಟು ಜನ ಸಿಕ್ತಾರೆ. ಸಿದ್ದರಾಮಯ್ಯ, ಡಿಕೆಶಿ ಅಂತಾ ನಾಯಕರು ಬಂದಾಗ ಫ್ಲೆಕ್ಸ್ ಹಾಕುವುದಕ್ಕೆ ಅಷ್ಟೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿಗೆ ಏನಾದ್ರೂ ಪೊಲೀಸರು ತೊಂದರೆ ಕೊಟ್ಟರೆ ಹೋರಾಟ ಮಾಡ್ತಾರೆ.
– ಯೂತ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್‌ಗೆ ಸಮಸ್ಯೆಯಾದರೂ ಶಿವಮೊಗ್ಗದಲ್ಲಿ ಹೋರಾಟ ಮಾಡ್ತಾರೆ. ಈಗ ನಿಮ್ಮ ಪಕ್ಷದ ಕಾರ್ಪೋರೇಟರ್ ಗಂಡನನ್ನು ಜೈಲಿಗೆ ಹಾಕಿದ್ದಾರೆ. ಎಲ್ಲಿದ್ದೀರಾ ಸ್ವಾಮಿ ನೀವು ಕಾಂಗ್ರೆಸ್‌ನವರು?
– ಬರೀ ವೋಟ್ ಕೇಳೋಕೆ ಅಷ್ಟೇ ಬರೋದಾ ನೀವು?, ರಾಹುಲ್, ಡಿಕೆಶಿ, ಸಿದ್ದರಾಮಯ್ಯ ಅವರು ಬಂದ್ರೆ ಮಾತ್ರ ಬರೋದಾ?
– ಕಾಂಗ್ರೆಸ್ ಕಾರ್ಯಕರ್ತರ ಜೊತೆ ನಾವು ಇದ್ದೀವಿ ಅಂತೀರಾ, ಕಾಂಗ್ರೆಸ್ ಪಕ್ಷದ ಕಾರ್ಪೊರೇಟರ್ ಗಂಡನನ್ನೇ ಜೈಲಿಗೆ ಹಾಕಿದ್ದಾರೆ. ಯಾವ ಕಾಂಗ್ರೆಸ್ ನಾಯಕನೂ ಬಂದಿಲ್ಲ.
– ಟಿಪ್ಪುನಗರಕ್ಕೆ ವೋಟ್ ಕೇಳೋಕೆ ಬರೋಕೆ ನೀವು ಯೋಚನೆ ಮಾಡ್ಬೇಕು. ನಿಮ್ಮ ಯೋಗ್ಯತೆ ಏನು ಎಂದು ನೀವು ಯೋಚನೆ ಮಾಡಿ. ಕಾರ್ಪೊರೇಟರ್ ಗಂಡನನ್ನೇ ಕಾಪಾಡಲಿಲ್ಲ, ಜನರನ್ನು ಏನ್ರೀ ಕಾಪಾಡ್ತೀರಾ? ಏನ್ ಉದ್ಧಾರ ಮಾಡ್ತೀರಾ?
– ಥೂ ಎಂದು ಕಾಂಗ್ರೆಸ್ ಪಕ್ಷಕ್ಕೆ ಉಗೀತೀನಿ ನಾನು. ಚಪ್ಪಲಿ ಬಿಡೋ ಜಾಗದಲ್ಲಿ ಕಾಂಗ್ರೆಸ್ ಬಿಡ್ತೀವಿ. ಗಾಂಧಿ, ಸುಭಾಶ್ ಚಂದ್ರ ಬೋಸ್ ಫೋಟೊ ಚಿಕ್ಕದಾಗಿ ಹಾಕಿದ್ದಾರೆ ಎಂದು ಕೇಳಿದ್ದೇ ತಪ್ಪಾ? ಹೋರಾಟ ಮಾಡಿದ್ರೂ ಜೈಲಿಗೆ ಹಾಕ್ತಾರಾ?
– ಇನ್ನಾದರೂ ಕೆಟ್ಟ ರಾಜಕೀಯ ಮಾಡೋದನ್ನು ಬಿಡಿ. ಮೊದಲೇ ಕಾಂಗ್ರೆಸ್ ಬಗ್ಗೆ ಬೇಜಾರಿತ್ತು, ಈಗ ಮತ್ತಷ್ಟು ಬೇಜಾರಾಯ್ತು.
ಇದನ್ನೂ ಓದಿ Shivamogga Clash| ಮುಸ್ಲಿಂ ಮುಖಂಡ ಆಡಿದ ಪ್ರಚೋದನಾಕಾರಿ ಮಾತು ಪ್ರೇಮ್ ಸಿಂಗ್‌ಗೆ ಇರಿಯಲು ಪ್ರೇರಣೆ?