Site icon Vistara News

ಗಾನ ನಮನ| ಬಾರಿಸು ಕನ್ನಡ ಡಿಂಡಿಮವಾ.. ಶಿವಮೊಗ್ಗ ಸುಬ್ಬಣ್ಣ ಸಿರಿಕಂಠದ ಟಾಪ್‌ 10 ಭಾವಗೀತೆಗಳು

Shivamogga subbanna1

ಬೆಂಗಳೂರು: ಕನ್ನಡದ ಭಾವಗೀತೆಗಳಿಗೆ, ಜಾನಪದ ಹಾಡುಗಳಿಗೆ, ಸಂತ ಶಿಶುನಾಳ ಷರೀಫರ ಮನ ತಟ್ಟುವ ಕಾವ್ಯಕ್ಕೆ ದನಿಯಾಗಿ ಮನೆ ಮಾತಾದವರು ಶಿವಮೊಗ್ಗ ಸುಬ್ಬಣ್ಣ. ಅವರ ಒಂದೊಂದು ಹಾಡು ಕೂಡಾ ವಿಭಿನ್ನ, ವಿಶಿಷ್ಟ. ಈ ಶ್ರೇಷ್ಠ ಹಾಡುಗಾರನ ಸಿರಿಕಂಠದಲ್ಲಿ ಮೂಡಿಬಂದ ಭಾವಗೀತೆಗಳಲ್ಲಿ ಟಾಪ್‌ ೧೦ ಎಂದು ನಮಗನಿಸಿದ ಹಾಡುಗಳನ್ನು ಇಲ್ಲಿ ನೀಡಲಾಗಿದೆ. ಸಾವಿರ ಸಾವಿರ ಹಾಡುಗಳ ನಡುವಿನ ಅಯ್ಕೆಯಲ್ಲಿ ಕಂಡದ್ದು ಇವು ಅಷ್ಟೆ. ಉಳಿದಂತೆ ಅವರದು ಎಲ್ಲರೂ ಟಾಪ್‌ ಹಾಡುಗಳೇ. ಅವರು ಹಾಡಿದ ಭಾವಗೀತೆಗಳಲ್ಲಿ ಹೆಚ್ಚಿನವು ಕಾಲ ಕಾಲಕ್ಕೆ ಮತ್ತು ಸರ್ವಕಾಲಕ್ಕೂ ನಮ್ಮಂತರಂಗವನ್ನು ನಿಕಷಕ್ಕೆ ಒಡ್ಡುವಂತವುಗಳೇ ಎನ್ನುವುದು ಅವರ ಹಾಡಿನ ವಿಶೇಷ. ಪ್ರತಿಯೊಂದು ಹಾಡಿನ ಒಳಗಿನ ಸ್ಥಾಯಿ ಭಾವವನ್ನು ಎಲ್ಲೆಡೆ ಸಂಚರಿಸುವಂತೆ ಮಾಡಿದ್ದು ಶಿವಮೊಗ್ಗ ಸುಬ್ಬಣ್ಣ ಅವರ ಗಾನ ವಿಶೇಷ.

೧. ಬಾರಿಸು ಕನ್ನಡ ಡಿಂಡಿಮವ- ಕುವೆಂಪು
ಈ ಹಾಡು ನಾಡಿನೆಲ್ಲೆಡೆ ಜನಪ್ರಿಯವಾಗಲು ಕಾರಣರಾದವರು ಶಿವಮೊಗ್ಗ ಸುಬ್ಬಣ್ಣ. ಇವತ್ತು ಅನೇಕ ಬೇರೆ ಬೇರೆ ಗಾಯಕರು ಹಾಡಿದ್ದರೂ ಮಕ್ಕಳಾದಿಯಾಗಿ ಎಲ್ಲರ ಬಾಯಲ್ಲಿರುವುದು ಇವರದೇ ಟ್ಯೂನ್‌.

ಕವಿ: ಕುವೆಂಪು

ಬಾರಿಸು ಕನ್ನಡ ಡಿಂಡಿಮವ/ ಓ ಕರ್ನಾಟಕ ಹೃದಯ ಶಿವ
ಸತ್ತಂತಿಹರನು ಬಡಿದೆಚ್ಚರಿಸು/ ಕಚ್ಚಾಡುವರನು ಕೂಡಿಸಿ ಒಲಿಸು
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು/ ಒಟ್ಟಿಗೆ ಬಾಳುವ ತೆರದಲಿ ಹರಸು

೨. ಬನ್ನಿ ಭಾವಗಳೆ ಬನ್ನಿ ನನ್ನೆದೆಗೆ- ಎನ್‌ಎಸ್‌ ಲಕ್ಷ್ಮೀನಾರಾಯಣ ಭಟ್ಟ
ಬನ್ನಿ ಭಾವಗಳೆ ಬನ್ನಿ ನನ್ನೆದೆಗೆ/ ಕರೆಯುವೆ ಕೈ ಬೀಸಿ
ಬತ್ತಿದೆದೆಯಲ್ಲಿ ಬೆಳೆಯಿರಿ ಹಸಿರನು/ ಪ್ರೀತಿಯ ಮಳೆ ಸುರಿಸಿ

೩. ಆನಂದಮಯ ಈ ಜಗಹೃದಯ- ಕುವೆಂಪು
ಆನಂದಮಯ ಈ ಜಗಹೃದಯ ಏತಕೆ ಭಯ ಮಾಣೋ
ಸೂರ್ಯೋದಯ ಚಂದ್ರೋದಯ ದೇವರ ದಯ ಕಾಣೋ
ಬಿಸಿಲಿದು ಬರಿ ಬಿಸಿಲಲ್ಲವೋ ಸೂರ್ಯನ ಕೃಪೆ ಕಾಣೋ
ಸೂರ್ಯನು ಬರಿ ರವಿಯಲ್ಲವೋ ಆ ಭ್ರಾಂತಿಯ ಮಾಣೋ

೪. ಮೊದಲು ಮಾನವನಾಗು- ಸಿದ್ದಯ್ಯ ಪುರಾಣಿಕ
ಓದಿ ಬ್ರಾಹ್ಮಣನಾಗು/ಕಾದಿ ಕ್ಷತ್ರಿಯನಾಗು
ಶೂದ್ರ ವೈಶ್ಯನೆ ಆಗು/ದುಡಿದು ಗಳಿಸಿ/ಏನಾದರೂ ಆಗು
ನಿನ್ನೊಲವಿನಂತಾಗು/ಏನಾದರೂ ಸರಿಯೆ/ಮೊದಲು ಮಾನವನಾಗು

೫. ಎಲ್ಲಾದರು ಇರು ಎಂತಾದರು ಇರು-ಕುವೆಂಪು
ಎಲ್ಲಾದರು ಇರು ಎಂತಾದರು ಇರು/ ಎಂದೆಂದಿಗು ನೀ ಕನ್ನಡವಾಗಿರು
ಕನ್ನಡ ಗೋವಿನ ಓ ಮುದ್ದಿನ ಕರು/ ಕನ್ನಡತನವೊಂದಿದ್ದರೆ ನೀನಮ್ಮಗೆ ಕಲ್ಪತರು

೬. ಬಾಗಿಲೊಳು ಕೈಮುಗಿದು-ಕುವೆಂಪು
ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ
ಶಿಲೆಯಲ್ಲವೀ ಗುಡಿಯು… ಕಲೆಯ ಬಲೆಯು ||
ಕಂಬನಿಯ ಮಾಲೆಯನು ಎದೆಯ ಬಟ್ಟಲೊಳಿಟ್ಟು
ಧನ್ಯತೆಯ ಕುಸುಮಗಳ ಅರ್ಪಿಸಿಲ್ಲಿ||

೭. ಮಾನವನೆದೆಯಲಿ ಆರದೆ ಉಳಿಯಲಿ-ಎನ್ನೆಸ್‌ ಲಕ್ಷ್ಮೀನಾರಾಯಣ ಭಟ್ಟ
ಮಾನವನೆದೆಯಲಿ ಆರದೆ ಉಳಿಯಲಿ/ದೇವರು ಹಚ್ಚಿದ ದೀಪ
ರೇಗುವ ದನಿಗೂ ರಾಗವು ಒಲಿಯಲಿ/ಮೂಡಲಿ ಮಧುರಾಲಾಪ

೮. ದೇವರೇ ಅಗಾಧ ನಿನ್ನ ಕರುಣೆಯ ಕಡಲು-ಬಿ.ಆರ್. ಲಕ್ಷ್ಮಣ ರಾವ್
ದೇವರೇ, ಅಗಾಧ ನಿನ್ನ ಕರುಣೆಯ ಕಡಲು\ ನನಗೆ ಸಾಧ್ಯವೇ ಅದರ ಆಳವಳೆಯಲು?
ತಾಮಸಕ್ಕೆ ಬಲವ ಕೊಟ್ಟೆ\ ರಾಜಸಕ್ಕೆ ಫಲವ ಕೊಟ್ಟೆ\ಸತ್ವಕೆ ಷಂಡತ್ವ ಕೊಟ್ಟೆ ತತ್ವ ಗೊಣಗಲು
ಕೈಯ ಕೊಟ್ಟೆ ಕೆಡವಲೆಂದು\ಕಾಲು ಕೊಟ್ಟೆ ಎಡವಲೆಂದು\ಬುದ್ಧಿ ಕೊಟ್ಟೆ ನಿನ್ನನ್ನೇ ಅಲ್ಲಗಳೆಯಲು!

೯. ಚಿಂತೆ ಏತಕೆ ಗೆಳತಿ- ಎನ್‌.ಎಸ್‌. ಲಕ್ಷ್ಮೀನಾರಾಯಣ ಭಟ್ಟ
ಚಿಂತೆ ಏತಕೆ ಗೆಳತಿ/ಜೀವ ಭಾವ ಹೆಗಲ ಹೂಡಿ
ನೋವು ನಲಿವ ಕೀಲಾ ಮಾಡಿ/ಸಾಗುತಿಹುದು ಬಾಳ ಗಾಡಿ

೧೦. ತೇನವಿನಾ ತೃಣಮಪಿ ನ ಚಲತಿ-ಕುವೆಂಪು
ತೇನವಿನಾ ತೃಣಮಪಿ ನ ಚಲತಿ ತೇನವಿನಾ/ಮಮತೆಯ ಬಿಡು ಹೇ! ಮೂಢಮನ
ರವಿಗಿಲ್ಲದ ಭಯ ಶಶಿಗಿಲ್ಲದ ಭಯ/ ತಾರನಿಬಹಕೆ ಇರದ ಭಯ
ನಿನಗೇತಕೆ ಬಿಡು ಅಣು ಶ್ರದ್ಧೆಯನಿಡು/ ನಿನ್ನನ್ನೇ ನೈವೇದ್ಯವ ನೀಡು

ಇದನ್ನೂ ಓದಿ| ಸುಬ್ಬಣ್ಣ ಗಾನ ನಮನ| ಕಾಡು ಕುದುರೆ ಹಾಡಿನತ್ತ ಓಡಿ ಬಂದಿತ್ತಾ… ಶಿವಮೊಗ್ಗ ಸುಬ್ಬಣ್ಣನೆಂಬ ಸಂಗೀತ ಸಂತ

Exit mobile version