Site icon Vistara News

Shivamogga terror | ಗುರುಪುರ ಹೊಳೆ ಬದಿಯಲ್ಲಿ ಬಾಂಬ್‌ ತಯಾರಿಸುತ್ತಿದ್ದರು, ಮಂಗಳೂರಲ್ಲೂ ಮಹಜರು

Mangalore mane

ಮಂಗಳೂರು: ಶಿವಮೊಗ್ಗದಲ್ಲಿ ಬಯಲಾದ ಉಗ್ರ ಜಾಲದ ಬೇರುಗಳು ಮಂಗಳೂರಿನಲ್ಲಿ ಗಾಢವಾಗಿ ಹರಡಿಕೊಂಡಿರುವುದು ಬೆಳಕಿಗೆ ಬಂದಿದೆ. ಉಗ್ರ ಜಾಲದ ಜತೆ ಸಂಪರ್ಕ ಹೊಂದಿರುವ ತೀರ್ಥಹಳ್ಳಿಯ ಸೊಪ್ಪು ಗುಡ್ಡೆಯ ಮಹಮ್ಮದ್‌ ಶಾರೀಕ್‌, ಶಿವಮೊಗ್ಗದ ಸಿದ್ಧೇಶ್ವರ ನಗರದ‌ ಸೈಯದ್‌ ಯಾಸಿನ್‌ ಮತ್ತು ಮಂಗಳೂರಿನ ಮಾಜ್‌ ಮುನೀರ್‌ ಅಹಮ್ಮದ್ ಅವರ ಮೇಲೆ ಎಫ್‌ಐಆರ್‌ ದಾಖಲಾಗಿದೆ. ಇವರಲ್ಲಿ ಯಾಸಿನ್‌ ಮತ್ತು ಮಾಜ್‌ ಸದ್ಯ ಪೊಲೀಸರ ಕಸ್ಟಡಿಯಲ್ಲಿದ್ದಾರೆ. ನಿಜವೆಂದರೆ, ಮಾಜ್‌ ಮಂಗಳೂರಿನವನೆಂದು ಗುರುತಿಸಲ್ಪಟ್ಟರೂ ಆತ ಮೂಲತಃ ಶಿವಮೊಗ್ಗದವನೇ.

ಮಾಜ್‌ ಮಂಗಳೂರಿನಲ್ಲಿದ್ದು ಎಮ್‌ ಟೆಕ್‌ ಅಧ್ಯಯನ ಮಾಡಿದವನಾಗಿದ್ದು ಈಗಲೂ ಮಂಗಳೂರಿನಲ್ಲೇ ಇದ್ದಾನೆ. ಉಗ್ರ ಜಾಲದ ಕಿಂಗ್‌ ಪಿನ್‌ ಎಂದು ಹೇಳಲಾದ ಶಾರೀಕ್‌ ಆಗಾಗ ಬರುತ್ತಿದ್ದ. ಹಾಗೆ ಬಂದವನೇ ಎರಡು ವರ್ಷದ ಹಿಂದೆ ಮಂಗಳೂರಿನಲ್ಲಿ ಗೋಡೆಬರಹದ ಮೂಲಕ ತನ್ನ ಉಗ್ರ ಬುದ್ಧಿಯನ್ನು ತೋರಿಸಿದ್ದು.

ನವೆಂಬರ್‌ ೨೭ರ ಮುಂಜಾನೆ ಮಂಗಳೂರಿನ ಕದ್ರಿಯಲ್ಲಿರುವ ಕೋರ್ಟ್‌ ರಸ್ತೆಯ ಹಳೆ ಪೊಲೀಸ್‌ ಔಟ್‌ ಪೋಸ್ಟ್‌ನ ಗೋಡೆಯಲ್ಲಿ ಲಷ್ಕರ್‌ ತಯ್ಬಾ ಮತ್ತು ತಾಲಿಬಾನ್‌ ಪರವಾಗಿ ಗೋಡೆಬರಹ ಬರೆದಿದ್ದರು. ಅದಕ್ಕಿಂತ ಮೊದಲು ಬೇರೊಂದು ಕಡೆ ಇದೇ ರೀತಿ ಬರೆದಿದ್ದರೂ ಅದರು ಗಮನ ಸೆಳೆದಿರಲಿಲ್ಲ. ಹೀಗಾಗಿ ಎಲ್ಲರಿಗೂ ಕಾಣುವ ಜಾಗದಲ್ಲಿ ಮತ್ತೊಮ್ಮೆ ಬರೆದಿದ್ದರು. ಟವರ್‌ ಲೊಕೇಶನ್‌ ಮತ್ತು ಸಿಸಿಟಿವಿ ಫೂಟೇಜ್‌ಗಳ ಆಧಾರದಲ್ಲಿ ಈ ಕೃತ್ಯ ನಡೆಸಿದ್ದು ಮಾಜ್‌ ಮುನೀರ್‌ ಅಹಮದ್‌ ಮತ್ತು ಶಾರೀಕ್‌ ಎನ್ನುವುದು ಬಯಲಾಗಿತ್ತು. ಅವರನ್ನು ಬಂಧಿಸಿ ಜೈಲಿಗೆ ಅಟ್ಟಲಾಗಿತ್ತು. ಆದರೆ, ಅವರಿಬ್ಬರೂ ಹತ್ತೇ ತಿಂಗಳಲ್ಲಿ ಜಾಮೀನು ಪಡೆದು ಕಳೆದ ೨೦೨೧ರ ಸೆಪ್ಟೆಂಬರ್‌ ೮ರಂದು ಬಿಡುಗಡೆಯಾಗಿದ್ದರು.

ಮಾಜ್‌ ವಾಸವಾಗಿದ್ದ ಮಂಗಳೂರಿನ ಅಪಾರ್ಟ್‌ಮೆಂಟ್‌

ನಿಜವೆಂದರೆ, ಆವತ್ತಿನಿಂದ ಇವತ್ತಿನವರೆಗೂ ಮಾಜ್‌ ಮಂಗಳೂರಿನಲ್ಲೇ ವಾಸವಾಗಿದ್ದಾನೆ. ಶಾರೀಕ್‌ ಆಗಾಗ ಬಂದು ಹೋಗುತ್ತಿದ್ದಾನೆ. ಮತ್ತು ಅವರಿಬ್ಬರೂ ಮಂಗಳೂರಿನಲ್ಲೇ ಬಾಂಬ್‌ ತಯಾರಿಕೆಯ ಸ್ಕೆಚ್‌ ರೂಪಿಸಿದ್ದರು ಎಂಬುದೀಗ ಬಯಲಾಗಿದೆ. ಅವರಿಗೆ ಎಲೆಕ್ಟ್ರಿಕಲ್‌ ಎಂಜಿನಿಯರ್‌ ಆಗಿರುವ ಶಿವಮೊಗ್ಗ ಸೈಯದ್‌ ಯಾಸಿನ್‌ ಕೂಡಾ ಕೈಜೋಡಿಸಿದ್ದ.

ಮಂಗಳೂರಿಗೆ ಕರೆ ತಂದರು
ಶಿವಮೊಗ್ಗ ಪೊಲೀಸರಿಂದ ಬಂಧಿತರಾದ ಮಾಜ್‌ ಮತ್ತು ಯಾಸಿನ್‌ರನ್ನು ಮಂಗಳವಾರ ಮಂಗಳೂರಿಗೆ ಕರೆತರಲಾಗಿದೆ. ಟೆಂಪೋ ಟ್ರಾವೆಲರ್‌ನಲ್ಲಿ ಆರೋಪಿಗಳಿಬ್ಬರನ್ನು ಕರೆ ತಂದ ಶಿವಮೊಗ್ಗ ಪೊಲೀಸರು ಮೊದಲು ಆರೋಪಿ ಮಾಜ್‌ ವಾಸವಿದ್ದ ಫ್ಲ್ಯಾಟ್‌ಗೆ ಭೇಟಿ ನೀಡಿದೆ. ಮಂಗಳೂರು ನಗರದ ಆರ್ಯ ಸಮಾಜ ರಸ್ತೆಯಲ್ಲಿರುವ ಪ್ರೆಸಿಡೆನ್ಸಿ ಅವೆನ್ಯೂ ಫ್ಲ್ಯಾಟ್‌ನಲ್ಲಿ ಮಾಜ್‌ ವಾಸವಾಗಿದ್ದ. ಆತ ತಂಗಿದ್ದ ರೂಮ್‌ನಲ್ಲಿ ತಪಾಸಣೆ ನಡೆಸಿದ ಪೊಲೀಸರು ಅಲ್ಲಿಂದ ಕೆಲವು ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಗುರುಪುರದ ತುಂಗಾ ನದಿ ದಂಡೆಯಲ್ಲಿ ಮಹಜರು
ಶಂಕಿತ ಉಗ್ರರಿಬ್ಬರನ್ನೂ ಪೊಲೀಸರು ಶಿವಮೊಗ್ಗದ ಹಳೆ ಗುರುಪುರದ ತುಂಗಾ ನದಿಯಂಚಿಗೆ ಕರೆದುಕೊಂಡು ಹೋಗಿದ್ದಾರೆ. ಈ ಉಗ್ರರು ಹೊಳೆದಂಡೆಯಲ್ಲಿ ಬಾಂಬ್‌ ತಯಾರಿಸುತ್ತಿದ್ದರು ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದ್ದು, ಅಲ್ಲಿ ಸ್ಥಳ ಮಹಜರು ಮಾಡಲಾಗಿದೆ.

ಶಿವಮೊಗ್ಗದಲ್ಲಿರುವ ಯಾಸಿನ್‌ ಮನೆಯಲ್ಲಿ ಮಹಜರು

ಯಾಸಿನ್‌ನ ಮನೆಯಲ್ಲೂ ಮಹಜರು
ಈ ನಡುವೆ ಶಿವಮೊಗ್ಗದ ಸಿದ್ದೇಶ್ವರ ನಗರದಲ್ಲಿರುವ ಯಾಸಿನ್‌ ಮನೆಗೂ ಪೊಲೀಸರು ಭೇಟಿ ನೀಡಿ ಮಹಜರು ನಡೆಸಿದ್ದಾರೆ. ಗ್ರಾಮೀಣ ಪೊಲೀಸರು ಯಾಸಿನ್‌ ಮನೆಯಲ್ಲಿ ಮಹಜರು ನಡೆಸಿದ್ದು, ಜತೆಗೆ ಆತನೂ ಇದ್ದ. ಎಸ್‌ಪಿ, ಇಬ್ಬರು ಡಿವೈಎಸ್ಪಿ, 8 ಇನ್ಸ್‌ಪೆಕ್ಟರ್‌ಗಳು ಸೇರಿದಂತೆ ಮೂವತ್ತಕ್ಕೂ ಹೆಚ್ಚು ಸಿಬ್ಬಂದಿ ಭಾಗಿಯಾಗಿದ್ದರು.

Exit mobile version