Site icon Vistara News

Shivamogga terror | ತೀರ್ಥಹಳ್ಳಿಯಲ್ಲಿ ಇ.ಡಿ ದಾಳಿ: ಮೂವರು ಶಂಕಿತ ಉಗ್ರರ ಮನೆಯಲ್ಲಿ ಶೋಧ ಕಾರ್ಯಾಚರಣೆ

Terror ED raid

ಶಿವಮೊಗ್ಗ: ರಾಜ್ಯ ಮತ್ತು ದೇಶದಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ಶಿವಮೊಗ್ಗದ ಟೆರರ್‌ (Shivamogga terror) ಕಾರ್ಯಾಚರಣೆಗೆ ಸಂಬಂಧಿಸಿ ಈಗ ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿದೆ. ಶಿವಮೊಗ್ಗದ ಶಂಕಿತ ಉಗ್ರರಿಗೆ ಹಣಕಾಸು ನೆರವು ನೀಡುತ್ತಿರುವವರು ಯಾರು, ಅವರ ಹಣಕಾಸು ವ್ಯವಹಾರಗಳು ಹೇಗೆಲ್ಲ ನಡೆಯುತ್ತಿವೆ ಎನ್ನುವುದನ್ನು ತನಿಖೆ ಮಾಡುವುದಕ್ಕಾಗಿ ಇ.ಡಿ. ಅಧಿಕಾರಿಗಳು ತೀರ್ಥಹಳ್ಳಿಯಲ್ಲಿ ದಾಳಿ ಆರಂಭಿಸಿದ್ದಾರೆ.

ಮಂಗಳೂರು ಕುಕ್ಕರ್‌ ಸ್ಫೋಟ ಪ್ರಕರಣದಲ್ಲಿ ಪ್ರಧಾನ ಆರೋಪಿಯಾಗಿರುವ ಮೊಹಮ್ಮದ್‌ ಶಾರಿಕ್‌, ಈಗಾಗಲೇ ಅಂತಾರಾಷ್ಟ್ರೀಯ ಜಾಲದಲ್ಲಿ ಗುರುತಿಸಿಕೊಂಡಿರುವ ಮತೀನ್‌ ಖಾನ್‌ ಮತ್ತು ಮಂಗಳೂರಿನಲ್ಲಿದ್ದು ಗೋಡೆ ಬರಹ ಮತ್ತು ಟ್ರಯಲ್‌ ಬ್ಲಾಸ್ಟ್‌ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲಿನಲ್ಲಿರುವ ಮಾಜ್‌ ಮುನೀರ್‌ ಇವರೆಲ್ಲರೂ ಶಿವಮೊಗ್ಗ ತೀರ್ಥಹಳ್ಳಿಯ ಸೊಪ್ಪಿನ ಗುಡ್ಡೆ ನಿವಾಸಿಗಳು. ಇದೀಗ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬುಧವಾರ ಮುಂಜಾನೆ ಅವರ ಮನೆಗಳಿಗೆ ದಾಳಿ ಮಾಡಿ ತನಿಖೆ ನಡೆಸುತ್ತಿದ್ದಾರೆ.

ಐದು ಕಾರುಗಳಲ್ಲಿ ಬಂದಿರುವ ಸುಮಾರು 15ಕ್ಕೂ ಹೆಚ್ಚು ಸಿಬ್ಬಂದಿಗಳು ಮೂವರು ಶಂಕಿತ ಉಗ್ರರ ಮನೆಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಮಾಜ್ ಮುನೀರ್, ಶಾರಿಕ್ ಮನೆ ಸೇರಿದಂತೆ ಅಕ್ಕಪಕ್ಕದ ಮನೆಗಳಿಗೂ ತೆರಳಿ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ.

ಪ್ರತಿ ಮನೆಗೂ ತೆರಳಿರುವ ಅಧಿಕಾರಿಗಳ ತಂಡ, ಮೊಬೈಲ್‌ ಸ್ವಿಚ್ ಆಫ್ ಮಾಡುವಂತೆ ಹೇಳಿದ್ದಲ್ಲದೆ ಯಾರೂ ಫೋಟೋ ತೆಗೆಯದಂತೆ ಸೂಚನೆ ನೀಡಿದೆ. ಇ.ಡಿ. ತಂಡ ಹೊರ ಊರಿನಿಂದ ಪ್ರತ್ಯೇಕವಾಗಿ ಪೊಲೀಸ್‌ ತಂಡಗಳನ್ನು ರಕ್ಷಣೆಗಾಗಿ ಕರೆ ತಂದಿದೆ.

ಶಸ್ತ್ರ ಸಜ್ಜಿತ ಪೊಲೀಸರನ್ನು ತಮ್ಮೊಂದಿಗೆ ಕರೆತಂದಿರುವ ಇಡಿ ಅಧಿಕಾರಿಗಳ ಶಂಕಿತ ಉಗ್ರರಿಗೆ ಹಣಕಾಸಿನ ಮೂಲವೇನು ಎಂಬ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ. ಮನೆಯವರು, ಅಕ್ಕಪಕ್ಕದವರ ಹಣಕಾಸು ವ್ಯವಹಾರಗಳನ್ನೂ ಅದು ಪರಿಶೀಲನೆ ನಡೆಸಲಿದೆ.

Exit mobile version