Site icon Vistara News

Shivamogga terror | ಮಗ ಉಗ್ರನಾದ ನೋವು: ಮಹಮ್ಮದ್‌ ಮಾಜ್‌ನ ತಂದೆ ಹೃದಯಾಘಾತದಿಂದ ನಿಧನ

Maj and father

ಶಿವಮೊಗ್ಗ:‌ ಶಿವಮೊಗ್ಗದಲ್ಲಿ ಪತ್ತೆಯಾಗಿರುವ ಉಗ್ರ ಜಾಲಕ್ಕೆ ಸಂಬಂಧಿಸಿ ಬಂಧಿತನಾಗಿರುವ ಮಂಗಳೂರು ಮೂಲದ ಮಾಜ್‌ ಮುನೀರ್‌ ಅಹಮದ್‌ನ ತಂದೆ ಮುನೀರ್‌ ಸಾಬ್‌ ಜಾನ್‌(೫೫) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಎದೆನೋವು ಕಾಣಿಸಿಕೊಂಡ ಅವರನ್ನು ಮಂಗಳೂರಿನ ಫಾ.ಮುಲ್ಲರ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಅಲ್ಲಿ ಮೃತಪಟ್ಟಿದ್ದಾರೆ.

ಮಾಜ್‌ ಮುನೀರ್‌ ಮಹಮದ್‌ ಎಮ್‌ ಟೆಕ್‌ ಪದವೀಧರನಾಗಿದ್ದು, ಶಿವಮೊಗ್ಗದಲ್ಲಿ ಪತ್ತೆಯಾದ ಉಗ್ರ ಜಾಲದಲ್ಲಿ ಬಂಧಿತನಾಗಿದ್ದ. ಈತನ ಜತೆಗೆ ಶಿವಮೊಗ್ಗದ ಸಿದ್ಧೇಶ್ವರ ನಗರದ ಮಹಮ್ಮದ್‌ ಯಾಸಿನ್‌ನನ್ನು ಬಂಧಿಸಲಾಗಿತ್ತು. ಅವರಿಬ್ಬರನ್ನು ಶಿವಮೊಗ್ಗದಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಇವರಿಬ್ಬರಿಗೆ ಕಿಂಗ್‌ ಪಿನ್‌ ಆಗಿರುವ ತೀರ್ಥಹಳ್ಳಿಯ ಸೊಪ್ಪುಗುಡ್ಡೆಯ ಮಹಮ್ಮದ್‌ ಶಾರಿಕ್‌ ತಲೆಮರೆಸಿಕೊಂಡಿದ್ದಾನೆ.

ನಾಳೆ ಅಂತ್ಯಕ್ರಿಯೆ: ಮಾಜ್‌ಗೂ ಅಂತಿಮ ದರ್ಶನಕ್ಕೆ ಅವಕಾಶ
ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ಮುನೀರ್ ಸಾಬ್ ಜಾನ್ ಅವರು ಕಳೆದ ಐದು ವರ್ಷಗಳಿಂದ ಮಂಗಳೂರಿನಲ್ಲಿ ವಾಸವಾಗಿದ್ದಾರೆ. ಮಗ ವಾಜ್‌ ಮತ್ತು ಪತ್ನಿ ಜತೆ ಮಂಗಳೂರಿನ ಬಲ್ಮಠ ಬಳಿಯ ಪ್ರೆಸಿಡೆನ್ಸಿ ಅವೆನ್ಯೂನಲ್ಲಿ ವಾಸವಾಗಿದ್ದರು. ಮಗ ಉಗ್ರ ಚಟುವಟಿಕೆಯಲ್ಲಿ ಬಂಧಿತನಾದ ಬಳಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.
ಈ ನಡುವೆ, ಮಾಜ್‌ನ ತಂದೆಯ ಸಾವಿನ ಸುದ್ದಿ ತಿಳಿದ ಪೊಲೀಸರು ಕೂಡಲೇ ಆತನನ್ನು ಕೋರ್ಟ್‌ಗೆ ಹಾಜರುಪಡಿಸಿ ತಂದೆಯ ಅಂತಿಮ ದರ್ಶನಕ್ಕೆ ಕರೆದೊಯ್ಯಲು ಅನುಮತಿ ಪಡೆದಿದ್ದಾರೆ.
ಮುನೀರ್‌ ಅಹಮದ್‌ ಅವರ ತಂಗಿಯೊಬ್ಬರು ದುಬೈಯಲ್ಲಿದ್ದು, ಅವರು ಶನಿವಾರ ಬರಲಿದ್ದು, ಬಳಿಕ ಉಡುಪಿ ಸಮೀಪದ ಹೊನ್ನಾಲೆಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಅಲ್ಲಿಗೆ ಮಾಜ್‌ನನ್ನು ಕರೆದೊಯ್ಯಲು ಪೊಲೀಸರು ನಿರ್ಧರಿಸಿದ್ದಾರೆ.

ತಂದೆಗೆ ಹಿಂದಿನಿಂದಲೂ ನೋವೇ
ಎರಡು ವರ್ಷದ ಹಿಂದೆ ಮಂಗಳೂರಿನಲ್ಲಿ ಲಷ್ಕರೆ ತಯ್ಬಾ ಉಗ್ರ ಸಂಘಟನೆ ಪರವಾಗಿ ಗೋಡೆ ಬರಹಗಳನ್ನು ಬರೆದ ಪ್ರಕರಣಕ್ಕೆ ಸಂಬಂಧಿಸಿ ೨೦೨೦ರ ನವೆಂಬರ್‌ನಲ್ಲಿ ಮಾಜ್‌ ಮತ್ತು ಶಾರಿಕ್‌ ಬಂಧನಕ್ಕೆ ಒಳಗಾಗಿದ್ದರು.

ನವೆಂಬರ್‌ ೨೭ರ ಮುಂಜಾನೆ ಮಂಗಳೂರಿನ ಕದ್ರಿಯಲ್ಲಿರುವ ಕೋರ್ಟ್‌ ರಸ್ತೆಯ ಹಳೆ ಪೊಲೀಸ್‌ ಔಟ್‌ ಪೋಸ್ಟ್‌ನ ಗೋಡೆಯಲ್ಲಿ ಲಷ್ಕರ್‌ ತಯ್ಬಾ ಮತ್ತು ತಾಲಿಬಾನ್‌ ಪರವಾಗಿ ಗೋಡೆಬರಹ ಬರೆದಿದ್ದರು. ಅದಕ್ಕಿಂತ ಮೊದಲು ಬೇರೊಂದು ಕಡೆ ಇದೇ ರೀತಿ ಬರೆದಿದ್ದರೂ ಅದರು ಗಮನ ಸೆಳೆದಿರಲಿಲ್ಲ. ಹೀಗಾಗಿ ಎಲ್ಲರಿಗೂ ಕಾಣುವ ಜಾಗದಲ್ಲಿ ಮತ್ತೊಮ್ಮೆ ಬರೆದಿದ್ದರು. ಟವರ್‌ ಲೊಕೇಶನ್‌ ಮತ್ತು ಸಿಸಿಟಿವಿ ಫೂಟೇಜ್‌ಗಳ ಆಧಾರದಲ್ಲಿ ಇಬ್ಬರನ್ನು ಬಂಧಿಸಲಾಗಿತ್ತು. ಆಗ ಮಾಜ್‌ ಮುನೀರ್‌ ಅಹ್ಮದ್‌ ಎಂಟೆಕ್‌ ವಿದ್ಯಾಭ್ಯಾಸ ಮಾಡುತ್ತಿದ್ದರೆ ಶಾರೀಕ್‌ ತನ್ನ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ.
ಈ ಪ್ರಕರಣದ ವಿಚಾರಣೆ ಹತ್ತು ತಿಂಗಳು ನಡೆದು ಜಾಮೀನು ದೊರಕಿತ್ತು.

ಮಾಜ್‌ನ ತಂದೆ ಗೋಡೆ ಬರಹದ ವಿದ್ಯಮಾನದಿಂದಲೇ ತೀವ್ರವಾಗಿ ನೊಂದಿದ್ದರು. ಬಳಿಕವಾದರೂ ಸುಧಾರಿಸಬಹುದು ಎಂಬ ಅವರ ಕನಸು ಈಡೇರಲೇ ಇಲ್ಲ. ಮಾಜ್‌ ಮತ್ತೆ ತನ್ನ ಹಳೆ ಚಾಳಿಯನ್ನು ಮುಂದುವರಿಸಿ ಇದೀಗ ಸಿಕ್ಕಿ ಬಿದ್ದಿದ್ದಾನೆ. ಕೈಗೆ ಬಂದ ಮಗ ಈ ರೀತಿ ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಮುನೀರ್‌ ಸಾಬ್‌ ಜಾನ್‌ ಅವರಿಗೆ ತುಂಬಾ ನೋವುಂಟು ಮಾಡಿತ್ತು. ಅದಲ್ಲದೆ, ಶಿವಮೊಗ್ಗ ಪೊಲೀಸರು ಪ್ರೆಸಿಡೆನ್ಸಿ ಅಪಾರ್ಟ್‌ಮೆಂಟ್‌ಗೆ ಬಂದು ತನಿಖೆ ನಡೆಸಿದ್ದು ಅವರಿಗೆ ಇನ್ನಷ್ಟು ಘಾಸಿ ಉಂಟು ಮಾಡಿತ್ತು.

ಆತನಿಗಾಗಿಯೇ ಮಂಗಳೂರಿಗೆ ಬಂದಿದ್ದರು
ನಿಜವೆಂದರೆ ಮಗನ ಬಗ್ಗೆ ಅತೀವ ಕಾಳಜಿ ಹೊಂದಿದ್ದ ಮುನೀರ್‌ ಸಾಬ್‌ ಆತನ ಶಿಕ್ಷಣಕ್ಕಾಗಿಯೇ ತೀರ್ಥಹಳ್ಳಿಯಿಂದ ಮಂಗಳೂರಿಗೂ ಶಿಫ್ಟ್ ಆಗಿದ್ದರು. ಮಾಝ್ ಸೆಪ್ಟಂಬರ್​ 14 ರಿಂದ ನಾಪತ್ತೆಯಾಗಿದ್ದಾನೆ ಎಂದು ಹೈಕೋರ್ಟ್ ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಮನೆ ಕೆಳಗೆ ಪಾರ್ಸಲ್​ ಪಡೆದುಕೊಂಡು ಬರಲು ಹೋದ ಮಾಜ್ ವಾಪಸ್ ಬಂದಿರಲಿಲ್ಲ ಎಂದು ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಅವರಿಗೆ ದಂಡ ವಿಧಿಸಿತ್ತು.

ಇದನ್ನೂ ಓದಿ | Shivamogga terror | ಗುರುಪುರ ಹೊಳೆ ಬದಿಯಲ್ಲಿ ಬಾಂಬ್‌ ತಯಾರಿಸುತ್ತಿದ್ದರು, ಮಂಗಳೂರಲ್ಲೂ ಮಹಜರು

Exit mobile version