ಶಿವಮೊಗ್ಗ: ಶಿವಮೊಗ್ಗವನ್ನು ಕೇಂದ್ರೀಕರಿಸಿ ನಡೆಯುತ್ತಿದ್ದ ಉಗ್ರ ಚಟುವಟಿಕೆಗಳ (Shivamogga terror) ನಡು ಮುರಿಯಲು ತೀವ್ರ ಪ್ರಯತ್ನ ನಡೆಸುತ್ತಿರುವ ಎನ್‌ಐಎ ಈ ಸಂಬಂಧ ಇನ್ನೂ ಇಬ್ಬರನ್ನು ಬಂಧಿಸಿದೆ. ಶಿವಮೊಗ್ಗ ಟೆರರ್ ಪ್ರಕರಣಕ್ಕೆ ಸಂಬಂಧಿಸಿ ತೀರ್ಥಹಳ್ಳಿಯ ಮೊಹಮ್ಮದ್ ಶಾರಿಕ್, ಶಿವಮೊಗ್ಗದ ಮೊಹಮ್ಮದ್ ಯಾಸಿನ್ ಮತ್ತು ಮಂಗಳೂರಿನ ಮಾಜ್ ಮುನೀರ್ ಪ್ರಧಾನ ಶಂಕಿತ ಉಗ್ರರಾಗಿದ್ದಾರೆ. ಅವರ ಜತೆ ಸಂಬಂಧ ಹೊಂದಿದ್ದ ಹಿನ್ನೆಲೆಯಲ್ಲಿ ಇತ್ತೀಚೆಗೆ ಮಂಗಳೂರು ಮತ್ತು ಶಿವಮೊಗ್ಗದಲ್ಲಿ ಇಬ್ಬರನ್ನು ಬಂಧಿಸಲಾಗಿತ್ತು. ಇದೀಗ ಮಂಗಳೂರು ಮತ್ತು ದಾವಣಗೆರೆಯ ಹೊನ್ನಾಳಿಯಲ್ಲಿ ಇನ್ನಿಬ್ಬರನ್ನು ಎನ್‌ಐಎ ಬಂಧಿಸಿದೆ.
ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಹೊರವಲಯದ ತೊಕ್ಕೊಟ್ಟಿನ ಬಳಿಯ ಪೆರ್ಮಣ್ಣೂರು ಗ್ರಾಮದ ಮಾಜೀಲ್ ಅಬ್ದುಲ್ ರೆಹಮಾನ್ ಮತ್ತು ದಾವಣಗೆರೆಯ ಹೊನ್ನಾಳಿ ಮೂಲದ ನದೀಂ ಅಹ್ಮದ್ ಹೊಸದಾಗಿ ಬಂಧಿತರಾದವರು. ಕೆಲವು ದಿನಗಳ ಹಿಂದೆ ಮಂಗಳೂರಿನ ಪಿಎ ಎಂಜಿನಿಯರಿಂಗ್ ಕಾಲೇಜಿಗೆ ದಾಳಿ ನಡೆಸಿದ್ದ ಎನ್‌ಐಎ ಉಡುಪಿ ಮೂಲದ ವಿದ್ಯಾರ್ಥಿ ರೇಶಾನ್ ತಾಜುದ್ದೀನ್ ಶೇಖ್ ಹಾಗೂ ಶಿವಮೊಗ್ಗದಲ್ಲಿ ಹುಜೇರ್ ಫರಾನ್ ಬೇಗ್ ಎಂಬಾತನನ್ನು ಬಂಧಿಸಿತ್ತು. ಆಗಲೇ ಹೊನ್ನಾಳಿಯಲ್ಲಿ ನದೀಮ್‌ನನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಇದೀಗ ಆತನ ಬಂಧನವನ್ನು ಅಧಿಕೃತಗೊಳಿಸಲಾಗಿದೆ.
ಇವರಿಬ್ಬರೂ ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣದ ಆರೋಪಿ ಮೊಹಮ್ಮದ್ ಶಾರಿಕ್, ಆತನ ಜತೆಗಾರರಾದ ಮಾಜ್ ಮುನೀರ್ ಮತ್ತು ಸೈಯದ್ ಯಾಸಿನ್ ಜತೆ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ಶಾರಿಕ್, ಮಾಜ್ ಮುನೀರ್ ಮತ್ತು ಯಾಸಿನ್ ಶಿವಮೊಗ್ಗದ ತುಂಗಾ ತೀರ ಹಾಗೂ ಮಂಗಳೂರಿನ ನೇತ್ರಾವತಿ ತೀರದಲ್ಲಿ ಟ್ರಯಲ್ ಬ್ಲಾಸ್ಟ್‌ಗಳನ್ನು ನಡೆಸಿದ್ದರು. ಅದಕ್ಕಿಂತ ಮೊದಲು ಈ ಮೂವರು ಮಂಗಳೂರಿನಲ್ಲಿ ಲಷ್ಕರ್ ಉಗ್ರರ ಪರ ಗೋಡೆ ಬರಹಗಳನ್ನು ಬರೆದು ಸದ್ದು ಮಾಡಿದ್ದರು.
ಈಗ ಬಂಧಿತರಾಗಿರುವ ಇಬ್ಬರು ಉಗ್ರರು ಶಾರಿಕ್ ಮತ್ತು ಟೀಮ್ ಜತೆ ಸಂಪರ್ಕ ಹೊಂದಿದ್ದಲ್ಲದೆ, ಐಸಿಸ್ ಜತೆಗೂ ಸಂಪರ್ಕ ಸಾಧಿಸಲು ಯತ್ನಿಸುತ್ತಿದ್ದರು ಎಂದು ಹೇಳಲಾಗಿದೆ. ಭಾರತದಲ್ಲಿ ಐಸಿಸ್ ಭಯೋತ್ಪಾದನ ಚಟುವಟಿಕೆಗಳನ್ನು ನಡೆಸಲು ಪಿತೂರಿ ನಡೆಸಿದರು ಎಂಬ ಆಪಾದನೆ ಹೊರಿಸಲಾಗಿದೆ.
ಶಿವಮೊಗ್ಗದಲ್ಲಿ ಬೆಳಕಿಗೆ ಬಂದ ಪ್ರಕರಣ
ಶಿವಮೊಗ್ಗದಲ್ಲಿ ಕಳೆದ ೨೦೨೨ರ ಆಗಸ್ಟ್ ೧೫ರಂದು ಸಾವರ್ಕರ್ ಫ್ಲೆಕ್ಸ್ ಗಲಾಟೆ ಶುರುವಾದ ಬೆನ್ನಲ್ಲೇ ಹಿಂದು ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಲಾಗಿತ್ತು. ಅದನ್ನು ಮಾಡಿದ್ದು ಜಬಿಯುಲ್ಲಾ ಎಂಬಾತ. ಪೊಲೀಸರು ಆತನನ್ನು ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದರು. ಆಗ ಜಬಿಯುಲ್ಲಾನ ವಿಚಾರಣೆ ನಡೆಸಿದಾಗ ಉಗ್ರ ಚಟುವಟಿಕೆಗಳ ಸುಳಿವು ಸಿಕ್ಕಿತ್ತು. ಆನಂತರ ಸೆಪ್ಟೆಂಬರ್ ೧೯ರಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮಾಜ್ ಮುನೀರ್ ಮತ್ತು ಸೈಯದ್ ಯಾಸಿನ್‌ನನ್ನು ಬಂಧಿಸಿದ್ದರು. ಅದರೆ, ಶಾರಿಕ್ ಆಗಲೇ ತಪ್ಪಿಸಿಕೊಂಡಿದ್ದ. ಮುಂದೆ ಅವನು ಸಿಕ್ಕಿದ್ದು ಮಂಗಳೂರಿನಲ್ಲಿ ನವೆಂಬರ್ ೧೯ರಂದು ನಡೆದ ಕುಕ್ಕರ್ ಬ್ಲಾಸ್ಟ್‌ನಲ್ಲಿ ಗಾಯಾಳುವಾಗಿ.
ಪ್ರಸಕ್ತ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆತನ ವಿಚಾರಣೆಯ ವೇಳೆ ಹಲವು ಹೊಸ ವಿಚಾರಗಳು ಬೆಳಕಿಗೆ ಬಂದಿವೆ. ಇದರ ನಡುವೆಯೇ ಶಿವಮೊಗ್ಗದಲ್ಲಿ ಉಗ್ರರಿಗೆ ಹಣಕಾಸು ನೆರವು ಸಿಗುತ್ತಿರುವ ಹಿನ್ನೆಲೆಯ ತನಿಖೆಗಾಗಿ ಜಾರಿ ನಿರ್ದೇಶನಾಲಯ ತೀರ್ಥಹಳ್ಳಿಗೆ ಲಗ್ಗೆ ಇಟ್ಟಿದೆ.
ಇದನ್ನೂ ಓದಿ | Shivamogga terror | ತೀರ್ಥಹಳ್ಳಿಯಲ್ಲಿ ಇ.ಡಿ ದಾಳಿ: ಮೂವರು ಶಂಕಿತ ಉಗ್ರರ ಮನೆಯಲ್ಲಿ ಶೋಧ ಕಾರ್ಯಾಚರಣೆ