Site icon Vistara News

Shivamogga terror | ಜಬಿ ಅರೆಸ್ಟ್‌ ಆಗುತ್ತಿದ್ದಂತೆಯೇ ಶಾರಿಕ್‌ ಎಸ್ಕೇಪ್‌, ಡಾರ್ಕ್‌ವೆಬ್‌ ಬಳಸುತ್ತಿದ್ದರೇ ಶಂಕಿತ ಉಗ್ರರು?

Shivamogga terror

ಶಿವಮೊಗ್ಗ: ಆಗಸ್ಟ್‌ ೧೫ರಂದು ಶಿವಮೊಗ್ಗದಲ್ಲಿ ನಡೆದ ಸಾವರ್ಕರ್‌-ಟಿಪ್ಪು ಫ್ಲೆಕ್ಸ್‌ ಗಲಾಟೆ ಬಳಿಕ ಪ್ರೇಮ್ ಸಿಂಗ್‌ ಎಂಬವರಿಗೆ ಚೂರಿಯಿಂದ ಇರಿದ ಪ್ರಕರಣದ ಆರೋಪಿ ಜಬಿಯುಲ್ಲಾನ ಬಂಧನದಿಂದ ಉಗ್ರ ಜಾಲದ ಸುಳಿವು ಸಿಕ್ಕಿತು ಎನ್ನುವುದನ್ನು ಜಿಲ್ಲಾ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮೀ ಪ್ರಸಾದ್‌ ಒಪ್ಪಿಕೊಂಡಿದ್ದಾರೆ. ಉಗ್ರರ ಜಾಲ ಭೇದಿಸಿದ ವಿಚಾರ ಮತ್ತು ಮುಂದಿನ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಲು ಅವರು ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದರು.

ಉಗ್ರ ಜಾಲಕ್ಕೆ ಸಂಬಂಧಿಸಿ ಶಿವಮೊಗ್ಗದ ಸಿದ್ದೇಶ್ವರ ನಗರದ ಮಹಮ್ಮದ್‌ ಯಾಸಿನ್‌ ಮತ್ತು ಮಂಗಳೂರಿನ ಮಹಮ್ಮದ್‌ ಮಾಜ್‌ನನ್ನು ಈಗಾಗಲೇ ಬಂಧಿಸಲಾಗಿದೆ. ಆದರೆ, ಪ್ರಧಾನ ಆರೋಪಿಯಾಗಿರುವ ತೀರ್ಥಹಳ್ಳಿಯ ಸೊಪ್ಪುಗುಡ್ಡೆಯ ನಿವಾಸಿ ಮಹಮ್ಮದ್‌ ಶಾರಿಕ್‌ ತಲೆಮರೆಸಿಕೊಂಡಿದ್ದು ಆತನ ಬಂಧನಕ್ಕಾಗಿ ತೀವ್ರ ಹುಡುಕಾಟ ನಡೆಯುತ್ತಿದೆ ಎಂದು ಎಸ್‌ಪಿ ತಿಳಿಸಿದರು. ಬಂಧಿತ ಇಬ್ಬರನ್ನು ತೀವ್ರ ವಿಚಾರಣೆಗೆ ಗುರಿಪಡಿಸಲಾಗಿದ್ದು, ಆತನೂ ಈ ಹಿಂದೆ ನಾಪತ್ತೆಯಾದ ಉಗ್ರಗಾಮಿ ಮತೀನ್‌ ಹಾದಿ ಹಿಡಿದನೆ ಎನ್ನುವ ಸಂಶಯ ಹುಟ್ಟಿಕೊಂಡಿದೆ.

ಜಬಿ ಬಂಧನದ ಬಳಿಕ ನಾಪತ್ತೆ
ಆಗಸ್ಟ್‌ ೧೫ರಂದು ನಡೆದ ಸಾವರ್ಕರ್‌-ಟಿಪ್ಪು ಫ್ಲೆಕ್ಸ್‌ ವಿವಾದದ ಬಳಿಕ ಉಂಟಾದ ಉದ್ವಿಗ್ನ ಸ್ಥಿತಿಯ ನಡುವೆ ಪ್ರೇಮ್‌ ಸಿಂಗ್‌ ಎಂಬ ವ್ಯಾಪಾರಿಯ ಮೇಲೆ ಹಲ್ಲೆ ನಡೆದಿತ್ತು. ಈ ಪ್ರಕರಣದಲ್ಲಿ ಮರುದಿನವೇ ಜಬಿಯುಲ್ಲಾ ಎಂಬಾತನನ್ನು ಬಂಧಿಸಲಾಗಿತ್ತು. ಅವನ ಬಂಧನದ ದಿನದಿಂದಲೇ ಶಾರಿಕ್‌ ನಾಪತ್ತೆಯಾಗಿದ್ದ!

ಜಬಿಯುಲ್ಲಾ ಮತ್ತು ತಾರಿಕ್‌ ಮಧ್ಯೆ ಸಂಪರ್ಕವಿತ್ತು. ಜಬಿ ಬಳಿ ಇರುವ ಸೀಕ್ರೆಟ್‌ ಮೊಬೈಲ್‌ ಪೊಲೀಸರ ಕೈಗೆ ಸಿಕ್ಕಿದರೆ ಪೊಲೀಸರು ನೇರವಾಗಿ ತನ್ನ ಮನೆ ಬಾಗಿಲಿಗೇ ಬರುತ್ತಾರೆ ಎನ್ನುವುದನ್ನು ಅರಿತಿದ್ದ ಶಾರಿಕ್‌ ಆವತ್ತೇ ಊರು ಬಿಟ್ಟಿದ್ದ. ಮಂಗಳೂರಿನಲ್ಲಿ ನಡೆದ ಗೋಡೆಬರಹ ವಿವಾದದಲ್ಲಿ ಬಂಧನಕ್ಕೆ ಒಳಗಾಗಿ ಕಳೆದ ವರ್ಷ ಸೆಪ್ಟೆಂಬರ್‌ ೮ರಂದು ಬಿಡುಗಡೆಯಾಗಿದ್ದ ಶಾರಿಕ್‌ ಬಳಿಕ ತಂದೆಯೊಂದಿಗೆ ಬಟ್ಟೆ ವ್ಯಾಪಾರದಲ್ಲಿ ತೊಡಗಿಕೊಂಡಿದ್ದ. ಈ ನಡುವೆ, ಆತನ ತಂದೆ ತೀರಿಕೊಂಡಿದ್ದು, ಈತನೇ ವ್ಯಾಪಾರ ಮುಂದುವರಿಸಿದ್ದ.

ಇತ್ತ ಜಬಿಯುಲ್ಲಾ ಬಂಧನವಾಗುತ್ತಿದ್ದಂತೆಯೇ ಶಾರಿಕ್‌ ತಪ್ಪಿಸಿಕೊಂಡಿದ್ದ. ʻʻನಾನು ಬಟ್ಟೆ ಖರೀದಿಸಲು ದೆಹಲಿಗೆ ಹೋಗುತ್ತೇನೆʼʼ ಎಂದು ಹೇಳಿ ಎಸ್ಕೇಪ್ ಆಗಿದ್ದಾನೆ. ಆತ ಎಲ್ಲಿಗೆ ಹೋಗಿದ್ದಾನೆ ಎನ್ನುವ ಮಾಹಿತಿ ಯಾರಿಗೂ ಇಲ್ಲ. ಹೀಗಾಗಿ ಮತೀನ್‌ನಂತೆಯೇ ಈತನೂ ಭೂಗತನಾಗಿರುವ ಅನುಮಾನ ಶುರುವಾಗಿದೆ.

ಬೇರೆ ದೇಶಗಳ ಸರ್ವರ್‌ ಬಳಕೆ
ಈ ನಡುವೆ, ಉಗ್ರರು ಪರಸ್ಪರ ಸಂಪರ್ಕ ಮತ್ತು ಉಗ್ರ ಸಂಘಟನೆಗಳ ಜತೆ ಸಂವಹನ ನಡೆಸಲು ನಮ್ಮ ಸಾಮಾನ್ಯ ನೆಟ್ವರ್ಕ್‌ಗೆ ಸಿಗದ ಸೀಕ್ರೆಟ್‌ ಜಾಲಗಳನ್ನು ಬಳಸುತ್ತಿದ್ದರು ಎಂಬ ಮಾಹಿತಿಯನ್ನು ಎಸ್‌ಪಿ ನೀಡಿದ್ದಾರೆ.
ಈಗಾಗಲೇ ಬಂಧನದಲ್ಲಿರುವ ಶಂಕಿತ ಉಗ್ರರಾದ ಮಹಮ್ಮದ್ ಮಾಜ್ ಹಾಗೂ ಯಾಸಿನ್‌ ಮೊಬೈಲ್‌ನಲ್ಲಿ ಬೇರೆ ದೇಶಗಳ ಸರ್ವರ್ ಹೊಂದಿರುವ ಮೆಸೆಂಜರ್ ಆ್ಯಪ್ ಗಳು ಪತ್ತೆಯಾಗಿವೆ.

ಶಂಕಿತ ಉಗ್ರರು ಹನ್ನೆರಡಕ್ಕೂ ಹೆಚ್ಚು ಮೆಸೆಂಜರ್ ಆ್ಯಪ್ ಬಳಸುತ್ತಿದ್ದರು ಎನ್ನಲಾಗಿದೆ. ಅದರಲ್ಲಿಯೂ ವೈರ್ (wire), ಸಿಗ್ನಲ್ (signal) ಎಂಬ ಆ್ಯಪ್ ಗಳನ್ನು ಹೆಚ್ಚು ಬಳಸುತಿದ್ದರು ಎಂಬುದು ಪತ್ತೆಯಾಗಿದೆ. ಯಾವ ಕಾರಣಕ್ಕೂ ಪೊಲೀಸರಿಗೆ ಸಿಕ್ಕಿಬೀಳಬಾರದು ಎಂಬ ಕಾರಣಕ್ಕೆ ಅನ್ಯ ದೇಶೆಗಳ ಸರ್ವರ್‌ ಹೊಂದಿರುವ ಮೆಸೆಂಜರ್ ಆ್ಯಪ್ ಬಳಸುತ್ತಿದ್ದರು ಎನ್ನಲಾಗಿದೆ.

ಬಂಧಿತರಾದ ಇಬ್ಬರು ಶಂಕಿತರು ಡಾರ್ಕ್ ವೆಬ್ ಬಳಸುತ್ತಿದ್ದರೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ | Terror link | ಶಿವಮೊಗ್ಗ, ದ.ಕ.ಕ್ಕೆ ಹರಡಿದ್ದ ಉಗ್ರ ಜಾಲ; 11 ಕಡೆ ತಪಾಸಣೆ, ಮೊಬೈಲ್‌ ರಿಟ್ರೀವ್‌ ಆರಂಭ

Exit mobile version