ಶಿವಮೊಗ್ಗ: ಶಿವಮೊಗ್ಗ ಪೊಲೀಸರು ಭೇದಿಸಿದ ಉಗ್ರ ಜಾಲದ ಕಿಂಗ್ ಪಿನ್, ತೀರ್ಥಹಳ್ಳಿಯ ಸೊಪ್ಪು ಗುಡ್ಡೆ ನಿವಾಸಿ ಶಾರಿಕ್ ಕಳೆದ ಕಳೆದ ೨೦ ದಿನದಿಂದ ಮನೆಗೂ ಬಂದಿರಲಿಲ್ಲ ಎಂದು ಆತನ ಮಲತಾಯಿ ಶಬಾನಾ ಬಾನು ತಿಳಿಸಿದ್ದಾರೆ. ವಿಸ್ತಾರ ನ್ಯೂಸ್ ಜತೆಗೆ ಅವರು ಕೆಲವೊಂದು ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಶಿವಮೊಗ್ಗವನ್ನು ಕೇಂದ್ರೀಕರಿಸಿ ಚಟುವಟಿಕೆ ನಡೆಸುತ್ತಿದ್ದ ಉಗ್ರರ ತಂಡವನ್ನು ಪೊಲೀಸರು ಕಳೆದ ಕೆಲವು ದಿನಗಳಿಂದ ಬೆನ್ನು ಹತ್ತುತ್ತಿದ್ದು, ಸೆಪ್ಟೆಂಬರ್ ೧೯ರಂದು ಸೊಪ್ಪು ಗುಡ್ಡೆಯ ಸಾರಿಕ್, ಮಂಗಳೂರಿನ ಮಹಮ್ಮದ್ ಮಾಝ್ ಮತ್ತು ಶಿವಮೊಗ್ಗದ ಸಿದ್ದೇಶ್ವರ ನಗರದ ಸೈಯದ್ ಯಾಸಿನ್ ಮೇಲೆ ಗ್ರಾಮಾಂತರ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಮಹಮ್ಮದ್ ಮಾಝ್ ಮತ್ತು ಯಾಸಿನ್‌ನನ್ನು ಬಂಧಿಸಿದ್ದರು. ಶಾರಿಕ್ ತಲೆಮರೆಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಈ ಮೂವರೂ ಆಗಾಗ ಶಿವಮೊಗ್ಗದಲ್ಲಿ ಸೇರುತ್ತಿದ್ದರು. ಯಾವುದೋ ಗುಪ್ತ ಜಾಗದಲ್ಲಿ ಬಾಂಬ್ ತಯಾರಿಸಿ ಇಲ್ಲಿನ ಗುರುಪುರದ ತುಂಗಾ ನದಿಗೆ ಎಸೆದು ಪರೀಕ್ಷೆ ನಡೆಸುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಶಂಕಿತ ಉಗ್ರರು ಕಾರ್ಯಾಚರಣೆ ಮಾಡುತ್ತಿದ್ದ ಹಲವು ಜಾಗಗಳಿಗೆ ಬಂಧಿತ ಇಬ್ಬರನ್ನು ಕರೆದುಕೊಂಡು ಹೋಗಿ ತಪಾಸಣೆ ನಡೆಸಲಾಗಿದೆ. ಮಂಗಳೂರಿನ ಮಾಝ್ ಮನೆ ಹಾಗೂ ಶಿವಮೊಗ್ಗದ ಯಾಸಿನ್ ಮನೆಯಲ್ಲೂ ತಪಾಸಣೆ ನಡೆದಿದೆ. ತೀರ್ಥಹಳ್ಳಿ ಸಮೀಪದ ಸೊಪ್ಪುಗುಡ್ಡೆಯ ಶಾರಿಕ್‌ನ ಮನೆಗೂ ಲಗ್ಗೆ ಇಟ್ಟಿದ್ದಾರೆ. ಜತೆಗೆ ಈ ಶಂಕಿತ ಉಗ್ರರಿಗೆ ಯಾರ ಜತೆ ಸಂಪರ್ಕವಿದೆಯೋ ಅವರೆಲ್ಲರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ದಟ್ಟವಾಗಿದೆ.
೪೦ ದಿನದ ಹಿಂದೆ ತಂದೆ ಸಾವು
ಸೊಪ್ಪು ಗುಡ್ಡೆ ನಿವಾಸಿಯಾಗಿರುವ ಶಾರಿಕ್ ಬಿಕಾಂ ಪದವೀಧರನಾಗಿದ್ದ. ಈತನ ತಂದೆ ತೀರ್ಥಹಳ್ಳಿಯಲ್ಲಿ ಬಟ್ಟೆ ಅಂಗಡಿ ನಡೆಸುತ್ತಿದ್ದು ಶಾರಿಕ್ ಕೂಡಾ ಅಲ್ಲೇ ಕೆಲಸ ಮಾಡುತ್ತಿದ್ದ. ಮತ್ತು ಜತೆಗೆ ಡೆಲಿವರಿ ಬಾಯ್ ಆಗಿಯೂ ಇದ್ದ. ಈ ನಡುವೆ ೪೦ ದಿನದ ಹಿಂದೆ ಶಾರಿಕ್‌ನ ತಂದೆ ತೀರಿಕೊಂಡಿದ್ದಾರೆ. ಬಳಿಕ ಅಂಗಡಿಯ ಜವಾಬ್ದಾರಿಯನ್ನೂ ಆತನೇ ನಿರ್ವಹಿಸುತ್ತಿದ್ದ.
ಶಾರಿಕ್‌ನ ತಾಯಿ ಹೇಳಿದ್ದೇನು?
ಶಾರಿಕ್‌ನ ತಾಯಿ ಮೊದಲೇ ತೀರಿಕೊಂಡಿದ್ದಾರೆ. ಆಗ ಅವನ ಅಪ್ಪ ಎರಡನೇ ಮದುವೆ ಮಾಡಿಕೊಂಡಿದ್ದಾರೆ. ಅವರೇ ಶಬಾನಾ ಬಾನು. ಶಬಾನಾ ಬಾನು ಅವರು ತನ್ನ ಮಗನ ಬಗ್ಗೆ ಏನು ಹೇಳಿದ್ದಾರೆ ಎನ್ನುವ ವಿವರ ಇಲ್ಲಿದೆ.
ʻʻಶಾರಿಕ್‌ನ ತಂದೆ ಸಾವನ್ನಪ್ಪಿ ೪೦ ದಿನ ಆಗಿದೆ. ತಂದೆ ತೀರಿಕೊಂಡ ಬಳಿಕ ಅವನೇ ಬಟ್ಟೆ ಅಂಗಡಿ ನಡೆಸುತ್ತಿದ್ದ ಅವನು ೨೦ ದಿನದಿಂದ ನಮ್ಮ ಮನೆಗೆ ಬಂದಿಲ್ಲ. ಬಟ್ಟೆಗಳನ್ನು ತರಲು ಹೋಗಿದ್ದಾನೆ ಅಂತ ಅವರ ಅಜ್ಜಿ ಹೇಳಿದ್ರು. ಅವನು ಅಜ್ಜಿ ಮನೆ, ನಮ್ಮ ಮನೆಯಲ್ಲಿ ಎರಡೂ ಕಡೆ ಇರ್ತಿದ್ದʼʼ ಎಂದು ಶಬಾನಾ ಬಾನು ವಿಸ್ತಾರ ನ್ಯೂಸ್‌ಗೆ ತಿಳಿಸಿದ್ದಾರೆ.
ʻʻಅವರ ತಾಯಿ ಸಾವನ್ನಪ್ಪಿದ ಮೇಲೆ ನಾನೇ ತಾಯಿ ಆಗಿದ್ದೆ. ಮಮ್ಮಿ ಮಮ್ಮಿ ಅಂತ ನನ್ನ ಜತೆ ಚೆನ್ನಾಗಿದ್ದ. ಯಾವಾಗಲೂ ಮುಕ್ತ ಮನಸ್ಸಿನಿಂದ ಇರ್ತಾ ಇದ್ದ. ಯಾರ ಜತೆಗೂ ಜಗಳ ಎಲ್ಲ ಇರಲಿಲ್ಲ. ಯಾಕೆ ಹೀಗೆ ಮಾಡಿದ್ನೋ ಗೊತ್ತಾಗುತ್ತಿಲ್ಲ. ನನಗೂ ಗೊಂದಲವಾಗಿದೆʼʼ ಎಂದು ಶಬಾನಾ ಬಾನು ಹೇಳುತ್ತಾರೆ.
ಚಿಕ್ಕಮ್ಮನ ಅಂಗಡಿಯಲ್ಲಿ ಶೋಧ
ಈ ನಡುವೆ ತೀರ್ಥಹಳ್ಳಿಯ ಟಾಕೀಸ್ ರಸ್ತೆಯಲ್ಲಿರುವ ಶಾರಿಕ್‌ನ ಚಿಕ್ಕಮ್ಮನ ಬಟ್ಟೆ ಅಂಗಡಿಯಲ್ಲೂ ಪೊಲೀಸರು ಶೋಧ ಕಾರ್ಯ ನಡೆಸಿದರು. ಸುಮಾರು ಎರಡು ಗಂಟೆ ಕಾಲ ತಪಾಸಣೆ ಮತ್ತು ವಿಚಾರಣೆ ನಡೆಯಿತು.