ಶಿವಮೊಗ್ಗ: ಶಿವಮೊಗ್ಗ ಪೊಲೀಸರಿಂದ ಬಂಧಿಸಲ್ಪಟಿರುವ ಶಂಕಿತ ಉಗ್ರರು ಬಾಂಬ್ ತಯಾರಿ, ಸ್ಫೋಟದ ರಿಹರ್ಸಲ್ ನಡೆಸಿದ್ದು ಮಾತ್ರವಲ್ಲ ರಾಷ್ಟ್ರ ಧ್ವಜವನ್ನೂ ಸುಟ್ಟು ಹಾಕಿರುವ ಬಗ್ಗೆ ಸಾಕ್ಷ್ಯಗಳು ಪೊಲೀಸರಿಗೆ ಲಭ್ಯವಾಗಿವೆ. ಇದರೊಂದಿಗೆ ಈ ಉಗ್ರ ಜಾಲ ದೇಶದ್ರೋಹದ ಕೃತ್ಯದಲ್ಲಿ ತೊಡಗಿರುವುದಕ್ಕೆ ಮತ್ತಷ್ಟು ಸಾಕ್ಷ್ಯಗಳು ಸಿಕ್ಕಿದಂತಾಗಿದೆ.
ತೀರ್ಥಹಳ್ಳಿ ಸೊಪ್ಪು ಗುಡ್ಡೆಯ ಮಹಮ್ಮದ್ ಶಾರಿಕ್, ಮಂಗಳೂರಿನ ಮಹಮ್ಮದ್ ಮಾಝ್ ಮತ್ತು ಶಿವಮೊಗ್ಗದ ಸಿದ್ದೇಶ್ವರ ನಗರದ ಸೈಯದ್ ಯಾಸಿನ್ ಅವರು ಶಿವಮೊಗ್ಗದ ಸಮೀಪದ ಹಳೆ ಗುರುಪುರದಲ್ಲಿ ತುಂಗಾ ನದಿ ತೀರದಲ್ಲಿ ಬಾಂಬ್ ಸ್ಫೋಟದ ರಿಹರ್ಸಲ್ ನಡೆಸಿದ್ದರ ಬಗ್ಗೆ ಹಲವು ಸಾಕ್ಷ್ಯಗಳು ಸಿಕ್ಕಿವೆ. ಈ ಪ್ರಕರಣದಲ್ಲಿ ಬಂಧಿತರಾಗಿರುವ ಶಾರಿಕ್ ಮತ್ತು ಮಾಝ್‌ನ್ನು ಈ ನದಿ ತೀರಕ್ಕೆ ಕರೆದೊಯ್ದು ಮಹಜರು ನಡೆಸಲಾಗಿದೆ. ಈ ವೇಳೆ ಇಲ್ಲಿ ಕೇವಲ ಸಾಮಾನ್ಯ ಸ್ಫೋಟಕಗಳನ್ನು ಮಾತ್ರ ಪರೀಕ್ಷೆಗೆ ಒಡ್ಡಿದ್ದಲ್ಲ ಬದಲಾಗಿ ಸುಧಾರಿತ ಸ್ಫೋಟಕಗಳನ್ನು ಕೂಡಾ ಸಿಡಿಸಲಾಗಿದೆ ಎಂದು ತಿಳಿದುಬಂದಿದೆ.
ಈ ನಡುವೆ ಟ್ರಯಲ್ ಬ್ಲಾಸ್ಟ್ ನಡೆಸಿದ್ದ ಸ್ಥಳದ ಬಳಿಯೇ ರಾಷ್ಟ್ರಧ್ವಜ ಸುಟ್ಟಿದ್ದಾರೆ ಎಂಬ ಸಾಕ್ಷ್ಯ ದೊರಕಿದೆ. ಸುಟ್ಟಿದ್ದು ಮಾತ್ರವಲ್ಲದೆ, ಅದರ ವಿಡಿಯೊ ಕೂಡಾ ಮಾಡಿದ್ದರು. ರಾಷ್ಟ್ರಧ್ವಜವನ್ನು ಸುಟ್ಟಿರುವ ಬಗ್ಗೆ ಎಫ್ ಐ ಆರ್ ನಲ್ಲಿ ಕೂಡಾ ನಮೂದಿಸಲಾಗಿತ್ತು.
ಟ್ರಯಲ್ ಬ್ಲಾಸ್ಟ್ ನಡೆದ ಜಾಗದ ಸಮೀಪವೇ ರಾಷ್ಟ್ರಧ್ವಜ ಸುಟ್ಟ ಕುರುಹು ಪತ್ತೆಯಾಗಿದೆ. ಸುಡಲಾಗಿದ್ದ ರಾಷ್ಟ್ರಧ್ವಜದ ಚೂರುಗಳು ಪತ್ತೆಯಾಗಿವೆ. ಯಾಸಿನ್ ಹಾಗೂ ಶಾರಿಕ್ ರಾಷ್ಟ್ರಧ್ವಜ ಸುಟ್ಟಿದ್ದಾರೆ ಎನ್ನಲಾಗಿದೆ.
ಧ್ವಜ ಸುಟ್ಟಿದ್ದ ಘಟನೆಯ ವಿಡಿಯೊವನ್ನು ಸಹ ಶೂಟ್ ಮಾಡಲಾಗಿತ್ತು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಇದೀಗ ಕೋರ್ಟ್ ಅನುಮತಿ ಪಡೆದುಕೊಂಡು ಆರೋಪಿಗಳ ಮೊಬೈಲ್ ರಿಟ್ರೈವ್ ಮಾಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.