ಶಿವಮೊಗ್ಗ: ನವೆಂಬರ್ 19ರಂದು ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟದ ರೂವಾರಿ ಮತ್ತು ಗಾಯಾಳುವಾಗಿ ಈಗ ಚೇತರಿಸಿಕೊಂಡಿರುವ ತೀರ್ಥಹಳ್ಳಿಯ ಸೊಪ್ಪಿನಗುಡ್ಡೆಯ ಮೊಹಮ್ಮದ್ ಶಾರಿಕ್‌ನನ್ನು ಎನ್‌ಐಎ ಪೊಲೀಸರು ಶಿವಮೊಗ್ಗಕ್ಕೆ ಕರೆತಂದಿದ್ದಾರೆ. ಕರಾವಳಿ ಮತ್ತು ಮಲೆನಾಡಿನಲ್ಲಿ ನಡೆಯುತ್ತಿರುವ ಉಗ್ರ ಚಟುವಟಿಕೆಗಳ ಹಿಂದೆ ಶಾರಿಕ್‌ನ ಕೈವಾಡ ಸ್ಪಷ್ಟವಾಗಿದ್ದು, ಆತನಿಂದ ಹೆಚ್ಚಿನ ಮಾಹಿತಿ ಪಡೆಯುವುದಕ್ಕಾಗಿ ಇದೀಗ ಆತನನ್ನು ಶಿವಮೊಗ್ಗಕ್ಕೆ (Shivamogga terror) ಕರೆ ತರಲಾಗಿದೆ. ಆತನ ಜತೆಗೆ ಈ ಹಿಂದೆ ಪ್ರೇಮ್ ಚಂದ್ ಎಂಬವರಿಗೆ ಚೂರಿಯಿಂದ ಇರಿದಿದ್ದ ಜಬೀಯುಲ್ಲಾ ಅಲಿಯಾಸ್ ಜಬಿ ಕೂಡಾ ಇದ್ದಾನೆ.
ಕಳೆದ ಆಗಸ್ಟ್ 15ರಂದು ಶಿವಮೊಗ್ಗದಲ್ಲಿ ನಡೆದ ಟಿಪ್ಪು – ಸಾವರ್ಕರ್ ಫ್ಲೆಕ್ಸ್ ಫೈಟ್ ಸಂದರ್ಭ ಪ್ರೇಮ್ ಚಂದ್ ಎಂಬ ಯುವಕನಿಗೆ ಚೂರಿಯಿಂದ ಇರಿಯಲಾಗಿತ್ತು. ಆಗ ಬಂಧಿತನಾಗಿದ್ದ ಆರೋಪಿ ಜಬಿಯುಲ್ಲಾನ ವಿಚಾರಣೆಯ ವೇಳೆ ಶಿವಮೊಗ್ಗದಲ್ಲಿ ನಡೆಯುತ್ತಿರುವ ಉಗ್ರ ಸಂಚುಗಳು ಬಯಲಾಗಿದ್ದವು. ಜಬಿಯುಲ್ಲಾನ ಮೊಬೈಲ್‌ನಲ್ಲಿದ್ದ ಶಾರಿಕ್‌ನ ನಂಬರ್, ಅವರಿಬ್ಬರ ಚಾಟ್‌ಗಳು ಭಯಾನಕ ಸತ್ಯಗಳನ್ನು ಬಿಚ್ಚಿಟ್ಟಿದ್ದವು.
ಇದರ ಬೆನ್ನು ಹತ್ತಿದ ಪೊಲೀಸರಿಗೆ ಆ ಸಂದರ್ಭದಲ್ಲಿ ಶಾರಿಕ್‌ನನ್ನು ಹಿಡಿಯಲು ಸಾಧ್ಯವಾಗಿರಲಿಲ್ಲ. ಅದರೆ, ಮಂಗಳೂರಿನ ಮಾಜ್ ಮತ್ತು ಶಿವಮೊಗ್ಗದ ಯಾಸಿನ್ ಎಂಬವರು ಸಿಕ್ಕಿದ್ದರು. ಅವರ ವಿಚಾರಣೆಯ ಸಂದರ್ಭದಲ್ಲಿ ಶಿವಮೊಗ್ಗದ ತುಂಗಾ ತೀರ, ಮಂಗಳೂರಿನ ನೇತ್ರಾವತಿ ತೀರದಲ್ಲಿ ನಡೆಸಿರುವ ಟ್ರಯಲ್ ಬಾಂಬ್ ಸ್ಫೋಟ ಸೇರಿದಂತೆ ಹಲವು ಚಟುವಟಿಕೆಗಳ ಮಾಹಿತಿ ಸಿಕ್ಕಿತ್ತು. ಆದರೆ, ಅಷ್ಟು ಹೊತ್ತಿಗೆ ಇವರೆಲ್ಲರ ಮಾಸ್ಟರ್ ಮೈಂಡ್ ಶಾರಿಕ್ ಕಣ್ಮರೆಯಾಗಿದ್ದ. ಜತೆಗೆ ಶಾರಿಕ್‌ನಿಗೆ ಬೆಂಬಲವಾಗಿ ನಿಂತಿದ್ದ ಸೊಪ್ಪಿನಗುಡ್ಡೆಯವನೇ ಆದ ಮತೀನ್ ಖಾನ್ ಎಂಬ ಇಂಟರ್‌ನ್ಯಾಷನಲ್ ಕ್ರಿಮಿನಲ್‌ಗಾಗಿ ಕೂಡಾ ಹುಡುಕಾಟ ಮುಂದುವರಿದಿತ್ತು.
ಈ ನಡುವೆ ಸಂಭವಿಸಿದ್ದೇ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ. ಅಂದು ಪೊಲೀಸರು ತನಗಾಗಿ ಹುಡುಕಾಡುತ್ತಿದ್ದಾರೆ ಎಂಬ ಮಾಹಿತಿ ಪಡೆದ ಶಾರಿಕ್ ತಾನು ನಡೆಸುತ್ತಿದ್ದ ಬಟ್ಟೆ ಅಂಗಡಿಯನ್ನು ಬಿಟ್ಟು ಪರಾರಿಯಾಗಿದ್ದ. ಬಳಿಕ ಕಾಣಿಸಿಕೊಂಡಿದ್ದು ನವೆಂಬರ್ 19ರಂದು ನಡೆದ ಕುಕ್ಕರ್ ಬ್ಲಾಸ್ಟ್‌ನಲ್ಲಿ. ಮೈಸೂರಿನಲ್ಲಿ ಮೆಕ್ಯಾನಿಕ್ ಎಂಬಂತೆ ಕೆಲಸಕ್ಕೆ ಸೇರಿಕೊಂಡು ಕುಕ್ಕರ್ ಬಾಂಬ್ ಮೆಕ್ಯಾನಿಕ್ ಕೆಲಸ ಮಾಡಿದ ಆತ ಮಂಗಳೂರಿನ ಆಯಕಟ್ಟಿನ ಜಾಗದಲ್ಲಿ ಸ್ಫೋಟಿಸಲೆಂದು ತಂದಿದ್ದ ಕುಕ್ಕರ್ ನಾಗುರಿ ಎಂಬಲ್ಲಿ ರಿಕ್ಷಾದಲ್ಲಿ ಸ್ಫೋಟಗೊಂಡಿತ್ತು.
ಕಳೆದ ಡಿಸೆಂಬರ್ 17ರವರೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆತನ ಕಣ್ಣಿನ ದೃಷ್ಟಿ ಸರಿ ಇರಲಿಲ್ಲ. ಶ್ವಾಸಕೋಶದಲ್ಲಿ ಹೊಗೆ ತುಂಬಿತ್ತು. ಆತನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದು, ಮಾರ್ಚ್ 6ರಂದು ಡಿಸ್ಚಾರ್ಜ್ ಮಾಡಲಾಗಿತ್ತು. ಆತನನ್ನು ಹತ್ತು ದಿನಗಳ ಕಾಲ ಐಎನ್‌ಎ ಕಸ್ಟಡಿಗೆ ನೀಡಲಾಗಿದೆ.
ಇದೀಗ ಆತನ ಮುಂದಿನ ವಿಚಾರಣೆ ಆರಂಭಗೊಂಡಿದ್ದು, ಅದರ ಭಾಗವಾಗಿ ಶಿವಮೊಗ್ಗಕ್ಕೆ ಕರೆತರಲಾಗಿದೆ. ಬುಧವಾರ ಅವರಿಬ್ಬರನ್ನು ಶಿವಮೊಗ್ಗದ ರ್ಕಾರಿ ಬಸ್ ನಿಲ್ದಾಣ ಮತ್ತು ಅದರ ಬಳಿ ಇರುವ ಬ್ರೈಟ್ ಹೊಟೇಲ್ ಬಳಿ ಕರೆತಂದು ಮಹಜರು ನಡೆಸಲಾಗಿದೆ. ಮುಂದೆ ಅವರಿಬ್ಬರನ್ನು ನಗರದ ಮೀನಾಕ್ಷಿ ಭವನಕ್ಕೆ ಕರೆತಂದ ಪೊಲೀಸರು ತಿಂಡಿ ತಿನ್ನಿಸಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ಕರೆದುಕೊಂಡು ಹೋಗಿದ್ದಾರೆ.
ಶಿಮಮೊಗ್ಗದಲ್ಲಿ ಪೊಲೀಸರ ವಿಚಾರಣೆಯಿಂದ ಶಾರಿಕ್‌ನ ಇನ್ನಷ್ಟು ಉಗ್ರ ಕೃತ್ಯಗಳು ಬಯಲಾಗುವ ನಿರೀಕ್ಷೆ ಇದೆ.
ಇದನ್ನೂ ಓದಿ : ಮಂಗಳೂರು ಸ್ಫೋಟ : ಕುಕ್ಕರ್ ಬ್ಲಾಸ್ಟ್ ಆರೋಪಿ ಶಾರಿಕ್ ಪೂರ್ಣ ಚೇತರಿಕೆ; ಕೋರ್ಟ್‌ಗೆ ಹಾಜರುಪಡಿಸಿದ ಬಳಿಕ ಮತ್ತೆ 10 ದಿನ NIA ಕಸ್ಟಡಿಗೆ