Site icon Vistara News

Shivamogga Violence : ಶಿವಮೊಗ್ಗ ಗಲಭೆಕೋರರನ್ನು ರಕ್ಷಣೆ ಮಾಡಲ್ಲ, 43 ಮಂದಿ ಅರೆಸ್ಟ್‌ ಎಂದ ಸಿದ್ದರಾಮಯ್ಯ

Shivamogga violence siddaramaiah

ಬೆಂಗಳೂರು: ಧಾರ್ಮಿಕ ಕಾರ್ಯಕ್ರಮಗಳಿಗೆ (Religious programmes) ಧಕ್ಕೆ ಉಂಟು ಮಾಡುವುದು, ಕಾನೂನುಬಾಹಿರ ಚಟುವಟಿಕೆ (unlawful Activities) ನಡೆಸುವುದುನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಸ್ಪಷ್ಟವಾಗಿ ಹೇಳಿದರು.

ಯಾವುದೇ ಧಾರ್ಮಿಕ ಕಾರ್ಯಕ್ರಮಕ್ಕೆ ಧಕ್ಕೆ ತರುವುದು, ಕಲ್ಲು ತೂರುವುದು ಕಾನೂನು ಬಾಹಿರ. ಇಂಥ ಚಟುವಟಿಕೆಗಳನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ. ಅದನ್ನು ಹತ್ತಿಕ್ಕುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಹೇಳಿದರು.

ʻʻಶಿವಮೊಗ್ಗದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆಯಲ್ಲಿ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಪೊಲೀಸರ ಮೇಲೂ ಕಲ್ಲು ಎಸೆದಿದ್ದು, ಅನಿವಾರ್ಯವಾಗಿ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆʼʼ ಎಂದು ಸಿದ್ದರಾಮಯ್ಯ ಹೇಳಿದರು.

ʻʻಗಲಾಟೆಗೆ ಕಾರಣಕರ್ತರಾಗಿರುವ 43 ದುಷ್ಕರ್ಮಿಗಳನ್ನು ಬಂಧಿಸಲಾಗಿದೆ. ಅವರ ಮೇಲೆ ಮೊಕದ್ದಮೆಗಳನ್ನು ಹೂಡಲಾಗುತ್ತಿದೆ. ಶಿವಮೊಗ್ಗ ಸಂಪೂರ್ಣ ನಿಯಂತ್ರಣದಲ್ಲಿದೆ. ಪೊಲೀಸರು ಕ್ರಮ ಕೈಗೊಂಡು, ಶಿವಮೊಗ್ಗದಲ್ಲಿ ಶಾಂತಿ ನೆಲೆಸಿದೆ. ಶಾಂತಿ ಕಾಪಾಡಲು ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆʼʼ ಎಂದು ಸಿದ್ದರಾಮಯ್ಯ ತಿಳಿಸಿದರು.

ಶಿವಮೊಗ್ಗ ಈಗ ಸಂಪೂರ್ಣ ನಿಯಂತ್ರಣದಲ್ಲಿ ಇದೆ. ಶಿವಮೊಗ್ಗ ಶಾಂತಿಯುತವಾಗಿದೆ. ಪೊಲೀಸ್ ಇಲಾಖೆ ಎಲ್ಲಾ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಶಾಂತಿ ಕಾಪಾಡಿ ಎಂದು ನಾನು ಮನವಿ ಮಾಡುತ್ತೇನೆ. ಶಾಂತಿ ಕಾಪಾಡಲು ಸರ್ಕಾರ ಅಗತ್ಯ ಕ್ರಮ ತೆಗೆದುಕೊಂಡಿದ್ದೇವೆ ಎಂದು ಹೇಳಿದರು ಸಿದ್ದರಾಮಯ್ಯ.

ದೊಡ್ಡ ಗಲಾಟೆಯಲ್ಲ ಎಂದ ಗೃಹ ಸಚಿವ ಪರಮೇಶ್ವರ್‌

ಶಿವಮೊಗ್ಗದಲ್ಲಿ ಇದೇನು ಹೊಸದಾಗಿ ನಡೆಯುತ್ತಿದ್ಯಾ?ʼ (Is it new to Shivamogga?) ಎಂದು ಹೇಳುವ ಮೂಲಕ ಶಿವಮೊಗ್ಗದ ಗಲಭೆ ವಿಚಾರವನ್ನು ಲಘುವಾಗಿ ತೆಗೆದುಕೊಂಡಂತೆ ವರ್ತಿಸಿದ್ದಾರೆ ಗೃಹ ಸಚಿವ ಡಾ.ಜಿ. ಪರಮೇಶ್ವರ್‌ (G Parameshwar). ಅದರ ಜತೆಗೆ ಶಿವಮೊಗ್ಗದಲ್ಲಿ ಈ ರೀತಿಯ ಘಟನೆ (Shivamogga riots) ನಡೆಯುವ ಬಗ್ಗೆ ಮುನ್ಸೂಚನೆ ಇತ್ತು ಎಂದು ಅವರು ಹೇಳಿದ್ದಾರೆ.

ʻʻಪೋಲೀಸರು ದೊಡ್ಡ ಪ್ರಮಾಣದ ಗಲಾಟೆ ತಪ್ಪಿಸಿದ್ದಾರೆ. ಎರಡೂ ಗುಂಪಿನ ನಾಲ್ಕು ಜನರನ್ನು ಬಂಧಿಸಿದ್ದಾರೆ. ಬ್ಯಾನರ್ ಕಟ್ತಾರೆ, ಪೋಸ್ಟರ್ ಹಾಕ್ತಾರೆ. ಇದನ್ನು ಕೆಲವರು ಅಡ್ವಾಂಟೇಜ್‌ ಆಗಿ ತಗೋತಾರೆʼʼ ಎಂದು ಡಾ. ಜಿ. ಪರಮೇಶ್ವರ್‌ ಬೆಂಗಳೂರಿನಲ್ಲಿ ಹೇಳಿದರು. ʻʻಶಿವಮೊಗ್ಗದ ಘಟನೆಗೆ ಕಾರಣ ಏನು ಎಂದು ಬಹಿರಂಗಗೊಳಿಸಲು ಸಾಧ್ಯವಿಲ್ಲʼʼ ಎಂದು ಹೇಳಿದ ಜಿ. ಪರಮೇಶ್ವರ್‌ ಅವರು, ʻʻಶಿವಮೊಗ್ಗದಲ್ಲಿ ಕಲ್ಲು ತೂರಾಟ ಮಾಡಿದರು ಎಂಬ ಮಾಹಿತಿ ಇದೆ. ಕತ್ತಿ ಬಳಕೆ ಬಗ್ಗೆ ನನಗೆ ಮಾಹಿತಿ ಬಂದಿಲ್ಲʼʼ ಎಂದು ಹೇಳಿದರು.

ಶಿವಮೊಗ್ಗದಲ್ಲಿ ಆಗಿದ್ದೇನು?

ಭಾನುವಾರ ಬೆಳಗ್ಗೆ ಈದ್​ ಮಿಲಾದ್ ಮೆರವಣಿಗೆ ವೇಳೆ ರಾಗಿಗುಡ್ಡದಲ್ಲಿ ತಲ್ವಾರ್​ ಮಾದರಿ ಕಟೌಟ್ ವಿಚಾರಕ್ಕೆ ಗೊಂದಲ ಸೃಷ್ಟಿಯಾಗಿತ್ತು. ಕಟೌಟ್ ವಿಚಾರವಾಗಿ ಹಿಂದೂ-ಮುಸ್ಲಿಂ ಗದ್ದಲ ಎದ್ದಿತ್ತು. ರಾಗಿಗುಡ್ಡ ಮುಖ್ಯರಸ್ತೆಯಲ್ಲಿ ಕಟೌಟ್ ಹಾಕಲಾಗಿದ್ದು ಜನರು ಪ್ರತಿಭಟನೆ ಮಾಡಿದ್ದರು. ತಕ್ಷಣವೇ  ಎಸ್​ಪಿ  ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದರು. ನಿಷೇಧಾಜ್ಞೆ ಜಾರಿ ಮಾಡಿ ಪರಿಸ್ಥಿತಿ ನಿಯಂತ್ರಿಸಲಾಗಿತ್ತು. ಶಿವಮೊಗ್ಗದ ರಾಗಿಗುಡ್-ಶಾಂತಿನಗರದಲ್ಲಿ ಟಿಪ್ಪು ಸುಲ್ತಾನ್ ಕಟೌಟ್ ಅಳವಡಿಸಲಾಗಿದೆ. ಟಿಪ್ಪುವಿನ ಕಟೌಟ್​ನ ಕೆಳಭಾಗದಲ್ಲಿ ಆಕ್ಷೇಪಾರ್ಹ ಸಂಗತಿ ಇದ್ದ ಹಿನ್ನಲೆಯಲ್ಲಿ ಪೊಲೀಸರು ಬಿಳಿ ಬಣ್ಣವನ್ನು ಬಳಿದಿದ್ದರು. ಇದರಿಂದ ರೊಚ್ಚಿಗೆದ್ದ ರಾಗಿಗುಡ್ಡದ ಶಾಂತಿನಗರ ನಿವಾಸಿಗಳು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಕಿಡಿಗೇಡಿಗಳು ಮನೆ, ವಾಹನಗಳ ಮೇಲೆ  ಕಲ್ಲು ತೂರಾಟ ನಡೆಸಿದ್ದಾರೆ.

Exit mobile version