Site icon Vistara News

Shivamogga Violence : ನಾವೇನು ಟೆರರಿಸ್ಟಾ? ಬಿಜೆಪಿ ಸತ್ಯಶೋಧನ ತಂಡದ ಮುಂದೆ ಗಾಯಾಳು ಅಳಲು!

BJP satyashodhana samiti visits shivamogga hospital

ಶಿವಮೊಗ್ಗ: ನಾವೇನು ಟೆರರಿಸ್ಟಾ? ನೀವೇ ಹೇಳಿ ಸರ್? ಹೆಣ್ಣು ಮಕ್ಕಳನ್ನು ಕಾಪಾಡಿದ್ದೇ ತಪ್ಪಾ? ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇವೆ ಅಂತ ಕೇಸ್ ಹಾಕಿದ್ದಾರೆ. ಕಲ್ಲು ಹೊಡೆದವರನ್ನು ಬಿಟ್ಟು ನಮ್ಮ ಮೇಲೆ ಕೇಸ್ ಮಾಡಿದ್ದಾರೆ ಎಂದು ಬಿಜೆಪಿ ಸತ್ಯಶೋಧನಾ ತಂಡದ (BJP fact finding team) ಮುಂದೆ ರಾಗಿಗುಡ್ಡದಲ್ಲಿ ನಡೆದ ಗಲಭೆಯಲ್ಲಿ (Shivamogga Violence) ಗಾಯಾಳುವಾಗಿ ಮೆಗ್ಗಾನ್‌ ಆಸ್ಪತ್ರೆಯಲ್ಲಿ (McGann Hospital) ಚಿಕಿತ್ಸೆ ಪಡೆಯುತ್ತಿರುವ ಪ್ರದೀಪ್‌ ಅಳಲು ತೋಡಿಕೊಂಡಿದ್ದಾರೆ.

ಇಲ್ಲಿನ ರಾಗಿಗುಡ್ಡದಲ್ಲಿ ಭಾನುವಾರ (ಅಕ್ಟೋಬರ್‌ 5) ನಡೆದಿದ್ದ ಈದ್‌ ಮಿಲಾದ್‌ ಮೆರವಣಿಗೆ (Eid Milad Procession) ಸಂದರ್ಭದಲ್ಲಿ ಉಂಟಾದ ಗಲಭೆ (Shivamogga Violence), ಕಲ್ಲು ತೂರಾಟಕ್ಕೆ ಸಂಬಂಧಿಸಿ ನಿಜ ಸಂಗತಿಯನ್ನು ತಿಳಿದುಕೊಳ್ಳಲು ಬಿಜೆಪಿಯ ಹಿರಿಯ ನಾಯಕರ ಸತ್ಯಶೋಧನಾ ಸಮಿತಿ ತಂಡದ ಸದಸ್ಯರು ಶಿವಮೊಗ್ಗಕ್ಕೆ ಭೇಟಿ ನೀಡಿದ್ದು, ಘಟನಾ ಸ್ಥಳ ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಪರಿಶೀಲನೆ ನಡೆಸಿದ್ದಾರೆ.

ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (BJP state president Nalin Kumar Kateel) ನೇತೃತ್ವದ ತಂಡದ ಎದುರು ಗಾಯಾಳುಗಳು ಅಳಲು ತೋಡಿಕೊಂಡಿದ್ದಾರೆ. ಈ ವೇಳೆ ಚಿಕಿತ್ಸೆ ಪಡೆಯುತ್ತಿರುವ ಪ್ರದೀಪ್‌, ಪೊಲೀಸರ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದಾರೆ. ಈ ವೇಳೆ ಮಾತನಾಡಿದ ಪ್ರದೀಪ್‌, ಹೆಣ್ಣು ಮಕ್ಕಳನ್ನು ಕಾಪಾಡಲು ಹೋಗಿದ್ದಕ್ಕೆ ಕೇಸ್ ಹಾಕಿದ್ದಾರೆ. ಬಜರಂಗದಳದವರು ಇದ್ದಿದ್ದಕ್ಕೆ ಸರಿ ಆಯ್ತು. ಇಲ್ಲದಿದ್ದರೆ ನನ್ನ ಕಥೆ ಮುಗಿದು ಹೋಗುತ್ತಿತ್ತು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ನಮ್ಮ ರಕ್ಷಣೆಗೆ ಸರ್ಕಾರ ಇಲ್ಲವೇ?

ಇದೇ ವೇಳೆ ಕಲ್ಲು ತೂರಾಟಕ್ಕೆ (Stone pelting) ಒಳಗಾದ ರಾಗಿಗುಡ್ಡದ ಸುಶೀಲ ಪ್ರಸನ್ನ ಕುಮಾರ್ ಎಂಬುವವರ ಮನೆಗೆ ಬಿಜೆಪಿ ಸತ್ಯಶೋಧನಾ ತಂಡವು ಭೇಟಿ ನೀಡಿ, ಮಾತುಕತೆ ನಡೆಸಿದೆ. ಈ ವೇಳೆ ಮಾತನಾಡಿದ ಪ್ರಸನ್ನ ಕುಮಾರ್‌, ನಮಗೆ ಮಾತನಾಡಲೂ ಹೆದರಿಕೆ ಆಗುತ್ತದೆ. ನಾವು ಯಾರಿಗೂ ನೋವು ಮಾಡಿದವರಲ್ಲ. ಇಲ್ಲಿ ಮನೆ ಕಟ್ಟಿದ್ದೇ ತಪ್ಪಾಯ್ತಾ? ಅಮಾಯಕರ ಮೇಲೆ ಏಕೆ ಹಲ್ಲೆ ಮಾಡುತ್ತಾರೆ. ರಕ್ಷಣೆಗೆ ಸರ್ಕಾರ ಇಲ್ಲವೇ? ಸರ್ಕಾರ ಸತ್ತು ಹೋಗಿದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ನಳಿನ್ ಕುಮಾರ್‌ ಕಟೀಲ್‌, ಅದಕ್ಕೇ ನಾವು ಬಂದಿದ್ದೇವೆ. ಹೆದರಬೇಡಿ, ನಾವಿದ್ದೇವೆ ಎಂದು ಧೈರ್ಯ ತುಂಬಿದರು.

ಮಾಜಿ ಸಚಿವರಾದ ಕೆ.ಎಸ್. ಈಶ್ವರಪ್ಪ, ಡಾ.ಸಿ.ಎನ್. ಅಶ್ವತ್ಥನಾರಾಯಣ್, ಆರಗ ಜ್ಞಾನೇಂದ್ರ, ಸಂಸದ ಬಿ.ವೈ ರಾಘವೇಂದ್ರ, ವಿಧಾನ ಪರಿಷತ್‌ ಸದಸ್ಯ ಎನ್. ರವಿಕುಮಾರ್, ಶಾಸಕ ಚನ್ನಬಸಪ್ಪ, ಮುಖಂಡರಾದ ಎಸ್. ರುದ್ರೇಗೌಡ, ಬಿ.ಎಸ್. ಅರುಣ್, ಭಾರತಿ ಶೆಟ್ಟಿ ಅವರನ್ನು ಒಳಗೊಂಡ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಐದಾರು ಘಟನೆಗಳ ನ್ಯಾಯಾಂಗ ತನಿಖೆ ಆಗಲಿ: ನಳಿನ್ ಕುಮಾರ್ ಕಟೀಲ್

ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ನೆಪದಲ್ಲಿ ನಡೆದ ಹಿಂದುಗಳ‌ ಮನೆ ಮೇಲೆ ದಾಳಿ ಮಾಡಲಾಗಿದೆ. ನಾವೀಗ ಇದನ್ನು ಅಧ್ಯಯನ ಮಾಡಿದ್ದೇವೆ. ಇದೊಂದು ಪೂರ್ವ ನಿಯೋಜಿತ ಕೃತ್ಯ. ಆ ಪ್ರದೇಶದಲ್ಲಿ ಎರಡು ಗಂಟೆಗಳ ಕಾಲ ಗಲಭೆ ನಡೆದಿವೆ. ಪ್ರತ್ಯಕ್ಷದರ್ಶಿಗಳ ಹೇಳಿಕೆ ಪಡೆದಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರಾಜ್ಯದ ಐದಾರು ಕಡೆ ಇಂಥದ್ದೇ ಘಟನೆ ನಡೆದಿದೆ. ಎಲ್ಲ ಘಟನೆಗಳು ಸೇರಿ ನ್ಯಾಯಾಂಗ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

ಶಿವಮೊಗ್ಗದಲ್ಲಿ ಗಣೇಶೋತ್ಸವ ಶಾಂತಿಯುತವಾಗಿ ನಡೆದಿದೆ. ರಾಗಿಗುಡ್ಡದಲ್ಲೂ ಶಾಂತಿಯುತವಾಗಿ ನಡೆದಿದೆ. ನಂತರ ಈದ್ ಮಿಲಾದ್ ಮೆರವಣಿಗೆ ನೆಪದಲ್ಲಿ ಕಟೌಟ್ ಹಾಕಲಾಗಿದೆ. ಔರಂಗಜೇಬ್‌, ಟಿಪ್ಪು ಸುಲ್ತಾನ್ ಕಟೌಟ್‌ ಹಾಕಲಾಗಿದ್ದು, ಹಿಂದು ಸೈನಿಕರ ಹತ್ಯೆ ಮಾಡಿರುವ ಕಟೌಟ್ ನಿರ್ಮಾಣ ಮಾಡಲಾಗಿದೆ. ಇದರಲ್ಲಿ ಪೊಲೀಸ್ ವೈಫಲ್ಯ, ಸರ್ಕಾರದ ವೈಫಲ್ಯ ಆಗಿದೆ. ಆ ಮೆರವಣಿಗೆಯಲ್ಲಿ ಪೊಲೀಸ್ ಸಂಖ್ಯೆ ಕಡಿಮೆ ಇತ್ತು. ಕಲ್ಲು ತೂರಾಟ ನಡೆದರೂ ಪೊಲೀಸರು ಸುಮ್ಮನಿದ್ದರು. ಏಕೆಂದರೆ ಅವರ ಸಂಖ್ಯೆ ಕಡಿಮೆ ಇತ್ತು. ಎಸ್‌ಪಿ ಮೇಲೆಯೇ ಹಲ್ಲೆ ಮಾಡಿದ್ದಾರೆ. ಟಾರ್ಗೆಟ್ ಮಾಡಿ ಹಿಂದುಗಳ ಮೇಲೆ ಹಲ್ಲೆ ನಡೆಸಲಾಗಿದೆ. ಆ ಪ್ರದೇಶದ ಮಹಿಳೆಯರು, ಗಣೇಶೋತ್ಸವ ಮಾಡಿದ ಯುವಕರು ಟಾರ್ಗೆಟ್ ಆಗಿದ್ದಾರೆ. ಮಹಿಳೆಯರನ್ನು ರಕ್ಷಿಸಲು ಬಂದ ಯುವಕರ ಮೇಲೆ ಹಲ್ಲೆಯಾಗಿದೆ. ಮಸೀದಿಯಿಂದ ಕರೆ ಮೇಲೆ ಕೃತ್ಯ ನಡೆದಿದೆ. ಮುಸಲ್ಮಾನರ ಒಂದೇ ಒಂದು ಮನೆ ಮೇಲೆ ಕಲ್ಲು ಬಿದ್ದಿಲ್ಲ. ಮುಸಲ್ಮಾನರ, ಹಿಂದುಗಳ ಮನೆಯನ್ನು ಸ್ಪಷ್ಟ ಮಾಡಿಕೊಂಡು ಹಲ್ಲೆ ಮಾಡಲಾಗಿದೆ ಎಂದು ನಳಿನ್‌ ಕುಮಾರ್‌ ಕಟೀಲ್‌ ಆಕ್ರೋಶ ವ್ಯಕ್ತಪಡಿಸಿದರು.

ಆಸ್ಪತ್ರೆಯಲ್ಲಿ ಇನ್ನೂ ಐವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳ‌ ಮೇಲೆಯೇ ಕೇಸು ದಾಖಲಿಸಲಾಗಿದೆ. ಯಾವುದೇ ಕೃತ್ಯ ಮಾಡದ ಕ್ರಿಶ್ಚಿಯನ್ ಯುವಕನ ಮೇಲೂ ಕೇಸ್ ಆಗಿದೆ. ಗಲಭೆ ಮಾಡಿದ ಕ್ರಿಮಿನಲ್‌ಗಳನ್ನು ಬಿಟ್ಟು ಸಂತ್ರಸ್ತರನ್ನು ಜೈಲಿಗೆ ಹಾಕಿದ್ದಾರೆ. ಉಸ್ತುವಾರಿ ಸಚಿವರು ಬಂದು ಹೋದ ಮೇಲೆ ಈ ಬದಲಾವಣೆ ಆಗಿದೆ ಎಂದು ಸಚಿವ ಮಧು ಬಂಗಾರಪ್ಪ ಅವರ ಮೇಲೆ ನಳಿನ್‌ ಕುಮಾರ್‌ ಕಟೀಲ್‌ ಆಕ್ರೋಶ ವ್ಯಕ್ತಪಡಿಸಿದರು.

ಹತ್ತಾರು ಹಿಂದುಗಳ ಮನೆ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಸ್ವತಃ ಎಸ್‌ಪಿ ಮೇಲೆ ಕಲ್ಲು ತೂರಿದ್ದು, ಇನ್ನು ಜನ ಸಾಮಾನ್ಯರ ಕಥೆ ಏನು? ಮನೆಯಲ್ಲಿರುವ ಮಹಿಳೆಯರು ಮೇಲೆ ಹಲ್ಲೆ ಮಾಡಿದ್ದಾರೆ. ಟಾರ್ಗೆಟ್ ಗಣೇಶೋತ್ಸವ, ಹಾಗೂ ಹಿಂದುಗಳು ಎಂಬ ರೀತಿಯಲ್ಲಿ ಮಾಡಲಾಗಿದೆ. ಈ ಘಟನೆ ಮೊದಲೇ ನಿಶ್ಚಯ ಆಗಿದೆ. ಮುಸ್ಲಿಂ ಮಹಿಳೆಯರು ಕೂಡ ಈ ಘಟನೆಯಲ್ಲಿ ಭಾಗಿ ಆಗಿದ್ದಾರೆ. ಅಲ್ಲಿ ಮುಸ್ಲಿಂ ಮನೆಗಳು ಮೇಲೆ ದಾಳಿ ಮಾಡಿಲ್ಲ. ದಾಳಿ ಮಾಡಲು ಮೊದಲೇ ಮನೆಗಳನ್ನು ಗುರುತು ಮಾಡಿದ್ದಾರೆ ಎಂದು ನಳಿನ್‌ ಕುಮಾರ್‌ ಕಟೀಲ್‌ ಆಕ್ರೋಶವನ್ನು ಹೊರಹಾಕಿದ್ದಾರೆ.

ಎರಡು ಗಂಟೆ ಕಲ್ಲು ತೂರಾಟ

ಎರಡು ಗಂಟೆಗಳ ಕಾಲ ಹಲ್ಲೆ ಕಲ್ಲೂ ತೂರಾಟ ಆಗಿದೆ. ನಾವು ಘಟನೆಯ ಪ್ರತ್ಯಕ್ಷದರ್ಶಿಗಳ ಬಳಿ ಮಾಹಿತಿ ಪಡೆದಿದ್ದೇವೆ. ಸಿದ್ದರಾಮಯ್ಯ ಸಿಎಂ ಆದ ಮೇಲೆ ರಾಜ್ಯದಲ್ಲಿ 5 ಕಡೆ ಇಂತಹ ಕೃತ್ಯ ಆಗಿದೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ವ್ಯವಸ್ಥಿತವಾಗಿ ಘಟನೆ ನಡೆದಿದೆ. ಈದ್ ಮಿಲಾದ್ ಕಟೌಟ್‌ನಲ್ಲಿ ಅಖಂಡ ಹಸಿರು ಭಾರತ ಮಾಡಿದ್ದಾರೆ. ಈ ಘಟನೆಗೆ ಕಾಂಗ್ರೆಸ್ ಹಾಗೂ ಪೊಲೀಸರ ವೈಫಲ್ಯ ಕಾರಣವಾಗಿದೆ ಎಂದು ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

ಪುರುಷರಿಗಿಂತ ಮಹಿಳೆಯರ ಮೇಲೆ ಹಲ್ಲೆ ಆಗಿದೆ. ಇದು ಮಹಿಳಾ ವಿರೋಧಿ ಸರ್ಕಾರ. ಈ ಘಟನೆಯನ್ನು ಮುಚ್ಚಿ ಹಾಕಲು ವ್ಯವಸ್ಥಿತ ಪಿತೂರಿ ನಡೆಯುತ್ತಲಿದೆ. ನ್ಯಾಯಾಂಗ ತನಿಖೆಗೆ ಸತ್ಯ ಶೋಧನಾ ತಂಡ ಆಗ್ರಹ ಮಾಡಿದೆ. ರಾಜ್ಯದಲ್ಲಿ ಹಲವಾರು ಪ್ರಕರಣ ನಡೆದಿವೆ. ಡಿಜೆ ಹಳ್ಳಿ, ಕೆಜಿಹಳ್ಳಿ, ಹುಬ್ಬಳ್ಳಿ ಸೇರಿದಂತೆ ಹಲವು ಕಡೆ ಗಲಭೆಗಳು ನಡೆದಿವೆ. ಬಿಜೆಪಿ ಸರ್ಕಾರ ಕಠಿಣ ಕ್ರಮ ಕೈಗೊಂಡು ತಹಬಂದಿಗೆ ತಂದಿದೆ. ಕುಕ್ಕರ್ ಬ್ಲಾಸ್ಟ್ ಆರೋಪಿ ನಮ್ಮ ಬ್ರದರ್ಸ್ ಅಂತ ಡಿ.ಕೆ. ಶಿವಕುಮಾರ್ ಹೇಳಿದರು. ಆತ ಉಗ್ರ ಅನ್ನೋದು ಗೊತ್ತಾಗಿದೆ. ಭಯೋತ್ಪಾದನೆ ಮಾಡುವ ಮಾನಸಿಕತೆಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರೋದು ವಿಶ್ವಾಸ ಮೂಡಿಸಿದೆ ಎಂದು ನಳಿನ್‌ ಕುಮಾರ್‌ ಕಟೀಲ್‌ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: Shivamogga Violence : ಶಿವಮೊಗ್ಗ ಗಲಭೆಯಲ್ಲಿ ಹೆಣ ಬೀಳದ್ದಕ್ಕೆ ಬಿಜೆಪಿಗೆ ಭ್ರಮನಿರಸನ: ದಿನೇಶ್‌ ಗುಂಡೂರಾವ್

ಇದು ಭಯೋತ್ಪಾದನಾ ಪ್ರೇರಿತ ಸರ್ಕಾರ

ಇಲ್ಲಿನ ಜಿಲ್ಲಾ ಉಸ್ತುವಾರಿ ಸಚಿವರು ಬಂದು ಹಿಂದು ಯುವಕರು ಮೇಲೆ ಕೇಸ್ ಹಾಕಿಸಿದ್ದಾರೆ. ಕೈ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪಾಕಿಸ್ತಾನಕ್ಕೆ ಜಿಂದಾಬಾದ್ ಅಂತಾರೆ. ಪಾಕಿಸ್ತಾನಕ್ಕೆ ಜಿಂದಾಬಾದ್ ಅಂದವರ ಮೇಲೆ ಕೇಸ್ ಹಾಕಿಲ್ಲ. ಕೃತ್ಯದಲ್ಲಿ ಭಾಗಿ ಆದವರನ್ನು ಬಿಡುಗಡೆ ಮಾಡಿ ಅಂತ ಸಚಿವರು ಪತ್ರ ಬರೆಯುತ್ತಾರೆ. ಆತಂಕವಾದಿಗಳ ವೀ ಆರ್ ಮೈ ಬ್ರದರ್ಸ್‌ ಅಂತಾರೆ. ಕಾಂಗ್ರೆಸ್ ಸರ್ಕಾರ ಎಲ್ಲರನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಕಾಂಗ್ರೆಸ್ ಸರ್ಕಾರ ಹಿಂದು ವಿರೋಧಿಯಾಗಿದೆ. ಇದು ಭಯೋತ್ಪಾದನಾ ಪ್ರೇರಿತ ಸರ್ಕಾರ. ಔರಂಗಜೇಬನ ಸೃಷ್ಟಿಕರ್ತ ಸಿದ್ದರಾಮಯ್ಯ. ಈ ಮೊದಲು ಟಿಪ್ಪು ಸುಲ್ತಾನ್ ಸೃಷ್ಟಿಕರ್ತರಾಗಿದ್ದರು. ಈ ಘಟನೆಯನ್ನು ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಎಂದು ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

Exit mobile version