Site icon Vistara News

Arecanut Diseases | ಮಲೆನಾಡಲ್ಲಿ ಅಡಕೆಗೆ ಹೊಸ ಕೀಟ ಬಾಧೆ; ಬೆಳೆಗಾರರು ಹೈರಾಣ!

hosanagara arecanut

ಪುರುಷೋತ್ತಮ ಶ್ಯಾನುಭೋಗ, ಹೊಸನಗರ
ಮಳೆಗಾಲ ಬಂದರೆ ಮಲೆನಾಡ ಕೃಷಿಕರ ಗೋಳು ಒಂದೊಂದಾಗಿಯೇ ಪ್ರಾರಂಭವಾಗುತ್ತದೆ. ಕೊಳೆ ರೋಗ, ಎಲೆ ಚುಕ್ಕೆ ರೋಗ, ಬೆಂಕಿ ರೋಗ (Arecanut Diseases) ಸೇರಿದಂತೆ ಹಲವು ರೋಗಗಳು ಮಧ್ಯೆ ಈಗ ಅಡಕೆಗೆ ಹೊಸ ರೂಪದಲ್ಲಿ ಕೀಟ ಬಾಧೆ ಆರಂಭವಾಗಿದ್ದು, ಬೆಳಗಾರರನ್ನು ತೀವ್ರ ಆತಂಕಕ್ಕೀಡು ಮಾಡಿದೆ.

ಮಲೆನಾಡಿನ ಶಿವಮೊಗ್ಗ ಹಾಗೂ ಉತ್ತರಕನ್ನಡ ಜಿಲ್ಲೆಯಲ್ಲಿ ಅಡಕೆ ಪ್ರಮುಖ ಬೆಳೆಯಾಗಿದ್ದು, ಪಕ್ಕದ ಚಿಕ್ಕಮಗಳೂರಿನಲ್ಲಿಯೂ ಹೆಚ್ಚಾಗಿ ಬೆಳೆಯಲಾಗುತ್ತದೆ. ಇನ್ನು ದಾವಣಗೆರೆ, ಚಿತ್ರದುರ್ಗ, ಹಾಸನ ಸೇರಿದಂತೆ ಮತ್ತಿತರ ಕಡೆಗಳಲ್ಲಿಯೂ ಅಡಕೆಯನ್ನು ಬೆಳೆಯಲಾಗುತ್ತದೆಯಾದರೂ ತೀವ್ರ ಮಳೆಯಿಂದ ಈ ಭಾಗದಲ್ಲಿ ಅಷ್ಟಾಗಿ ಈ ಬೆಳೆಗೆ ರೋಗ ಕಾಣಿಸಿಕೊಳ್ಳುವ ಪ್ರಮಾಣದಲ್ಲಿ ಕಡಿಮೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಶಿವಮೊಗ್ಗ, ಉತ್ತರ ಕನ್ನಡ ಮತ್ತು ಚಿಕ್ಕಮಗಳೂರಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಹಾಗೂ ಮಣ್ಣಿನ ಪ್ರಭಾವದಿಂದ ರೋಗಗಳು ಹೆಚ್ಚಾಗುತ್ತವೆ ಎಂದು ಅಧ್ಯಯನಗಳು ಹೇಳುತ್ತವೆ.

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ನಿಟ್ಟೂರು, ನಾಗೋಡಿ, ಹೆಬ್ಬಿಗೆ, ಸಂಪೆಕಟ್ಟೆ, ಕಟ್ಟಿನಹೊಳೆ, ಮಂಜಗಳಲೆ ಹಾಗೂ ಸಾಗರ ತಾಲೂಕಿನ ಸಂಕಣ್ಣ ಶಾನುಬೋಗ್ ಗ್ರಾಪಂ ವ್ಯಾಪ್ತಿಯ ಹೊಸಕೊಪ್ಪ, ಮುಂಡಿಗೇಮನೆ, ಉಡಕೇಸರ, ತಲನೇರು ಭಾಗಗಳಲ್ಲಿ ಅಡಕೆಗೆ ಹೊಸ ರೂಪದ ರೋಗ ಕಾಣಿಸಿಕೊಂಡಿದೆ. ಕೊನೆಯಿಂದ ಅಡಕೆ ಬೇರ್ಪಟ್ಟು ಇಡೀ ಕೊನೆಯೇ ನೆಲಕ್ಕೆ ಉದುರುತ್ತಿವೆ. ಇದು ಬೆಳೆಗಾರರನ್ನು ಚಿಂತೆಗೀಡು ಮಾಡಿದೆ.

ಕೀಟ ಬಾಧೆಯಿಂದ ಹಾನಿಗೊಳಗಾಗಿರುವ ಅಡಕೆ ಮತ್ತು ಅಡಕೆ ಮರದಲ್ಲಿರುವ ಕೊನೆ.

ರೋಗದ ಲಕ್ಷಣಗಳೇನು.?
ಹೀಗೆ ಅಡಕೆ ಉದುರಲು ಕೀಟಗಳ ಬಾಧೆ ಕಾರಣವಾಗಿದ್ದು, ಮೇಲ್ನೋಟಕ್ಕೆ ನೀರುಕೊಳೆ ರೋಗದಂತೆಯೇ ಗೋಚರಿಸುತ್ತಿದೆ. ಅಡಕೆ ಕೆಂಪು ಮಿಶ್ರಿತ ಹಳದಿ ಬಣ್ಣಕ್ಕೆ ತಿರುಗಿ ಕೊನೆಯಿಂದ ತೊಟ್ಟು ಸಮೇತ ಉದುರಲು ಆರಂಭಿಸಿದೆ. ಒಂದೆರಡು ದಿನದಲ್ಲೇ ಇಡೀ ಅಡಕೆ ಕೊನೆ ಖಾಲಿಯಾಗುತ್ತದೆ. ಉದುರಿದ ಅಡಕೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅಡಕೆ ತೊಟ್ಟಿನ ಬಳಿ ಮೃದು ಭಾಗದಲ್ಲಿ ಸೂಜಿಯಿಂದ ಚುಚ್ಚಿದಂತೆ ಕಪ್ಪು ರಂದ್ರ ಕಾಣುತ್ತದೆ. ಅಡಕೆಯನ್ನು ಒಡೆದು ನೋಡಿದರೆ ಒಳಗೆ ಕೀಟಗಳು ಕಾಣಸಿಗುತ್ತವೆ. ಈ ಕೀಟಗಳು ಒಳಗಿನ ಮೃದು ಭಾಗಗಳನ್ನು ಬಹುತೇಕ ತಿಂದುಬಿಟ್ಟಿರುತ್ತವೆ. ಸಾಮಾನ್ಯವಾಗಿ ಚಿಗುರು ಅಡಕೆಗೆ ಈ ಕೀಟಗಳಿಂದ ಸಮಸ್ಯೆಯಾಗುತ್ತಿದೆ. ಆದರೆ, ಇದನ್ನು ನಿಯಂತ್ರಣಕ್ಕೆ ತರಬಹುದು ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.

ನಾಗರಾಜಪ್ಪ

ಹತೋಟಿಗೆ ತರಬಹುದು- ಅಡಕೆ ಸಂಶೋಧನಾಲಯ ಮುಖ್ಯಸ್ಥ
ಈ ಕೀಟ ಬಾಧೆ ಬಗ್ಗೆ ಅಡಕೆ ಬೆಳೆಗಾರರು ಆತಂಕಪಡುವ ಅಗತ್ಯವಿಲ್ಲ. ಇದು ಮಳೆಗಾಲದಲ್ಲಿ ಉತ್ಪತ್ತಿಯಾಗುವ ಕೀಟಗಳಾಗಿದ್ದು, ಸಲಹೆ ಮಾಡಿದ ಔಷಧ ಸಿಂಪಡನೆಯಿಂದ ಸಂಪೂರ್ಣ ಹತೋಟಿಗೆ ತರಬಹುದಾಗಿದೆ ಎಂದು ವಿಸ್ತಾರ ನ್ಯೂಸ್‌ಗೆ ಶಿವಮೊಗ್ಗದ ನವುಲೆ ಕೃಷಿ ಹಾಗೂ ಅಡಿಕೆ ಸಂಶೋಧನಾಲಯದ ಮುಖ್ಯಸ್ಥ ನಾಗರಾಜಪ್ಪ ಅಡಿವೆಪ್ಪರ್ ತಿಳಿಸಿದ್ದಾರೆ.

ಇದನ್ನೂ ಓದಿ | ಅಡಕೆ ಅಕ್ರಮ ಆಮದಿಗೆ ಕಡಿವಾಣ ಹಾಕಿ: ಪ್ರಧಾನಿಗೆ ಡಾ. ವೀರೇಂದ್ರ ಹೆಗ್ಗಡೆ ಪತ್ರ

ಇಲ್ಲೂ ಇದೆ ಸಮಸ್ಯೆ
ಅಡಕೆಗೆ ಬರುವ ಅನೇಕ ರೋಗಗಳಿಗೆ ಇಲಾಖೆಯ ತಜ್ಞರು ಬೇರೆ ಬೇರೆ ಔಷಧ ಸಿಂಪಡನೆ ಮಾಡುವಂತೆ ಸಲಹೆ ನೀಡಿದ್ದರೂ, ಮಲೆನಾಡಿನ ಅತಿಯಾದ ಮಳೆಯಿಂದಾಗಿ, ಪ್ರತೀಕೂಲ ಹವಾಮಾನದಿಂದಾಗಿ ಸಮರ್ಪಕವಾಗಿ ಔಷಧ ಸಿಂಪಡನೆ ಸಾಧ್ಯವಾಗುತ್ತಿಲ್ಲ. ಅಲ್ಲದೆ, ಸಿಂಪಡಣೆ ಮಾಡಿದರೂ ಮತ್ತೆ ಭಾರಿ ಮಳೆಯಾಗುವ ಹಿನ್ನೆಲೆಯಲ್ಲಿ ವ್ಯರ್ಥವಾಗುತ್ತಿದೆ. ಔಷಧ ಮಳಿಗೆಗಳಲ್ಲಿ ದೊರೆಯುವ ಫಿನಾಲೋಫಾಸ್ 25 ಇಸಿ ಔಷಧವನ್ನು ಒಂದು ಲೀಟರ್ ನೀರಿಗೆ ೨ ಮಿಲಿಯಂತೆ ಮತ್ತು ಕ್ಲೋರೊಫೈರಿಫಾಸ್ 20 ಇಸಿ ಔಷದವನ್ನು ಲೀಟರ್‌ಗೆ ಎರಡು ಮಿಲಿಯಂತೆ ಸೇರಿಸಿ ಸಿಂಪಡನೆ ಮಾಡಲು ಕೃಷಿ ತಜ್ಞರು ಹೇಳಿದ್ದಾರೆ. ಆದರೆ, ಇದನ್ನು ಕೊಳೆರೋಗದ ಔಷಧಗಳ ಜತೆ ಸಿಂಪಡಣೆ ಮಾಡದೇ ಪ್ರತ್ಯೇಕವಾಗಿ ಮಾಡಬೇಕು ಎಂಬ ಸಲಹೆಯನ್ನೂ ನೀಡಿದ್ದಾರೆ.

ಸರ್ಕಾರ ರಕ್ಷಣೆಗೆ ದಾವಿಸಲಿ- ಕೃಷಿಕ
ಕಳೆದ ವರ್ಷ ಯೆಲೆ ಚುಕ್ಕಿ ರೋಗದಿಂದ ಪೂರ್ತಿ ಅಡಕೆಯನ್ನು ಕಳೆದುಕೊಂಡಿದ್ದೆವು. ಈ ವರ್ಷ ಹೊಸ ರೀತಿಯ ಕೀಟ ಬಾಧೆ ಆವರಿಸಿದೆ. ಸರ್ಕಾರ ತುರ್ತು ಕ್ರಮ ಕೈಗೊಂಡು ನಮ್ಮ ರಕ್ಷಣೆಗೆ ಧಾವಿಸಬೇಕು.
| ಪ್ರಭಾಕರ ಹೊಸಕೊಪ್ಪ, ಅಡಕೆ ಬೆಳೆಗಾರ

Exit mobile version