ಬೆಂಗಳೂರು: ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ 140ಕ್ಕಿಂತ ಹೆಚ್ಚು ಸೀಟುಗಳನ್ನು ಗೆದ್ದು ಅಧಿಕಾರಕ್ಕೆ ಏರಲಿದೆ. ಕಾಂಗ್ರೆಸ್ ಪಕ್ಷವು ಧೂಳೀಪಟವಾಗಲಿದೆ ಎಂದು ಬಿಜೆಪಿ ಕೇಂದ್ರ ಸಂಸದೀಯ ಮಂಡಳಿಯ ಸದಸ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಶಿವಮೊಗ್ಗದಲ್ಲಿ ಇಂದು ಬಿಜೆಪಿ ರಾಜ್ಯ ಪ್ರಶಿಕ್ಷಣ ವರ್ಗವನ್ನು ಉದ್ಘಾಟಿಸಿ ಮಾತನಾಡಿದ ಅವರು, 140ಕ್ಕಿಂತ ಹೆಚ್ಚು ಸೀಟು ಗೆಲ್ಲಲು ಪರಿಶ್ರಮ, ಸಂಘಟನೆ ಬಲಪಡಿಸುವುದು ಅಗತ್ಯ. ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳ ಸಬಲೀಕರಣ, ಮಹಿಳಾ ಸಬಲೀಕರಣ, ಯುವ ಸಬಲೀಕರಣಕ್ಕೆ ಗಮನ ಕೊಟ್ಟರೆ ನಾವು ನಮ್ಮ ಗುರಿ ತಲುಪಬಹುದು ಎಂದು ಕಿವಿಮಾತು ಹೇಳಿದರು.
ಚುನಾವಣೆ ಮತ್ತು ಸಂಘಟನೆ ದೃಷ್ಟಿಯಿಂದ ತಯಾರಿ, ವಾಸ್ತವಿಕ ನಮ್ಮ ಸ್ಥಿತಿ ಏನಿದೆ, ಬೇರೆ ಪಕ್ಷಗಳ ಸ್ಥಿತಿ ಏನಿದೆ ಎಂದು ಅರ್ಥ ಮಾಡಿಕೊಂಡು ಮುಂದುವರಿದರೆ ನಮ್ಮ ಗುರಿ ತಲುಪಲು ಸಾಧ್ಯ ಎಂದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರಕಾರದ ಕಾರ್ಯಕ್ರಮಗಳು, ಸಾಧನೆಯನ್ನು ಜಗತ್ತೇ ಅಚ್ಚರಿಯಿಂದ ನೋಡುತ್ತಿದೆ. ಮುಂದಿನ ಚುನಾವಣೆಯಲ್ಲಿ ಪ್ರಧಾನಿ, ಗೃಹ ಸಚಿವರು, ರಾಷ್ಟ್ರೀಯ ಅಧ್ಯಕ್ಷರು ಹೆಚ್ಚು ಬಾರಿ ಕರ್ನಾಟಕಕ್ಕೆ ಬರಲಿದ್ದಾರೆ ಎಂದರು.
ದಕ್ಷಿಣ ರಾಜ್ಯಗಳಲ್ಲಿ ಕರ್ನಾಟಕದಲ್ಲಿ ಮಾತ್ರ ಬಿಜೆಪಿ ಅಧಿಕಾರದಲ್ಲಿದೆ. ಇಲ್ಲಿ ಗೆಲುವು ಸಾಧಿಸಿ ದೇಶಕ್ಕೆ ದೊಡ್ಡ ಸಂದೇಶ ಕೊಡಬೇಕಿದೆ ಎಂದ ಅವರು, ಚುನಾಯಿತ ಪ್ರತಿನಿಧಿಗಳ ಸಹಕಾರ ಪಡೆದು ಸಂಘಟನೆಯನ್ನು ಗಟ್ಟಿಗೊಳಿಸಬೇಕೆಂದು ತಿಳಿಸಿದರು. ಕೇಂದ್ರ- ರಾಜ್ಯಗಳ ಅನೇಕ ಜನಪರ ಯೋಜನೆಗಳು ನಮಗೆ ಬೆನ್ನೆಲುಬಾಗಿ ನಿಂತಿವೆ ಎಂದು ವಿಶ್ಲೇಷಿಸಿದರು.
ಕೃಷಿ ಯಾಂತ್ರೀಕರಣ ಯೋಜನೆಯಡಿ ಹಲವಾರು ಕೃಷಿ ಯಂತ್ರಗಳನ್ನು ಶೇ 50ರಿಂದ 90ರಷ್ಟು ಸಬ್ಸಿಡಿ ದರದಲ್ಲಿ ರೈತರಿಗೆ ನೀಡಲಾಗುತ್ತಿದೆ. ರಾಷ್ಟ್ರೀಯ ಮಿಷನ್ ಯೋಜನೆಯಡಿಯಲ್ಲಿ ರೈತರಿಗೆ ನೆರವು ಲಭಿಸುತ್ತಿದೆ. ಕೃಷಿಕರಿಗೆ ಉತ್ತೇಜನ ನೀಡುವ ಕೆಲಸ ಮಾಡಲಾಗುತ್ತಿದೆ. ಫಸಲ್ ವಿಮಾ ಯೋಜನೆಯಡಿ ಬೆಳೆ ಹಾನಿ ಆದಾಗ ಬೆಳೆ ನಷ್ಟದ ಬಗ್ಗೆ ಶೀಘ್ರವೇ ಮಾಹಿತಿ ಪಡೆಯಲಾಗುತ್ತಿದೆ. ಸಿರಿ ಧಾನ್ಯ ಬೆಳೆಯುವವರ ಸಂಖ್ಯೆ ಹೆಚ್ಚಳಕ್ಕೆ ಪ್ರೋತ್ಸಾಹಧನ ಕೊಡಲಾಗುತ್ತಿದೆ ಎಂದರು. ಗಂಗಾ ಕಲ್ಯಾಣ ಯೋಜನೆ ಸೇರಿ ವಿವಿಧ ಯೋಜನೆಗಳ ಮಾಹಿತಿಯನ್ನು ಜನರಿಗೆ ತಲುಪಿಸಬೇಕು ಎಂದು ಅವರು ತಿಳಿಸಿದರು.
ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಪಾರ್ಟಿ ವಿತ್ ಡಿಫರನ್ಸ್ ಬಿಜೆಪಿ. ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿರುವ ಪಾರ್ಟಿ ಬಿಜೆಪಿ. ಸಿದ್ಧಾಂತ, ಮೌಲ್ಯಗಳಿಗೆ ಬಿಜೆಪಿ ಕಾಂಪ್ರಮೈಸ್ ಆಗೊಲ್ಲ. ಮೊದಲು ದೇಶ, ನಂತರ ಪಾರ್ಟಿ ಎಂಬ ಧ್ಯೇಯ ಹೊಂದಿರುವ ಪಾರ್ಟಿ ಬಿಜೆಪಿ. ಬಿಜೆಪಿ ರಾಜಕೀಯ ಪಕ್ಷಗಳು ಭಿನ್ನ ಅಭಿಪ್ರಾಯ ಹೊಂದಿವೆ. ಅವೆಲ್ಲವೂ ರಾಜಕೀಯ ದೃಷ್ಟಿಕೋನದಿಂದ ಹೊಂದಿರುವುದು. ಬಿಜೆಪಿ ಬಗ್ಗೆ ಅಪಪ್ರಚಾರ ದೊಡ್ಡದಿದೆ. ಆದರೆ ಜನರಲ್ಲಿ ಬಿಜೆಪಿ ಬಗ್ಗೆ ಉತ್ತಮ ಅಭಿಪ್ರಾಯವಿದೆ ಎಂದರು.
ಸಂವಿಧಾನದ ಆಶಯ ಈಡೇರಿಸುವುದು ಬಿಜೆಪಿ ಆದ್ಯತೆ. ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಹೇಗೆ ನಡೆಸಿಕೊಂಡಿತ್ತು ಎಂಬುದು ಈಗ ಇತಿಹಾಸ. ಈಗ ಕಾಂಗ್ರೆಸ್ ಮೊಸಳೆ ಕಣ್ಣೀರು ಸುರಿಸುತ್ತಿದೆ. ಅವರಿಗೆ ಅಧಿಕಾರವೇ ಮಖ್ಯವಾಗಿತ್ತು. ಕಾಂಗ್ರೆಸ್ ತನ್ನ ಸಿದ್ದಾಂತ, ನೀತಿಗೆ ಅಂಟಿಕೊಂಡು ರಾಜಕಾರಣ ಮಾಡಿಲ್ಲ. ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ಅನೇಕ ಜನಪರ ಕೆಲಸ ಮಾಡಿದೆ. ನರೇಂದ್ರ ಮೋದಿ ಸರ್ಕಾರ ಕೂಡ ಉಜ್ವಲ ಯೋಜನೆ ಜಾರಿ ತಂದಿದೆ. ಪ್ರತಿ ಮನೆಗೆ ಶುದ್ಧನೀರು ಪೂರೈಸಲಾಗುತ್ತಿದೆ. ಎಲ್ಲ ಕ್ಷೇತ್ರಗಳಲ್ಲಿ ಮೋದಿ ಸರ್ಕಾರ ಅಭಿವೃದ್ಧಿ ಮಾಡಿದೆ.
ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿ ಆರ್ಥಿಕ ಹಿಂಜರಿತ ಇದೆ. ಆದರೆ ಭಾರತ ಜಿಡಿಪಿಯಲ್ಲಿ ನಿಯಂತ್ರಣ ಹೊಂದಿದೆ. 7% ಬೆಳವಣಿಗೆ ಕಾಣುತ್ತಿದೆ. ಆರ್ಥಿಕವಾಗಿ ಭಾರತ ಪ್ರಗತಿ ಸಾಧಿಸುತ್ತಿದೆ. ಮೋದಿ ಸರ್ಕಾರದ ದಾರಿಯಲ್ಲಿ ರಾಜ್ಯ ಸರ್ಕಾರ ಸಾಗುತ್ತಿದೆ. ಕೋವಿಡ್ ನಿರ್ವಹಣೆಯಲ್ಲಿ ಯಶಸ್ವಿಯಾಗಿದ್ದೇವೆ. ಯಡಿಯೂರಪ್ಪ ಅವರು ಮಾದರಿ ನಿರ್ವಹಣೆ ಮಾಡಿ ತೋರಿಸಿದ್ದಾರೆ. ಸಿಎಂ ಆಗಿದ್ದಾಗ ತೆರಿಗೆ ನಿರ್ವಹಣೆಯಲ್ಲಿ ಹಿನ್ನಡೆಯಿತ್ತು. ಈಗ ಗುರಿ ಮೀರಿ ತೆರಿಗೆ ಸಂಗ್ರಹಣೆ ಆಗಿದೆ ಎಂದರು.
ಪಕ್ಷದ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾಣ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರಶಿಕ್ಷಣ ಪ್ರಕೋಷ್ಠದ ಸಂಚಾಲಕ ಶ್ರೀಕಾಂತ ಕುಲಕರ್ಣಿ, ಸಹ ಸಂಚಾಲಕ ಆರ್.ಕೆ.ಸಿದ್ದರಾಮಣ್ಣ ಅವರು ಭಾಗವಹಿಸಿದ್ದರು.
ಕೋರ್ ಕಮಿಟಿ ಸದಸ್ಯರು, ಕೋರ್ ಕಮಿಟಿ ವಿಶೇಷ ಆಹ್ವಾನಿತರು, ರಾಜ್ಯದ ಪದಾಧಿಕಾರಿಗಳು, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರು, ರಾಷ್ಟ್ರೀಯ ಮೋರ್ಚಾದ ಪದಾಧಿಕಾರಿಗಳು, ರಾಷ್ಟ್ರೀಯ ಮೋರ್ಚಾಗಳ ಕಾರ್ಯಕಾರಿಣಿ ಸದಸ್ಯರು, ರಾಜ್ಯ ಮೋರ್ಚಾ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ರಾಜ್ಯದ ವಕ್ತಾರರು, ರಾಜ್ಯ ಪ್ರಕೋಷ್ಠಗಳ ಸಂಚಾಲಕರು, ಸಹ ಸಂಚಾಲಕರು, ಪ್ರಶಿಕ್ಷಣ ಪ್ರಕೋಷ್ಠದ ಸದಸ್ಯರು, ವಿಭಾಗ ಪ್ರಭಾರಿಗಳು, ಸಹ ಪ್ರಭಾರಿಗಳು, ವಿಭಾಗದ ಸಂಘಟನಾ ಪ್ರಧಾನ ಕಾರ್ಯದರ್ಶಿಗಳು, ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿಗಳು, ಎಲ್ಲ ಜಿಲ್ಲಾ ಅಧ್ಯಕ್ಷರು 3 ದಿನಗಳ ರಾಜ್ಯ ಪ್ರಶಿಕ್ಷಣ ವರ್ಗದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಇದನ್ನೂ ಓದಿ | BJP ಜನಸ್ಪಂದನ | ಪ್ರವೀಣ್ ನೆಟ್ಟಾರು ಕುಟುಂಬದವರಿಗೆ ಸಿಎಂ ಕಚೇರಿಯಲ್ಲಿ ನೌಕರಿ ನೀಡುವುದಾಗಿ ಬೊಮ್ಮಾಯಿ ಘೋಷಣೆ