Site icon Vistara News

BJP Politics: ಶಿಕಾರಿಪುರದಿಂದಲೇ ಸ್ಪರ್ಧೆ: ಗೊಂದಲಗಳಿಗೆ ತೆರೆ ಎಳೆದ ಬಿ.ವೈ. ವಿಜಯೇಂದ್ರ

bjp-politics-BY Vijayendra confirms he will contest from shikaripura

#image_title

ಶಿವಮೊಗ್ಗ: ಬಿ.ಎಸ್‌. ಯಡಿಯೂರಪ್ಪ ಅವರಿಗೆ ರಾಜಕೀಯ ಜೀವನ ಕಲ್ಪಿಸಿದ ಶಿಕಾರಿಪುರದಿಂದಲೇ ತಮ್ಮ ಸ್ಪರ್ಧೆಯನ್ನು ರಾಜ್ಯ ಬಿಜೆಪಿ ( BJP Politics) ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಖಚಿತಪಡಿಸಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಯ ಮುನ್ನಾದಿನ ಶಿವಮೊಗ್ಗದ ಗೃಹದಲ್ಲಿ ವಿಸ್ತಾರ ನ್ಯೂಸ್‌ ಜತೆಗೆ ಮಾತನಾಡಿದರು.

ವಿಮಾನ ನಿಲ್ದಾಣದ ಕುರಿತು ಪ್ರತಿಕ್ರಿಯಿಸಿ, ಪ್ರಧಾನಿ ನರೇಂದ್ರ ಮೋದಿಯವರ ಅಮೃತ ಹಸ್ತದಿಂದ ಹಾಗೂ ಅದರಲ್ಲೂ ಬಿ.ಎಸ್‌. ಯಡಿಯೂರಪ್ಪ ಅವರ ಜನ್ಮದಿನದಂದು ವಿಮಾನ ನಿಲ್ದಾನ ಉದ್ಘಾಟನೆ ಆಗುತ್ತಿರುವುದು ಈ ಭಾಗದ ಜನರ ಸೌಭಾಗ್ಯ. ವಿಮಾನ ನಿಲ್ದಾಣ ಐದಾರು ವರ್ಷ ಮೊದಲೇ ಉದ್ಘಾಟನೆ ಆಗಬೇಕಾಗಿತ್ತು. ಆದರೆ ಬೇರೆ ಸರ್ಕಾರಗಳು ಆಸಕ್ತಿ ವಹಿಸದೇ ಇದ್ದ ಕಾರಣ ತಡವಾಗಿದೆ. ಆದರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಲ್ದಾಣ ಆಗಿರುವುದು ನಮಗೆಲ್ಲ ಹೆಮ್ಮೆ ತಂದಿದೆ.

ಯಡಿಯೂರಪ್ಪ ಅವರದ್ದು ಅವಿರತ ಹೋರಾಟ, ಬಡವರ ಬಗ್ಗೆ ಅವರಿಗೆ ಕಾಳಜಿ. ವಿಮಾನ ನಿಲ್ದಾಣಕ್ಕೆ ಕುವೆಂಪು ಅವರ ಹೆಸರು ಇಡಬೇಕೆಂದು ಯಡಿಯೂರಪ್ಪ ಅವರು ಸೂಚಿಸಿದ ಸಂದರ್ಭದಲ್ಲಿ, ನಾಡಿನ ಕುರಿತು ಅವರಿಗಿರುವ ಕಾಳಜಿ ತಿಳಿಯುತ್ತದೆ. ಕುವೆಂಪು ಅವರನ್ನು ಜಾತಿಗೆ ಸೀಮಿತ ಮಾಡಿದರೆ ತಪ್ಪಾಗುತ್ತದೆ. ಯಡಿಯೂರಪ್ಪ ತಮ್ಮ ಜೀವನದಲ್ಲಿ ಏನನ್ನೂ ಬಯಸಿಲ್ಲ, ಸ್ಥಾನ ಮಾನಗಳು ತಾವಾಗಿಯೇ ಬಂದಿವೆ ಎಂದರು.

ವಿಮಾನ ನಿಲ್ದಾಣ ಅಭಿವೃದ್ಧಿಗೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಚಾಲನೆ ನೀಡಿದರು. ಬೆಂಗಳೂರು ಮಾತ್ರ ಅಭಿವೃದ್ಧಿಯಾದರೆ ಸಾಲದು, ಎಲ್ಲ ಭಾಗದ ಯುವಕರಿಗೆ ಮೂಲಸೌಕರ್ಯ, ಉದ್ಯೋಗ ಲಭಿಸಬೇಕು ಎಂಬ ನಿಟ್ಟಿನಲ್ಲಿ ರೂಪಿಸಿದರು. ಈ ಭಾಗದ ಜನರು ತಿರುಪತಿ, ಕಾಶಿಗೆ ಹೋಗಲೂ ಇದರಿಂದ ಅನುಕೂಲವಾಗುತ್ತದೆ. ಜೋಗ್‌ ಜಲಪಾತ ಸೇರಿ ಪ್ರವಾಸೋದ್ಯಮಕ್ಕೂ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಶಿಕಾರಿಪುರದಲ್ಲಿ ವಿಜಯೇಂದ್ರ ಸ್ಪರ್ಧೆ ಕುರಿತು ಪ್ರತಿಕ್ರಿಯಿಸಿ, ಈ ಕುರಿತು ಯಡಿಯೂರಪ್ಪ ತಿಳಿಸಿದ್ದಾರೆ. ನಮ್ಮ ತಾಲೂಕಿನ ಜನರೆಲ್ಲರೂ ಸೇರಿ ತಾವೇ ನಿಲ್ಲಬೇಕು ಎಂದು ಒತ್ತಾಯ ಮಾಡಿದಾಗ, ತಮ್ಮ ಬದಲಿಗೆ ವಿಜಯೇಂದ್ರ ಸ್ಪರ್ಧೆ ಮಾಡುತ್ತಾರೆ ಎಂದು ಘೋಷಿಸಿದರು. ಯಡಿಯೂರಪ್ಪ ಅವರಿಗೆ ಹೋರಾಟದ ಪ್ರೇರಣೆ ಕೊಟ್ಟ ನೆಲದಿಂದ ಸ್ಪರ್ಧೆಗೆ ಪಕ್ಷ ಅವಕಾಶ ಮಾಡಿಕೊಡುವುದು ನನಗೆ ಸುವರ್ಣ ಅವಕಾಶ ಎಂದು ಭಾವಿಸಿದ್ದೇನೆ ಎಂದರು.

ಇದನ್ನೂ ಓದಿ: Shivamogga Airport: ಬೆಂಗಳೂರು ನಂತರ ಅತಿ ದೊಡ್ಡ ವಿಮಾನ ನಿಲ್ದಾಣ ಎಂದ ಯಡಿಯೂರಪ್ಪ: ಕಾರ್ಯಕ್ರಮಕ್ಕೆ ಪಾಸ್‌ ಬೇಕಿಲ್ಲ ಎಂದ ಬಿವೈಆರ್‌

ಹಾಸನದಲ್ಲಿ ಸ್ಪರ್ಧಿಸಲು ಜೆಡಿಎಸ್‌ನಲ್ಲೂ ಪೈಪೋಟಿಯಿದೆ ಎಂಬ ಕುರಿತು ಪ್ರತಿಕ್ರಿಯಿಸಿ, ಬಿಜೆಪಿ ಇತಿಹಾಸದಲ್ಲಿ ಮಂಡ್ಯದ ಕೆ.ಆರ್.‌ ಪೇಟೆಯಲ್ಲಿ ಹಾಗೂ ಶಿರಾದಲ್ಲಿ ಎಂದಿಗೂ ಗೆದ್ದಿರಲಿಲ್ಲ. ಪಕ್ಷ ನನಗೆ ಹೊಣೆ ನೀಡಿದಾಗ, ಕಾಂಗ್ರೆಸ್‌-ಜೆಡಿಎಸ್‌ ಸೋಲಿಸುವ ಇಚ್ಛೆಗಿಂತಲೂ, ಜನರ ವಿಶ್ವಾಸ ಗೆಲ್ಲಬೇಕೆಂಬ ನಿಟ್ಟಿನಲ್ಲಿ ಮುನ್ನಡೆದವು. ಹಾಸನದಲ್ಲಿ ಯುವ ಮುಖಂಡ ಪ್ರೀತಂ ಗೌಡರು 40-50 ಸಾವಿರ ಮತಗಳ ಅಂತರದಲ್ಲಿ ಗೆದ್ದುಬರುತ್ತಾರೆ. ಅವರನ್ನು ತಡೆಯುವ ಶಕ್ತಿ ಯಾವುದೇ ಪಕ್ಷಕ್ಕೆ ಇಲ್ಲ ಎಂದರು.

ವೀರಶೈವ ಲಿಂಗಾಯತು ಬಿಜೆಪಿಯನ್ನು ಬೆಂಬಲಿಸಿ ಎಂದು ಯಡಿಯೂರಪ್ಪ ಕರೆ ನೀಡಿರುವ ಕುರಿತು ಪ್ರತಿಕ್ರಿಯೆ ನೀಡಿ, ಯಾವುದೇ ಒಂದು ಜಾತಿಯನ್ನು ಮುಂದಿಟ್ಟುಕೊಂಡು ಯಾರೂ ಗೆಲ್ಲಲು ಸಾಧ್ಯವಿಲ್ಲ. ಯಡಿಯೂರಪ್ಪ ಅವರು ಒಂದು ಜಾತಿಯನ್ನು ಮುಂದಾಗಿಸಿಕೊಂಡು ರಾಜಕೀಯ ಮಾಡಿಲ್ಲ. ನಾವು ವೀರಶೈವ ಲಿಂಗಾಯತರು ಎನ್ನುವುದಕ್ಕೆ ಹೆಮ್ಮೆಯಿದೆ. ಜನರನ್ನು ಬೇರೆಯವರು ದಾರಿತಪ್ಪಿಸಬಾರದು ಎಂಬ ಕಾರಣಕ್ಕೆ ಈ ಹೇಳಿಕೆ ನೀಡಿದ್ದಾರೆ ಎಂದರು.

Exit mobile version