ಹುಬ್ಬಳ್ಳಿ/ಶಿವಮೊಗ್ಗ: ಶಿರಾಳಕೊಪ್ಪ ಗೋಡೆ ಬರಹ ಕುರಿತು ಸ್ಥಳೀಯ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ನಿಷೇಧಿತ ಪಿಎಫ್‌ಐ ಹಾಘೂ ಸಿಎಸ್‌ಐ ಸೇರಿ ಎಂದು ಸುಮಾರು 9 ಕಡೆಯಲ್ಲಿ ಬರೆದಿರುವ ಕಿಡಿಗೇಡಿಗಳ ಕೃತ್ಯದ ಕುರಿತು ಹುಬ್ಬಳ್ಳಿಯಲ್ಲಿ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಶಿವಮೊಗ್ಗದಲ್ಲಿ ಮಾತನಾಡಿರುವ ಸಂಸದ ಬಿ.ವೈ. ರಾಘವೇಂದ್ರ, ಮುಸ್ಲಿಂ ಸಮುದಾಯದ ಮುಖಂಡರು ಇಂತಹದ್ದನ್ನು ತಡೆಯಲು ಮುಂದಾಗಬೇಕು ಎಂದು ಕರೆ ನೀಡಿದ್ದಾರೆ.
ಮೊದಲಿಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಗೋಡೆ ಬರಹ ಬರೆಯುವವರು ಹೇಡಿಗಳು. ಪಿಎಫ್‌ಐನವರು ಎಂದೂ ಕೂಡ ಎದುರಿಗೆ ಬಂದು ಏನೂ ಮಾಡಲ್ಲ. ಅವರು ಕೊಲೆ ಮಾಡೋದು ಒಬ್ಬೊಬ್ಬರೇ ಇರುವ ಸಂದರ್ಭದಲ್ಲಿ ರಾತ್ರಿ ಹೊತ್ತು ಕತ್ತಲೆಯಲ್ಲಿ ಕೊಲೆ ಮಾಡೋದು. ಯಾರೂ ಇಲ್ಲದಿರುವ ಜಾಗ ನೋಡಿ ಬಾಂಬ್ ಹಾಕೋದು. ಗೋಡೆ ಬರಹ ಬರೆಯೋದು. ರಾತ್ರಿ ಹೊತ್ತು ಕಣ್ಣು ತಪ್ಪಿಸಿ ಹೋಗೋದು. ಹೇಡಿಗಳ ಕೆಲಸವನ್ನು ಪಿಎಫ್‌ಐ ಮಾಡುತ್ತಿದೆ. ಅವರಿಗೆ ದೇಶದ ಬಗ್ಗೆ ಕಲ್ಪನೆ ಇಲ್ಲ. ದೇಶದ ಅಭಿವೃದ್ಧಿ ಆಗಬೇಕು ಎಂಬುದಿಲ್ಲ. ದೇಶದಲ್ಲಿ ದೇಶದ್ರೋಹಿ ಚಟುವಟಿಕೆ ಮಾಡಬೇಕು, ಗಲಭೆ ಎಬ್ಬಿಸಬೇಕು ಎಂದು ಮುಂದಾಗಿದ್ದಾರೆ.
ಪ್ರಪಂಚದ ಮುಂದೆ ಭಾರತದಲ್ಲಿ ಹಿಂದುತ್ವ ಅಳಿಸಬೇಕು ಎಂಬ ಉದ್ದೇಶದಿಂದ ಪಿಎಫ್‌ಐ ಮಾಡುತ್ತಿರುವ ದ್ರೋಹಿ ಕೆಲಸ ಇದು. ಇದು ನಮ್ಮ ದೇಶದಲ್ಲಿ ಬಹಳ ದಿನ ನಡೆಯುವುದಿಲ್ಲ. ಸ್ವಾತಂತ್ರ್ಯ ಬಂದ ದಿನದಿಂದಲೂ ಕಾಂಗ್ರೆಸ್‌ನವರು ಪಿಎಫ್‌ಐ ರಾಷ್ಟ್ರ ದ್ರೋಹಿ ಚಟುವಟಿಕೆಯನ್ನು ಬೆಂಬಲಿಸಿದ್ದರು. ನರೇಂದ್ರ ಮೋದಿ, ಅಮಿತ್ ಶಾ ರೀತಿಯ ಹುಲಿಗಳು ದೇಶದಲ್ಲಿ ಆಡಳಿತ ಮಾಡುತ್ತಿರುವ ಸಂದರ್ಭದಲ್ಲಿ ಇಲಿಗಳ ರೂಪದ ಪಿಎಫ್‌ಐ ಅನ್ನು ಹೊಸಕಿ ಹಾಕಲಾಗುತ್ತಿದೆ. ಕಾಂಗ್ರೆಸ್‌ನವರು ಈ ಪಿಎಫ್‌ಐಯನ್ನು ಸಾಕಿಕೊಂಡು ಬಂದರು. ಅದನ್ನು ಮೆಟ್ಟಿ ಹಾಕುವ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ ಎಂದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಪಿಎಫ್‌ಐ, ಸಿಎಫ್‌ಐ ನಿಷೇಧದ ನಂತರ ಅದನ್ನು ಪ್ರಶ್ನೆ ಮಾಡಿ ಕೆಲವರು ಕೋರ್ಟ್‌ಗೆ ಹೋಗಿದ್ದರು. ಕೋರ್ಟ್ ಕೂಡಾ ಸರ್ಕಾರದ ಕ್ರಮವನ್ನು ಸ್ವಾಗತಿಸಿದೆ. ಈ ದೇಶದಲ್ಲಿದ್ದು ದೇಶ ವಿರೋಧಿ ಚಟುವಟಿಕೆ ಮಾಡುತ್ತಿರುವ ಸಂಘಟನೆಗಳನ್ನು ನಾಶ ಮಾಡುವ ಮುಟ್ಟಿಸುವ ಸಂಕಲ್ಪ ಮಾಡಿದ್ದೇವೆ. ದೇಶ ವಿರೋಧಿ ಕೆಲಸಗಳು ಈಗಲೂ ಅಲ್ಲೊಂದು ಇಲ್ಲೊಂದು ನಡೆಯುತ್ತಿವೆ. ಇದಕ್ಕೆ ಉದಾಹರಣೆಯೇ ಶಿರಾಳಕೊಪ್ಪದ ಗೋಡೆ ಬರಹ.
ಶಿರಾಳಕೊಪ್ಪ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲಾಗಿದೆ. ಇಂತಹ ಸಂಘಟನೆಗೆ ಪ್ರೋತ್ಸಾಹ ಮಾಡಿದ್ದ ಪ್ರತಿಫಲವನ್ನು ನಾವೆಲ್ಲಾ ಅನುಭವಿಸುತ್ತಿದ್ದೇವೆ. ಮುಸ್ಲಿಂ ಸಮಾಜದ ಹಿರಿಯರೇ ದೇಶ ವಿರೋಧಿ ಚಿಂತನೆಯನ್ನು ಸರಿ ಮಾಡಬೇಕು. ಕಾನೂನು ಚೌಕಟ್ಟಿನಲ್ಲಿ ಮಾಡಬೇಕು. ಈ ಕುರಿತು ಸರ್ಕಾರ ಉಗ್ರವಾದ ಕ್ರಮ ಕೈಗೊಳ್ಳುತ್ತದೆ ಎಂದರು.
ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಪಿಎಎಫ್‌ಐ, ಸಿಎಫ್‌ಐ ಬ್ಯಾನ್ ಆಗಿದ್ದರೂ ಆ ಮನಸ್ಥಿತಿಯ ಜನ ಇದ್ದಾರೆ. ಇಂದು-ನಿನ್ನೆಯಿಂದಲ್ಲ, 7ನೇ ಶತಮಾನದಿಂದಲೂ ಆ ಮನಸ್ಥಿತಿ ಇದೆ. ಇಸ್ಲಾಮಿಕ್ ಸ್ಟೇಟ್ ಹುಟ್ಟುಹಾಕಬೇಕೆಂದು ಗಜವಾ ಹಿಂದ್ ಹೆಸರಲ್ಲಿ 7ನೇ ಶತಮಾನದಿಂದ ಶುರುವಾದದ್ದು. ಆ ಮನಸ್ಥಿತಿಯ ಜನ ಇದ್ದಾರೆ. ಆ ಮನಸ್ಥಿತಿಯ ಕಾರಣಕ್ಕೆ ಜಿನ್ನಾ ಭಾರತ ವಿಭಜನೆಗೆ ಕೈಹಾಕಿದ್ದು.
ಆ ಮನಸ್ಥಿತಿಯ ಜನ ಇರುವವರೆಗೂ ಈ ರೀತಿ ಮಾಡುತ್ತಾ ಇರುತ್ತಾರೆ. ವೋಟಿನ ಆಸೆಗೆ ಜೊಲ್ಲು ಸುರಿಸಿಕೊಂಡು ತನ್ನದೆ ಶಾಸಕನ ಮನೆಗೆ ಬೆಂಕಿ ಹಾಕಿದರು. ಆಗ ಅವರು ಅಮಾಯಕರು ಎಂದು ಸರ್ಟಿಫಿಕೇಟ್ ಕೊಡುವವರಿಗೆ ಅವರೂ ಉಳಿಯುವುದಿಲ್ಲ, ದೇಶವೂ ಉಳಿಯುವುದಿಲ್ಲ ಎಂದರು.
ಇದನ್ನೂ ಓದಿ | ಶಿವಮೊಗ್ಗ | ನಿಷೇಧಿತ ಸಂಘಟನೆಗಳ ಪರ ಶಿರಾಳಕೊಪ್ಪದಲ್ಲಿ ಕಿಡಿಗೇಡಿಗಳಿಂದ ಗೋಡೆ ಬರಹ, ದೂರು ದಾಖಲು