ಶಿವಮೊಗ್ಗ: ರಾಜ್ಯ ಸರಕಾರದ ವಿವಿಧ ಹಗರಣಗಳು, ಭ್ರಷ್ಟಾಚಾರ, ಸಚಿವರೇ ಹಗರಣದಲ್ಲಿ ಭಾಗಿಯಾಗಿರುವುದು, ರಾಜೀನಾಮೆ ಕೊಡದೆ ಮೊಂಡುತನ ಪ್ರದರ್ಶನ ಖಂಡಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಾಳೆ ನಗರದಲ್ಲಿ ಬೃಹತ್ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಸುಮಾರು 15 ಸಾವಿರದಷ್ಟು ಜನರು ಪ್ರತಿಭಟನೆಯಲ್ಲಿ ಭಾಗವಹಿಸುವರು. ಬೆಳಿಗ್ಗೆ 10:30ಕ್ಕೆ ಸರಕಾರಿ ಬಸ್ ನಿಲ್ದಾಣದ ಅಶೋಕ ವೃತ್ತದಿಂದ ಭಾರೀ ಮೆರವಣಿಗೆ ಆರಂಭವಾಗಲಿದೆ. ಜಿಲ್ಲೆಯ ಎಲ್ಲಾ ಭಾಗಗಳಿಂದ ಬರುವ ನಾಯಕರು, ಕಾರ್‍ಯಕರ್ತರು ಪಾಲ್ಗೊಳ್ಳುವರು. ಮೆರವಣಿಗೆಯು ನೆಹರೂ ರಸ್ತೆ ಮೂಲಕ ಬಾಲರಾಜ ಅರಸ್ ರಸ್ತೆಗೆ ಬಂದು ಅಲ್ಲಿಯೇ ರಸ್ತೆಯ ಮೇಲೆ ಸಭೆ ನಡೆಯಲಿದೆ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ. ಕೆ. ಹರಿಪ್ರಸಾದ್, ಕೆಪಿಸಿಸಿ ಕಾರ್‍ಯಾಧ್ಯಕ್ಷ ಧ್ರುವನಾರಾಯಣ ಸಹಿತ ಕಾಂಗ್ರೆಸ್‌ನ ರಾಜ್ಯ ಮತ್ತು ಜಿಲ್ಲೆಯ ಹಾಲಿ, ಮಾಜಿ ಶಾಸಕರು ಹಾಜರಿರುವರು ಎಂದರು. ಶೇ. 40ರಷ್ಟು ಕಮಿಷನ್ ಹಗರಣದಲ್ಲಿ ಸಚಿವ ಈಶ್ವರಪ್ಪ ರಾಜಿನಾಮೆ ಪಡೆದಿದ್ದರೂ ಅವರನ್ನು ಬಂಧಿಸದೇ ಇರುವುದು, ಪಿಎಸ್‌ಐ ನೇಮಕಾತಿಯಲ್ಲಿ ಸಚಿವರೇ ಭಾಗಿಯಾಗಿರುವುದು ಕಂಡುಬಂದಿದ್ದು ಅವರನ್ನು ಕಿತ್ತುಹಾಕದಿರುವುದು, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಅವರು ಮುಖ್ಯಮಂತ್ರಿ ಸ್ಥಾನಕ್ಕೆ 2500 ಕೋಟಿ ರೂ. ಬೇಡಿಕೆ ಇಟ್ಟಿದ್ದರೆಂದು ಹೇಳುವ ಮೂಲಕ ಭ್ರಷ್ಟಾಚಾರವನ್ನು ಹೊರಗೆಡವಿದ್ದರೂ ಅವರನ್ನು ಬಂಧಿಸದಿರುವುದನ್ನು ಪ್ರತಿಭಟಿಸಿ ಈ ಸಮಾವೇಶ ನಡೆಯಲಿದೆ ಎಂದರು.
ಇದನ್ನೂ ಓದಿ: ಕಾಂಗ್ರೆಸ್ ತ್ಯಜಿಸುವ ಅನೇಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ –