ಶಿವಮೊಗ್ಗ: ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಅವರ ವಿರುದ್ಧ ನಡೆಯುತ್ತಿರುವ ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆ ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಘಟಕದಿಂದ ಶಿವಮೊಗ್ಗದ ಆದಾಯ ಮತ್ತು ತೆರಿಗೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.
ಗುರುವಾರ ಬೆಳಗ್ಗೆ 11.30ಕ್ಕೆ ನಗರದ ಗೋಪಾಲಗೌಡ ಬಡಾವಣೆಯ 100 ಅಡಿ ರಸ್ತೆಯಲ್ಲಿರುವ ಆದಾಯ ತೆರಿಗೆ ಇಲಾಖೆ ಕಚೇರಿ ಎದುರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಹೀಗಾಗಿ ಆದಾಯ ತೆರಿಗೆ ಕಚೇರಿಯ 50 ಮೀಟರ್ ದೂರದಲ್ಲಿ ಬ್ಯಾರಿಕೇಡ್ ಹಾಕಿ ಪೊಲೀಸರು ಬಿಗಿ ಭದ್ರತೆ ಏರ್ಪಡಿಸಿದ್ದರು. ಈ ವೇಳೆ ಪ್ರತಿಭಟನಾಕಾರರು ನುಗ್ಗಲು ಯತ್ನಿಸಿದಾಗ ಪ್ರತಿಭಟನಾಕಾರರನ್ನು ಪೊಲೀಸರು ತಡೆದು ವಶಕ್ಕೆ ಪಡೆದರು. ಇದರಿಂದ ಆಕ್ರೋಶಗೊಂಡ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ರಾಜಕೀಯ ದುರುದ್ದೇಶದಿಂದ ನಮ್ಮ ನಾಯಕರ ವಿರುದ್ಧ ಕೇಂದ್ರ ಬಿಜೆಪಿ ಸರ್ಕಾರ ಇಡಿ ಮೂಲಕ ಕಿರುಕುಳ ನೀಡುತ್ತಿದ್ದು, ಸರ್ಕಾರಿ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕೇಂದ್ರ ಸರ್ಕಾರ ಅಗ್ನಿಪಥ್ ಯೋಜನೆ ಜಾರಿ ಮಾಡಿ ಸೈನಿಕರ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿದೆ. ಈ ಕೂಡಲೇ ಯೋಜನೆಯನ್ನು ಹಿಂಪಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ತನಿಖಾ ಸಂಸ್ಥೆಗಳನ್ನು ಬಿಜೆಪಿ ದುರುದ್ದೇಶಕ್ಕೆ ಬಳಸಿಕೊಳ್ಳುತ್ತಿದೆ. ಸುಳ್ಳು ಕೇಸು ಹಾಕಿ ಹೆದರಿಸುವ ನೀಚತನವನ್ನು ಬಿಜೆಪಿ ತೋರಿಸುತ್ತಿದೆ. ಚೌಕಿದಾರ್ ಚೋರ್ ಹೈ, ಬಿಜೆಪಿ ಕುತಂತ್ರಕ್ಕೆ ಬಗ್ಗುವುದಿಲ್ಲ ಎಂದು ಪ್ರಧಾನಿ ಹಾಗೂ ಮುಖ್ಯಮಂತ್ರಿ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು 2 ಬಸ್‌ಗಳಲ್ಲಿ ತುಂಬಿಸಿಕೊಂಡು ಹೋದರು.
ಪ್ರತಿಭಟನೆಯಲ್ಲಿ ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ, ಆರ್.ಎಂ. ಮಂಜುನಾಥ ಗೌಡ, ಡಿಕೆಶಿ ಅಭಿಮಾನಿಗಳ ಸಂಘದ ಅದ್ಯಕ್ಷ ಮೋಹನ್, ಪಾಲಿಕೆ ಸದಸ್ಯ ಯೋಗೀಶ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಪಿ ಗಿರಿಶ್, ಕುಮರೇಶ್, ಚಿ.ಸಂದೇಶ, ನಾಗರಾಜ್, ಮಲ್ಲಿಕಾರ್ಜುನ ಹಕ್ರೆ ಮೊದಲಾದವರು ಪಾಲ್ಗೊಂಡಿದ್ದರು.
ಇದನ್ನೂ ಓದಿ | Viral Video: ಅಸಭ್ಯ ವರ್ತನೆ; ಪ್ರತಿಭಟನೆ ವೇಳೆ ಪೊಲೀಸರ ಮೇಲೆ ಉಗುಳಿದ ಕಾಂಗ್ರೆಸ್ ನಾಯಕಿ