ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (SCDCC Bank Shivamogga))ನ ಅಧ್ಯಕ್ಷ ಆರ್.ಎಂ. ಮಂಜುನಾಥ್ ಗೌಡ (RM Manjunatha Gowda) ಅವರ ತೀರ್ಥಹಳ್ಳಿ ಮತ್ತು ಶಿವಮೊಗ್ಗ (Teerthahalli and Shivamogga houses) ನಗರದ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ (Enforcement Directorate-ED) ಅಧಿಕಾರಿಗಳು ಗುರುವಾಗ ಬೆಳಗ್ಗೆ ಏಕಕಾಲದಲ್ಲಿ ದಾಳಿ (ED Raid) ನಡೆಸಿದ್ದಾರೆ.
ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷರೂ ಆಗಿರುವ ಕಾಂಗ್ರೆಸ್ ಮುಖಂಡ ಮಂಜುನಾಥ್ ಗೌಡ ಅವರು ವಾರದ ಹಿಂದಷ್ಟೇ ಶಿವಮೊಗ್ಗ ಜಿಲ್ಲಾ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು. ಅವರಿಗೆ ಸಂಬಂಧಿಸಿದ ಹಳೆ ಪ್ರಕರಣವೊಂದರಲ್ಲಿ ಈ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.
ಗುರುವಾರ ಬೆಳಗ್ಗೆಯೇ ಅಧಿಕಾರಿಗಳು ತೀರ್ಥಹಳ್ಳಿಯ ಎರಡು ಮನೆಗಳು ಹಾಗೂ ಶಿವಮೊಗ್ಗದ ಶರಾವತಿ ನಗರದಲ್ಲಿರುವ ಮನೆಗೆ ಮನೆಗಳಿಗೆ ಏಕಕಾಲದಲ್ಲಿ ದಾಳಿ ಮಾಡಿದ್ದಾರೆ.
ತೀರ್ಥಹಳ್ಳಿ ಪಟ್ಟಣದ ಬೆಟ್ಟಮಕ್ಕಿಯಲ್ಲಿ ಒಂದು ಮನೆ ಇದ್ದರೆ, ತೀರ್ಥಹಳ್ಳಿಯ ಕಲ್ಲುಕೊಪ್ಪದಲ್ಲೂ ಒಂದು ಮನೆ ಇದೆ. ಶಿವಮೊಗ್ಗದ ಶರಾವತಿ ನಗರದಲ್ಲಿರುವ ನಿವಾಸದ ಮನೆ ಮೇಲೂ ದಾಳಿ ನಡೆದಿದೆ.
ಸುಮಾರು 15 ಅಧಿಕಾರಿಗಳ ತಂಡ ನಾಲ್ಕೈದು ವಾಹನಗಳಲ್ಲಿ ಬಂದಿದ್ದು, ಶಸ್ತ್ರ ಸಜ್ಜಿತ ಪೊಲೀಸರು ಮನೆಯನ್ನು ಸುತ್ತುವರಿದಿದ್ದಾರೆ. ಆರ್.ಎಂ. ಮಂಜುನಾಥ್ ಗೌಡ ಅವರ ನಿವಾಸಗಳಲ್ಲಿ ಮಹತ್ವದ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎನ್ನಲಾಗಿದೆ.
ಇದಲ್ಲದೆ ತೀರ್ಥಹಳ್ಳಿ ತಾಲೂಕಿನ ಹಣಗೆರೆಕಟ್ಟೆ ಸಮೀಪದ ಕರೆಕುಚ್ಚಿ, ಶಿವಮೊಗ್ಗದ ಶಾಂತಿನಗರ ಸೇರಿ ಹಲವು ಕಚೇರಿಗಳ ಮೇಲೂ ಇ.ಡಿ. ಅಧಿಕಾರಿಗಳು ದಾಳಿ ಮಾಡಿದ್ದು ಪರಿಶೀಲನೆ ನಡೆಸಿದ್ದಾರೆ.
ನಕಲಿ ಚಿನ್ನ ಅಡಮಾನ ಪ್ರಕರಣದ ಹಿನ್ನೆಲೆಯಲ್ಲಿ ದಾಳಿ?
ಸುಮಾರು 11 ವರ್ಷಗಳ ಹಿಂದೆ ಬೆಳಕಿಗೆ ಬಂದಿದ್ದ ನಕಲಿ ಚಿನ್ನ ಅಡಮಾನ ಪ್ರಕರಣ ತನಿಖೆ ಹಿನ್ನೆಲೆಯಲ್ಲಿ ಇ.ಡಿ. ದಾಳಿ ನಡೆದಿದೆ ಎಂದು ತಿಳಿದುಬಂದಿದೆ.
2012ರಿಂದ 2014ರ ಅವಧಿಯಲ್ಲಿ ನಕಲಿ ಚಿನ್ನ ಇಟ್ಟು ಸಾಲ ಪಡೆದ ಪ್ರಕರಣ ನಡೆದಿತ್ತು. ಡಿಸಿಸಿ ಬ್ಯಾಂಕ್‌ನ ನಗರ ಶಾಖೆಯಲ್ಲಿ ಈ ಅಕ್ರಮ ನಡೆದಿದ್ದು, ಅದರ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗಳೇ ಶಾಮೀಲಾಗಿರು ಆರೋಪ ಕೇಳಿಬಂದಿತ್ತು. ಅಂದು ಅಧ್ಯಕ್ಷರಾಗಿದ್ದ ಆರ್ ಎಂ ಮಂಜುನಾಥ ಗೌಡ, ಉಪಾಧ್ಯಕ್ಷ, ಶಾಖಾ ವ್ಯವಸ್ಥಾಪಕಿ, ಪ್ರಧಾನ ವ್ಯವಸ್ಥಾಪಕ ಸೇರಿದಂತೆ 6-7 ಜನರ ಬಂಧನವಾಗಿತ್ತು.
ಇದನ್ನೂ ಓದಿ: ನನ್ನ ಮುಖವೇನಾದರೂ ಅದಾನಿ ಮುಖದಂತೆಯೇ ಇದೆಯಾ?; ಇ.ಡಿ. ದಾಳಿ ಬಗ್ಗೆ ವ್ಯಂಗ್ಯ ಮಾಡಿದ ಲಾಲು ಪುತ್ರ ತೇಜಸ್ವಿ ಯಾದವ್
ಈ ಪ್ರಕರಣದ ತನಿಖೆ ಈಗಲೂ ಮುಂದುವರಿಯುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಕೆಲವೊಂದು ಮಾಹಿತಿಗಳನ್ನು ನೀಡುವಂತೆ ಜಾರಿ ನಿರ್ದೇಶನಾಲಯ ಕಳೆದ ವಾರ ಕೇಳಿತ್ತು. ಅವ್ಯವಹಾರ ನಡೆದ 32 ಖಾತೆಗಳ ಮಾಹಿತಿ, ಖಾತೆದಾರರ ಮಾಹಿತಿ, ಅವರ ಕೆವೈಸಿ ಮಾಹಿತಿ ಸೇರಿದಂತೆ ಆರೋಪಿಗಳ ಮಾಹಿತಿ ನೀಡುವಂತೆ ಡಿಸಿಸಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕರಿಗೆ ಸೂಚಿಸಿತ್ತು. ಮೂರು ದಿನಗಳ ಒಳಗಾಗಿ ಮಾಹಿತಿ ನೀಡುವಂತೆ ಇ.ಡಿ ಆದೇಶಿಸಿತ್ತು. ಇದೀಗ ಅವರು ಕೊಟ್ಟ ಮಾಹಿತಿಯ ಪರಿಶೀಲನೆಯ ಬಳಿಕ ಮಂಜುನಾಥ ಗೌಡ ಅವರ ನಿವಾಸದ ಮೇಲೆ, ಕಚೇರಿಗಳ ಮೇಲೆ ದಾಳಿ ನಡೆದಿದೆ.