ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ 2 ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ರೆಡ್ ಅಲರ್ಟ್ ಸಹ ಘೋಷಿಸಲಾಗಿದೆ. ತುರ್ತು ಪರಿಹಾರ ಕಾರ್ಯ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಚಿವ ನಾರಾಯಣಗೌಡ ಸೂಚನೆ ನಿಡಿದ್ದಾರೆ.
ಮಳೆಯಿಂದಾಗಿ ಜನಜೀವನಕ್ಕೆ ತೊಂದರೆಯಾಗಿದ್ದು, ತುರ್ತಾಗಿ ಎಲ್ಲ ರೀತಿಯ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೇನೆ. ಈ ಬಗ್ಗೆ ನಾನು ಜಿಲ್ಲಾಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಎಲ್ಲಾ ರೀತಿಯ ಪರಿಹಾರ ಕಾರ್ಯಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಲಾಗುವುದು. ಪರಿಹಾರ ಕಾರ್ಯಗಳು ಈಗಾಗಲೇ ಪ್ರಾರಂಭಗೊಂಡಿವೆ ಎಂದು ತಿಳಿಸಿದ್ದಾರೆ.
ಮಂಡ್ಯ ಜಿಲ್ಲೆಯಾದ್ಯಂತ ಹಾಗೂ ನನ್ನ ಮತಕ್ಷೇತ್ರವಾದ ಕೆ.ಆರ್. ಪೇಟೆಯಲ್ಲಿಯೂ ನಿರಂತರವಾಗಿ ಮಳೆ ಬೀಳುತ್ತಿದೆ. ಮಳೆಯಿಂದಾಗಿ ಹಾನಿಗೊಳಗಾಗಿರುವ ಪ್ರದೇಶಗಳಿಗೆ ಖುದ್ದು ಭೇಟಿ ನೀಡುತ್ತಿರುವುದರಿಂದ ಮೇ 21 ರಂದು ಶಿವಮೊಗ್ಗ ಜಿಲ್ಲೆಗೆ ಪ್ರವಾಸ ಕೈಗೊಳ್ಳತ್ತಿದ್ದೇನೆ. 3 ದಿನ ಅಲ್ಲಿಯೇ ವಾಸ್ತವ್ಯ ಹೂಡಿ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಕೈಗೊಂಡಿರುವ ತುರ್ತು ಪರಿಹಾರ ಕಾರ್ಯಗಳನ್ನು ಪರಿಶೀಲಿಸಲಿದ್ದೇನೆ.
ಶಿವಮೊಗ್ಗ ಜಿಲ್ಲೆಯ ಮಾನ್ಯ ಸಂಸದರು, ಶಾಸಕರು, ಜಿಲ್ಲಾಧಿಕಾರಿಗಳು, ಉಪ-ವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರರ ಸಮನ್ವಯದೊಂದಿಗೆ ತುರ್ತು ಪರಿಹಾರ ಕಾರ್ಯಗಳನ್ನು ಒದಗಿಸಲಾಗುತ್ತದೆ. ಈ ಕಾರ್ಯಕ್ಕಾಗಿ, ನನ್ನ ಕಛೇರಿಯಲ್ಲಿ ವಿಶೇಷ ಕರ್ತವ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಿ. ಲೋಹಿತ್ ಅವರನ್ನು ಸಮನ್ವಯಾಧಿಕಾರಿಯಾಗಿ ನೇಮಿಸಲಾಗಿದೆ. ಅವರು ಇವರು ಈಗಾಗಲೇ ಕಾರ್ಯ ಆರಂಭಿಸಿದ್ದಾರೆ. ತೊಂದರೆಗೀಡಾಗಿರುವ ಜನರು ಪರಿಹಾರ ಕಾರ್ಯದ ನೆರವಿಗೆ ಡಿ.ಲೋಹಿತ್ ಅವರನ್ನು ಸಂಪರ್ಕಿಸಬಹುದು (9535885336) ಎಂದು ನಾರಾಯಣಗೌಡ ತಿಳಿಸಿದ್ದಾರೆ.