ಶಿವಮೊಗ್ಗ: ರಾಜ್ಯದಲ್ಲಿ ವಾತಾವರಣ ಕಲುಷಿತವಾಗಿದ್ದು, ಕಾಣದ ಕೈಗಳ ಹಿಡಿತದಲ್ಲಿ ರಾಜ್ಯ ಸರ್ಕಾರವಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (H.D. Kumaraswamy) ತಿಳಿಸಿದ್ದಾರೆ.
ಜೆಡಿಎಸ್ ವತಿಯಿಂದ ಆಯೋಜಿಸಿರುವ ಜನತಾ ಜಲಧಾರೆ ಯಾತ್ರೆಯ ಅಂಗವಾಗಿ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಹಳೇ ಹುಬ್ಬಳ್ಳಿಯಲ್ಲಿ ಏಪ್ರಿಲ್ 16ರಂದು ನಡೆದ ಗಲಭೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ನಾನು ಸಲಹೆ ನೀಡಿದ್ದೆ.
ಈಗಾಗಲೆ ರಾಜ್ಯದಲ್ಲಿ ಕಲುಷಿತ ವಾತಾವರಣ ನಿರ್ಮಾಣವಾಗಿದೆ. ಇನ್ನೂ ಒಂದು ವರ್ಷ ಪೂರ್ಣ ಇದೇ ನಡೆಯುತ್ತದೆ ಎಂದು ಈ ಮೊದಲೇ ನಾನು ಹೇಳಿದ್ದೆ. ರಾಜ್ಯದಲ್ಲಿ ಬೆಂಕಿ ಹಚ್ಚಲು ಬಿಜೆಪಿ ಪಕ್ಷ ಹೊರಟಿದೆ. ಕಾಣದ ಕೈಗಳು ಹೇಳಿದಂತೆ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದೆ. ಅಷ್ಟೇ ಅಲ್ಲದೆ ಅದಕ್ಕೆ ಕಾಂಗ್ರೆಸ್‌ನ ಒಂದು ಗುಂಪು ಸಾಥ್ ಕೊಟ್ಟಿದೆ ಎಂದು ಗಂಭೀರ ಆರೋಪ ಮಾಡಿದರು. ಪ್ರಚೋದನಕಾರಿ ಹೇಳಿಕೆ ನೀಡುವವರನ್ಬು ಮೊದಲು ಬಂಧಿಸಬೇಕು ಎಂದು ಹಿಂದೂಪರ ಮುಖಂಡರ ಕುರಿತು ಆಕ್ರೋಶ ವ್ಯಕ್ತಪಡಿಸಿದ ಕುಮಾರಸ್ವಾಮಿ, ಇವರೇನು ಹಿಂದು ಧರ್ಮ ಗುತ್ತಿಗೆ ಪಡೆದಿದ್ದಾರೆಯೆ? ಎಂದರು.
ಕಾಂಗ್ರೆಸ್ ನಾಯಕರು ಚಿನ್ನವೇ?
ರಾಜ್ಯದಲ್ಲಿ ಗುತ್ತಿಗೆ ಕಾಮಗಾರಿಗಳ ಶೇಕಡಾ 65 ಮಧ್ಯವರ್ತಿಗಳ ಪಾಲಾಗುತ್ತಿದೆ ಎಂದಿರುವ ಕುಮಾರಸ್ವಾಮಿ, ಕಾಂಗ್ರೆಸ್ ನಾಯಕರೇನು ಅಪ್ಪಟ ಚಿನ್ನವೇ? ಎಂದಿದ್ದಾರೆ. ನಾನು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವಾಗ ಸಿದ್ದರಾಮಯ್ಯ ಮತ್ತು ಅವರ 80 ಶಾಸಕರು ಮನೆಯಲ್ಲಿ ಮಲಗಿದ್ದರು. ಕಾಂಗ್ರೆಸ್ ಸರಕಾರದ ಅವಧಿಯಲ್ಲಿಯೂ ಈ ವ್ಯವಹಾರ ನಡೆದಿದೆ. ಆದರೆ ಈಗ ಬಿಜೆಪಿ ಸರ್ಕಾರದ ಸಮಯದಲ್ಲಿ. ಪರ್ಸಂಟೇಜ್ ವಿರುದ್ದ ಹೋರಾಟ ನೆನಪಾಗಿದೆ ಎಂದರು. 40% ಕಮಿಷನ್ ಆರೋಪದಲ್ಲಿ ಕೆ.ಎಸ್. ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ಬಂಧಿಸುವ ಅಗತ್ಯವಿಲ್ಲ ಎಂದು ಕುಮಾರಸ್ವಾಮಿ ಪುನರುಚ್ಛರಿಸಿದ್ದಾರೆ. ಈ ಹಿಂದೆಯೂ ಈಶ್ವರಪ್ಪ ಕುರಿತು ಹೇಳಿಕೆ ನೀಡಿದ್ದಕ್ಕೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದರು. ಮತ್ತೊಮ್ಮೆ ತಮ್ಮ ಮಾತನ್ನು ಸಮರ್ಥನೆ ಮಾಡಿಕೊಂಡಿರುವ ಕುಮಾರಸ್ವಾಮಿ, ಬಿಜೆಪಿ ಪರವಾಗಿ ನಾನು ಇಲ್ಲ. ಸತ್ಯಾಸತ್ಯತೆ ಹೊರಗೆ ಬರಬೇಕು. ಈ ಹಿನ್ನೆಲೆಯಲ್ಲಿ ಈಶ್ವರಪ್ಪ ರಾಜೀನಾಮೆ ಕೊಡಬೇಕಿತ್ತು. ಈಗ ಅವರ ಬಂಧನ ವಿಚಾರ ಅಗತ್ಯ ಇಲ್ಲ ಎಂದರು.
ಹೆಚ್ಚಿನ ಓದಿಗಾಗಿ: ಎತ್ತಿನ ಹೊಳೆ ಯೋಜನೆಯಲ್ಲಿ ನೀರು ಬಂದರೆ ಅದೃಷ್ಟ: ದೇವೇಗೌಡ ವ್ಯಂಗ್ಯ